ಶನಿವಾರ, ಮೇ 28, 2022
27 °C

5ರಂದು ಮೈಸೂರು ವಿವಿ ಘಟಿಕೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 93ನೇ ವಾರ್ಷಿಕ ಘಟಿಕೋತ್ಸವ ಜುಲೈ 5ರಂದು ಬೆಳಿಗ್ಗೆ 10 ಗಂಟೆಗೆ ವಿವಿಯ ಕಾರ್ಯಸೌಧವಾದ ಕ್ರಾಫರ್ಡ್ ಭವನದಲ್ಲಿ ನಡೆಯಲಿದೆ.`ಘಟಿಕೋತ್ಸವದಲ್ಲಿ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ, ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಹೊ. ಶ್ರೀನಿವಾಸಯ್ಯ ಹಾಗೂ ಖ್ಯಾತ ಕಾನೂನು ತಜ್ಞ ಟಿ.ಕೆ. ವಿಶ್ವನಾಥನ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ.ಎಂ.ಎಂ. ಪಲ್ಲಂ ರಾಜು ಘಟಿಕೋತ್ಸವ ಭಾಷಣ ಮಾಡುವರು. ಕುಲಾಧಿಪತಿಯೂ ಆದ, ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಹಾಜರಿರುವರು' ಎಂದು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಘಟಿಕೋತ್ಸವದಲ್ಲಿ 21,038 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುತ್ತದೆ. ಇದರಲ್ಲಿ 11,758 ಮಹಿಳೆಯರು ಹಾಗೂ 9,280 ಪುರುಷರು ಇದ್ದಾರೆ. 50 ವಿವಿಧ ವಿಷಯಗಳಲ್ಲಿ 363 ಅಭ್ಯರ್ಥಿಗಳಿಗೆ ಪಿಎಚ್.ಡಿ ಪದವಿ ನೀಡಲಾಗು ತ್ತದೆ. ಇದರಲ್ಲಿ 132 ಮಹಿಳೆಯರು ಹಾಗೂ 231 ಪುರುಷರು ಇದ್ದಾರೆ. ಒಟ್ಟು 296 ಪದಕ ಹಾಗೂ 154 ಬಹುಮಾನಗಳನ್ನು 184 ಅಭ್ಯರ್ಥಿಗಳು ಪಡೆಯಲಿದ್ದಾರೆ. ಇವರಲ್ಲಿ 104 ಮಹಿಳೆಯರು. 3,278 ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಪಡೆಯಲಿದ್ದು, ಇವರಲ್ಲಿ 1,833 ಮಹಿಳೆಯರು. 16,947 ಅಭ್ಯರ್ಥಿಗಳು ಪದವಿ ಪಡೆಯಲಿದ್ದು, ಇವರಲ್ಲಿ 9,793 ಮಹಿಳೆಯರು ಇದ್ದಾರೆ.ಪ್ರತಿ ವಿಭಾಗದ ಐವರು ಟಾಪರ್‌ಗಳಿಗೆ ಅಂದು ಬೆಳಿಗ್ಗೆ 10 ಗಂಟೆಗೆ ಪದವಿ ಪ್ರದಾನ ಮಾಡಲಾಗುತ್ತದೆ. ಉಳಿದವರಿಗೆ ಮಧ್ಯಾಹ್ನ 3.30 ಗಂಟೆಗೆ ಕ್ರಾಫರ್ಡ್ ಭವನದಲ್ಲಿ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಹಾಗೂ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಪದವಿ ಪ್ರದಾನ ನಡೆಯಲಿದೆ' ಎಂದು ವಿವರಿಸಿದರು.