5ವರ್ಷಗಳಲ್ಲೇ ಹೆಚ್ಚು ಪಿಎಚ್‌ಡಿ, ಪದವಿ!

ಗುರುವಾರ , ಜೂಲೈ 18, 2019
28 °C
ಪ್ರಜಾವಾಣಿ ವಾರ್ತೆ/ ಸುಭಾಸ ಎಸ್.ಮಂಗಳೂರ

5ವರ್ಷಗಳಲ್ಲೇ ಹೆಚ್ಚು ಪಿಎಚ್‌ಡಿ, ಪದವಿ!

Published:
Updated:

ಮೈಸೂರು: ಐದು ವರ್ಷಗಳ ಅವಧಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಈ ಬಾರಿ ದಾಖಲೆ ಸಂಖ್ಯೆಯ ಅಭ್ಯರ್ಥಿಗಳು ಪಿಎಚ್‌ಡಿ ಹಾಗೂ ವಿವಿಧ ಪದವಿ ಪಡೆದಿದ್ದಾರೆ. ಆ ಮೂಲಕ `ಡಾ' ಕಿರೀಟವನ್ನು ತಮ್ಮ ಹೆಸರಿನ ಆರಂಭದಲ್ಲಿ ಸೇರಿಸಿಕೊಂಡಿದ್ದಾರೆ.ಪ್ರಸಕ್ತ ವರ್ಷ ಬರೋಬ್ಬರಿ 363 ಅಭ್ಯರ್ಥಿಗಳು ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪಡೆದಿದ್ದಾರೆ. ಇದರಲ್ಲಿ 132 ಅಭ್ಯರ್ಥಿಗಳು (ಶೇ 36.4) ಮಹಿಳೆಯರಾಗಿರುವುದು ವಿಶೇಷ. 2009ರಲ್ಲಿ 260, 2010ರಲ್ಲಿ 304, 2011ರಲ್ಲಿ 357 ಹಾಗೂ 2012ರಲ್ಲಿ 298 ಅಭ್ಯರ್ಥಿಗಳು ಪಿಎಚ್‌ಡಿ ಪಡೆದಿದ್ದರು. ಈ ಬಾರಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಲು `ಘಟಿಕೋತ್ಸವ ವಿಳಂಬ'ವೂ ಕಾರಣವಾಗಿದೆ. ಅಲ್ಲದೇ, ವಿಧಾನಸಭೆ ಚುನಾವಣೆಯೂ `ಡಾಕ್ಟರೇಟ್ ಪದವಿ' ಮುಡಿಗೇರಿಸಿಕೊಳ್ಳುವಲ್ಲಿ ನೆರವಾಗಿದೆ.ಸಾಮಾನ್ಯವಾಗಿ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಮೈಸೂರು ವಿ.ವಿ ಘಟಿಕೋತ್ಸವ ನಡೆಯುತ್ತಿತ್ತು. ಆದರೆ, ಈ ಬಾರಿ ಚುನಾವಣೆ ನೀತಿಸಂಹಿತೆ ಹಾಗೂ ಕೇಂದ್ರ ಸಚಿವ ಪಲ್ಲಂ ರಾಜು ಅವರು ಘಟಿಕೋತ್ಸವದಲ್ಲಿ ಭಾಗವಹಿಸುವ ದಿನಾಂಕ ನಿಗದಿಯಾಗದ್ದರಿಂದ ಘಟಿಕೋತ್ಸವ ಮುಂದಕ್ಕೆ ಹೋಗಿತ್ತು.ಅಭ್ಯರ್ಥಿಗಳ ಸಂಭ್ರಮ: ಚಿನ್ನದ ಪದಕ, ನಗದು ಬಹುಮಾನ ಹಾಗೂ ಪಿಎಚ್‌ಡಿ ಪಡೆದ ವಿದ್ಯಾರ್ಥಿಗಳು ಸಂಭ್ರಮದಿಂದ ಎದುರು ನೋಡುವ ಘಳಿಗೆಯೆಂದರೆ ಘಟಿಕೋತ್ಸವ. ಇನ್ನುಳಿದ ವಿದ್ಯಾರ್ಥಿಗಳು ಫಲಿತಾಂಶ ಬಂದಾಗಲೇ ಪದವಿಯ ಕಿರೀಟ ತೊಟ್ಟುಕೊಂಡಿರುತ್ತಾರೆ. `ಈ ವರ್ಷ ಘಟಿಕೋತ್ಸವ ವಿಳಂಬವಾಗುವ ಸೂಚನೆ ಅರಿತ ಅನೇಕರು ಇದೇ ವರ್ಷ ಪಿಎಚ್‌ಡಿ ಪ್ರಬಂಧ ಸಲ್ಲಿಸಿದರೆ ಪದವಿ ಪಡೆಯಬಹುದು.ಒಂದೆರಡು ತಿಂಗಳು ವಿಳಂಬವಾದರೂ ಮತ್ತೊಂದು ವರ್ಷ ಕಾಯಬೇಕಾಗುತ್ತದೆ ಎಂದು ಯೋಚಿಸಿ ಜನವರಿಯಿಂದಲೇ ಪ್ರಬಂಧ ಸಿದ್ಧಪಡಿಸುವಲ್ಲಿ ನಿರತರಾಗಿದ್ದರು. ಅಂತಿಮವಾಗಿ ಪಿಎಚ್‌ಡಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ವರ್ಷ ಸಹಜವಾಗಿ ಪಿಎಚ್‌ಡಿ ಪಡೆಯುವವರ ಸಂಖ್ಯೆ ಕಡಿಮೆ ಆಗಲಿದೆ' ಎಂದು ಪ್ರಾಧ್ಯಾಪಕರೊಬ್ಬರು ಹೇಳುತ್ತಾರೆ.ಈ ಬಗ್ಗೆ ಅಭ್ಯರ್ಥಿಗಳು ಹೇಳುವುದೇ ಬೇರೆ. `ಮೂರು ವರ್ಷ ಗಂಭೀರವಾಗಿ ಅಧ್ಯಯನ ಮಾಡಿ ಪ್ರಬಂಧ ಸಿದ್ಧಪಡಿಸಿದ್ದೇನೆ. ಪಿಎಚ್‌ಡಿ ಪದವಿ ಪೂರೈಸಲು ಕನಿಷ್ಠ ಮೂರು ಹಾಗೂ ಗರಿಷ್ಠ ನಾಲ್ಕು ವರ್ಷ ಅವಧಿ ಇರುತ್ತದೆ. ಆರಂಭದಿಂದಲೇ ಕ್ಷೇತ್ರ ಕಾರ್ಯ ಕೈಗೊಂಡದ್ದರಿಂದ, ಪ್ರಬಂಧ ಬೇಗನೆ ಸಿದ್ಧವಾಯಿತು. ಈ ವರ್ಷ ಅಲ್ಲದಿದ್ದರೂ ಮುಂದಿನ ವರ್ಷ ಪದವಿ ಪಡೆಯುತ್ತಿದ್ದೆ' ಎಂದು ಅಭ್ಯರ್ಥಿಯೊಬ್ಬರು ಹೇಳಿದರು.ಪದವೀಧರರ ಸಂಖ್ಯೆ ಹೆಚ್ಚಳ: ಕಳೆದ ಐದು ವರ್ಷಗಳಿಗೆ ಹೋಲಿಕೆ ಮಾಡಿದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಅಭ್ಯರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ. 2009ರಲ್ಲಿ 17,308, 2010ರಲ್ಲಿ 17,791, 2011ರಲ್ಲಿ 17,757, 2012ರಲ್ಲಿ 17,981 ಹಾಗೂ ಈ ವರ್ಷ 21,038 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಪದವಿ ಪಡೆದ ಅಭ್ಯರ್ಥಿಗಳ ಸಂಖ್ಯೆ 20 ಸಾವಿರ ದಾಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry