5ಗಂಟೆ ಹೋರಾಟ ಬಳಿಕ ಟ್ರಾನ್ಸ್‌ಫಾರ್ಮರ್ ತೆರವು

ಶುಕ್ರವಾರ, ಜೂಲೈ 19, 2019
26 °C

5ಗಂಟೆ ಹೋರಾಟ ಬಳಿಕ ಟ್ರಾನ್ಸ್‌ಫಾರ್ಮರ್ ತೆರವು

Published:
Updated:

ಬ್ರಹ್ಮಾವರ: ನಗರದ ಮಧ್ಯಭಾಗದಲ್ಲಿ ಖಾಸಗಿ ಕಟ್ಟಡವೊಂದಕ್ಕೆ ಅನಧಿಕೃತವಾಗಿ ಅಳವಡಿಸಿದ್ದ ಟ್ರಾನ್ಸ್‌ಫಾರ್ಮರ್‌ನಿಂದ ವಿದ್ಯುತ್ ತಗುಲಿ ಬುಧವಾರ ಎರಡು ಹಸುಗಳು ಮೃತಪಟ್ಟಿವೆ. ಈ ಹಿನ್ನೆಲೆಯಲ್ಲಿ ಸಂಭಾವ್ಯ ಅಪಾಯ ತಪ್ಪಿಸುವ ಸಲುವಾಗಿ ಸ್ಥಳೀಯರು ಸತತ ಐದು ಗಂಟೆ ಪ್ರತಿಭಟನೆ ನಡೆಸಿದ ಪರಿಣಾಮ ಅನಧಿಕೃತ ಟ್ರಾನ್ಸ್‌ಫಾರ್ಮರ್ ತೆರವುಗೊಳಿಸಲಾಯಿತು.

ಬುಧವಾರ ಬೆಳಿಗ್ಗೆ 11 ಗಂಟೆಗೆ ನಗರದ ಬಸ್ ನಿಲ್ದಾಣದಿಂದ ಬ್ರಹ್ಮಾವರ ಹೆಬ್ರಿ ರಾಜ್ಯ ರಸ್ತೆಯಲ್ಲಿರುವ ಜಯರಾಂ ಶೆಟ್ಟಿ ಅವರಿಗೆ ಸೇರಿದ ಮೇದಿನಿ ಕಟ್ಟಡಕ್ಕೆ ಅಳವಡಿಸಲಾದ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಿಂದ ವಿದ್ಯುತ್ ಶಾಕ್ ಹೊಡೆದು ನಾಗೇಶ್ ಪೈ ಮತ್ತು ರೇಣುಕಾ ಅವರಿಗೆ ಸೇರಿದ ಎರಡು ಹಸುಗಳು ಸ್ಥಳದಲ್ಲಿಯೇ ಮೃತಪಟ್ಟವು. ಈ ಪೈಕಿ ಒಂದು ಹಸು ತುಂಬು ಗಬ್ಬ ಧರಿಸಿತ್ತು. 

`ಸಾರ್ವಜನಿಕ ಸ್ಥಳದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದೆ. ಸುತ್ತ ಬೇಲಿಯನ್ನೂ ಮಾಡಿಲ್ಲ~ ಎಂದು ಸ್ಥಳೀಯರು ದೂರಿದರು. ಅಧಿಕಾರಿಗಳು ಇದಕ್ಕೆ ಒಪ್ಪದ ಕಾರಣ ಜನರು ಪ್ರತಿಭಟನೆ ತೀವ್ರಗೊಳಿಸಿದರು. ಕೊನೆಗೆ ಮೆಸ್ಕಾಂನ ಉನ್ನತ ಅಧಿಕಾರಿಗಳಾದ ದಿವಾಕರ ಐತಾಳ್, ವಿದ್ಯುತ್ ಪರಿವೀಕ್ಷಣಾಲಯದ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರ್ ನೇತ್ರಾವತಿ, ಕಿರಿಯ ಎಂಜಿನಿಯರ್ ದಯಾನಂದ್ ಸ್ಥಳಕ್ಕೆಆಗಮಿಸಿದರು.