ಮಿನಿ ವಿಶ್ವವಿದ್ಯಾನಿಲಯ: `ಚಾಮರಾಜನಗ ರದಲ್ಲಿ ಮಿನಿ ವಿಶ್ವವಿದ್ಯಾನಿಲಯವನ್ನು ಅಭಿವೃದ್ಧಿಪಡಿಸುವ ಉದ್ದೇಶವಿದೆ. ಅಲ್ಲಿ 47 ಎಕರೆ ಜಾಗವಿದ್ದು, ಅಭಿವೃದ್ಧಿಗಾಗಿ ರೂ 25 ಕೋಟಿ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ವರ್ಷ ಅಲ್ಲಿಯ ಸರ್ಕಾರದ ಕಟ್ಟಡದಲ್ಲಿ ಇಂಗ್ಲಿಷ್, ಪತ್ರಿಕೋದ್ಯಮ ಹಾಗೂ ಅರ್ಥಶಾಸ್ತ್ರ ಕೋರ್ಸ್‌ಗಳನ್ನು ಆರಂಭಿಸಲಾಗುತ್ತದೆ. ಜುಲೈ 6ರಂದು ಅಲ್ಲಿ ಮಹಿಳೆಯರ ವಸತಿನಿಲಯದ ಕಟ್ಟಡಕ್ಕಾಗಿ ಶಂಕುಸ್ಥಾಪನೆ ಸಮಾರಂಭ ನೆರವೇರಲಿದೆ. ಇದಕ್ಕಾಗಿ ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ ಹಾಗೂ ಸಂಸದ ಆರ್.  ಧ್ರುವನಾರಾಯಣ ಅವರು ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ 25 ಲಕ್ಷ ಅನುದಾನ ನೀಡಿದ್ದಾರೆ' ಎಂದು ಹೇಳಿದರು.ವಿಜ್ಞಾನ ಭವನ ಉದ್ಘಾಟನೆ: `ಕೇಂದ್ರ ಸರ್ಕಾರ ದೇಶದ 5 ವಿವಿಗಳಿಗೆ ಇನ್‌ಸ್ಟಿಟ್ಯೂಷನ್ ಆಫ್ ಎಕ್ಸ್‌ಲೆನ್ಸ್ (ಐಒಇ) ಯೋಜನೆಗೆ ರೂ 100 ಕೋಟಿ ಅನುದಾನ ನೀಡಿದೆ. ಯೂನಿವರ್ಸಿಟಿ ಪೊಟೆನ್ಷಿಯಲ್ ಎಕ್ಸಲೆನ್ಸ್ (ಯುಪಿಇ) ಯೋಜನೆಗೆ ರೂ 50 ಕೋಟಿ ಹಾಗೂ ಪರ್ಸ್ (ಪ್ರಮೋಷನ್ ಆಫ್ ಯೂನಿರ್ಸಿಟಿ ರಿಸರ್ಚ್ ಅಂಡ್ ಸೈಂಟಿಕ್) ಯೋಜನೆಗೆ ರೂ 9 ಕೋಟಿ ಅನುದಾನ ನೀಡಿದೆ. ಇವುಗಳೆಲ್ಲ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಯೋಜನೆಗಳು. ಇವೆಲ್ಲ ಒಂದೇ ಕಟ್ಟಡದ ಅಡಿ ಕಾರ್ಯನಿರ್ವಹಿಸಲು ನೆರವಾಗುವಂತೆ ಮೈಸೂರು-ಹುಣಸೂರು ರಸ್ತೆಯಲ್ಲಿಯ ವಿಜ್ಞಾನ ಭವನ ಸಿದ್ಧಗೊಂಡಿದೆ. ಇದನ್ನು ಘಟಿಕೋತ್ಸವ ದಿನ ಪಲ್ಲಂ ರಾಜು ಉದ್ಘಾಟಿಸಲಿದ್ದಾರೆ. ಇದರೊಂದಿಗೆ ನೆಟ್ ಪರೀಕ್ಷೆ, ನೋಡೆಲ್ ಕಚೇರಿಗಾಗಿ `ಮೌಲ್ಯ ಭವನ' ಕಟ್ಟಡ ಕುಕ್ಕರಹಳ್ಳಿ ಕೆರೆ ಎದುರು ತಲೆ ಎತ್ತಲಿದೆ. ಇದರ ಶಂಕುಸ್ಥಾಪನೆ ಕೂಡಾ ಅಂದು ನೆರವೇರಲಿದೆ' ಎಂದರು.`ಕುಕ್ಕರಹಳ್ಳಿ ಕೆರೆಗೆ ಸಂಬಂಧಿಸಿ ಸಮಿತಿಯ ಸಭೆ ಕರೆದು ಚರ್ಚಿಸುವೆ' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕುಲಸಚಿವರಾದ ಪ್ರೊ.ಸಿ. ಬಸವರಾಜು, ಪ್ರೊ. ಡಿ. ಸೃಜಯ್ ದೇವರಾಜ ಅರಸ್ ಅವರು ಹಾಜರಿದ್ದರು.ಕೊನೆಯ ದಿನವೂ ಅವಕಾಶ

ವಿವಿಯ ಯಾವುದೇ ಹುದ್ದೆ ನೇಮಕಗೊಳಿಸುವ ಅಧಿಕಾರ ಕುಲಪತಿಯಾದವರಿಗೆ ಕೊನೆಯ ದಿನವೂ ಅವಕಾಶ ಇರುತ್ತದೆ' ಎಂದು ಪ್ರೊ.ರಂಗಪ್ಪ ಪ್ರತಿಪಾದಿಸಿದರು.ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಅವರ `ಕುಲಪತಿಗಳಿಗೆ ಅವಧಿ ಮುಗಿಯುವ 6 ತಿಂಗಳ ಮೊದಲು ಯಾವುದೇ ನೇಮಕಾತಿಯ ಅಧಿಕಾರ ಇರುವುದಿಲ್ಲ' ಎಂಬ ಹೇಳಿಕೆಗೆ, ರಂಗಪ್ಪ ಈ ಪ್ರತಿಕ್ರಿಯೆ ನೀಡಿದರು.`ನಿವೃತ್ತಿಯ ಅಂಚಿನಲ್ಲಿದ್ದಾಗ ಯಾವುದೇ ಹುದ್ದೆಗಳನ್ನು ನೇಮಿಸಬಾರದೆಂಬ ಕಾನೂನು ವಿವಿಯಲ್ಲಿ ಇಲ್ಲ. ಕರ್ನಾಟಕ ರಾಜ್ಯ ಮುಕ್ತ ವಿವಿಯ ಕುಲಪತಿಯಾಗಿದ್ದಾಗ ಅವಧಿ ಮುಗಿಯುವ ಮುನ್ನ ವಿವಿಧ ಹುದ್ದೆಗಳಿಗಾಗಿ ಸಂದರ್ಶನ ನಡೆಸಿದ್ದೆ' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.`ಕುಲಸಚಿವ (ಆಡಳಿತ) ಪ್ರೊ.ಸಿ. ಬಸವರಾಜು ಅವರ ನೇಮಕಾತಿ ನಿಯಮದಡಿ ನಡೆದಿದೆ. 2 ವರ್ಷಗಳ ಪ್ರೊಬೆಷನ್ ನಂತರ ಕಾಯಂಗೊಳ್ಳುತ್ತದೆ. ಅವರು ಕಾಯಂಗೊಂಡಾಗ ರಜೆಯಲ್ಲಿದ್ದೆ. ಜತೆಗೆ, ಆಗಿನ ಕುಲಸಚಿವ ಪಿ.ಎಸ್. ನಾಯ್ಕ ಕೂಡಾ ರಜೆಯಲ್ಲಿದ್ದರು. ಆದರೂ, ಈ ಸಂಬಂಧ ದೂರವಾಣಿಯಲ್ಲಿ ಶಿಕ್ಷಣ ಇಲಾಖೆ ಸಂಪರ್ಕಿಸಿದಾಗ 10 ನಿಮಿಷದಲ್ಲಿಯೇ ಬಸವರಾಜು ಅವರ ಪ್ರೊಬೆಷನ್ ಅಂತ್ಯಗೊಂಡ ಆದೇಶದ ಫ್ಯಾಕ್ಸ್ ಬಂತು' ಎಂದು ಅವರು ಹೇಳಿದರು.ಪಿಎಚ್.ಡಿ ಪದವಿ ಸ್ವೀಕರಿಸಲಿರುವ ಸಚಿವರ ಪತ್ನಿ

ಘಟಿಕೋತ್ಸವದಲ್ಲಿ ದೆಹಲಿಯ ಪ್ರೊ.ಮೆಶ್ರಾಂ ಹಾಗೂ ಅವರ ಪುತ್ರಿ ಸ್ವಾತಿ ಮೆಶ್ರಾಂ ಒಟ್ಟಿಗೇ ಪಿಎಚ್.ಡಿ ಪದವಿ ಪಡೆಯಲಿದ್ದಾರೆ.

ಮೆಶ್ರಾಂ ಅವರು ದೆಹಲಿಯ ನಗರ ಯೋಜನಾ ಸಂಸ್ಥೆಯ ಮಾಜಿ ಅಧ್ಯಕ್ಷರು. ಅವರು `ನಗರ ಯೋಜನೆ' ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ ಪಡೆಯಲಿದ್ದಾರೆ. ಜತೆಗೆ, ಅವರ ಪುತ್ರಿ ಕೂಡಾ ಇದೇ ವಿಷಯ ಕುರಿತು ಪಿಎಚ್.ಡಿ ಪಡೆಯಲಿದ್ದಾರೆ.ರಾಜ್ಯ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅವರ ಪತ್ನಿ ಮೋಹನಕುಮಾರಿ ಅವರು `ಮನಶಾಸ್ತ್ರ'ದಲ್ಲಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆಯುವರು. `ಈ ಬಾರಿ ಘಟಿಕೋತ್ಸವದಲ್ಲಿ ಖಾದಿ ಉಡುಪಿಗೆ ವಿದಾಯ ಹೇಳಲಾಗಿದ್ದು, ಯಾವುದೇ ಬಗೆಯ ಬಿಳಿ ಉಡುಪು ಧರಿಸಿ ಅಭ್ಯರ್ಥಿಗಳು ಭಾಗವಹಿಸಬಹುದು' ಎಂದು ಕುಲಪತಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.