ಗುತ್ತಿಗೆದಾರನ ಉದ್ಧಟತನ:  ಈ ಟ್ರಾನ್ಸ್‌ಫಾರ್ಮರ್ ಅಳವಡಿಕೆ ಗುತ್ತಿಗೆ ಪಡೆದ ಹಂದಾಡಿಯ ಗಣೇಶ್ ಪ್ರಸಾದ್ ಶೆಟ್ಟಿ, `ಟ್ರಾನ್ಸ್‌ಫಾರ್ಮರ್‌ನಲ್ಲಿ ದೋಷವಿಲ್ಲ. ಯಾರು ಬೇಕಾದರೂ ಹತ್ತಿ ನೋಡಿ. ವಿದ್ಯುತ್ ಸಂಪರ್ಕ ನೀಡುತ್ತೇನೆ~ ಎಂದು ಉದ್ಧಟತನದ ಹೇಳಿಕೆ ನೀಡಿದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು.

ಊಟ ಬಿಟ್ಟು ಪ್ರತಿಭಟನೆ:  ಮೂಕ ಪ್ರಾಣಿಗಳ್ತ ಸ್ಥಿತಿ ತಮಗೂ ಬರಬಹುದು ಎಂದು ಭಾವಿಸಿದ ಸ್ಥಳೀಯರು ಊಟ ತಿಂಡಿ ಬಿಟ್ಟು ಸಂಜೆ ನಾಲ್ಕು ಗಂಟೆಯ ವರೆಗೆ ಹೋರಾಟ ನಡೆಸಿದರು. ಬೇಸತ್ತ ಅಧಿಕಾರಿಗಳು  ಕೊನೆಗೂ ಟ್ರಾನ್ಸ್‌ಫಾರ್ಮರ್‌ನ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು.

ಪರಿಹಾರ: ಕಟ್ಟಡದ ಮಾಲಿಕ, ರೇಣುಕಾಗೆ ಸೇರಿದ ಗರ್ಭಿಣಿ ಹಸುವಿಗೆ ರೂ 15 ಸಾವಿರ ಹಾಗೂ ನಾಗೇಶ್ ಪೈ ಹಸುವಿಗೆ ರೂ 10 ಸಾವಿರ ಪರಿಹಾರ ನೀಡಿದರು. ನಾಗೇಶ್ ಪೈ ಪರಿಹಾರ ಹಣವನ್ನು ನೀಲಾವರ ಗೋಶಾಲೆಗೆ ದಾನವಾಗಿ ನೀಡಿದರು.

ಸತತ ಐದು ಗಂಟೆ ಹೋರಾಟಕ್ಕೆ ಫಲ ಸಿಕ್ಕಿತಾದರೂ ಟ್ರಾನ್ಸ್‌ಫಾರ್ಮರ್ ಪಕ್ಕದಲ್ಲಿ ಹೆಣವಾಗಿದ್ದ ಹಸುಗಳ ಸ್ಥಿತಿ ಕರುಳು ಚುಚ್ಚುವಂತಿತ್ತು.

ಟ್ರಾನ್ಸ್‌ಫಾರ್ಮರ್ ಅನಧಿಕೃತ

`ಕಟ್ಟಡದ ಒಳಗೆ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಸೂಚಿಸಲಾಗಿತ್ತು. ಅದೇ ಪ್ರಕಾರ ಟ್ರಾನ್ಸ್‌ಫಾರ್ಮರ್‌ನ್ನು ಅಳವಡಿಸಲಾಗಿತ್ತು. ಆದರೆ, ಕೆಲವು ತಿಂಗಳ ಬಳಿಕ ಮೆಸ್ಕಾಂ ಅಧಿಕಾರಿಗಳ ಸಹಾಯದಿಂದ ಟ್ರಾನ್ಸ್‌ಫಾರ್ಮರ್ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ನಮ್ಮಿಂದ ಅನುಮತಿಯನ್ನು ಪಡೆದಿಲ್ಲ. ಇಂತಹ ಸಂದರ್ಭ ಮೆಸ್ಕಾಂ ವಿರುದ್ಧವೂ ದಂಡ ವಿಧಿಸಲಾಗುತ್ತದೆ~ ಎಂದು ವಿದ್ಯುತ್ ಪರಿವೀಕ್ಷಣಾಲಯದ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರ್ ನೇತ್ರಾವತಿ `ಪ್ರಜಾವಾಣಿ~ಗೆ  ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry