5 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪೋಲಿಯೊ ಹನಿ

7

5 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪೋಲಿಯೊ ಹನಿ

Published:
Updated:

ಬೆಂಗಳೂರು: ಮಕ್ಕಳನ್ನು ಪೋಲಿಯೊದಿಂದ ರಕ್ಷಿಸುವ ಸಲುವಾಗಿ ತಾಯಂದಿರು ಅಸ್ಥೆ ವಹಿಸಿ ತಮ್ಮ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸುವ ದೃಶ್ಯ ಭಾನುವಾರ ನಗರದಲ್ಲಿ ಸಾಮಾನ್ಯವಾಗಿತ್ತು. ನಿದ್ದೆಯ ತೆಕ್ಕೆಯಲ್ಲಿದ್ದ ಕಂದಮ್ಮಗಳು, ಅಳುತ್ತಿದ್ದ ಹಸುಗೂಸನ್ನು ಎತ್ತಿಕೊಂಡ ಅಮ್ಮಂದಿರು ಧಾವಂತದಲ್ಲಿಯೇ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಹಾಕುವಲ್ಲಿ ಯಶಸ್ವಿಯಾದರು.

ನಗರದಲ್ಲಿ ಐದು ವರ್ಷದೊಳಗಿನ 6.5 ಲಕ್ಷ ಮಕ್ಕಳಿಗೆ ಪಲ್ಸ್ ಪೋಲಿಯೊ ಹಾಕುವ ಗುರಿ ಹಾಕಿಕೊಳ್ಳಲಾಗಿತ್ತು. ಭಾನುವಾರ ಒಂದೇ ದಿನ 5,51,337 ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲಾಗಿದೆ. ಬಿಬಿಎಂಪಿಯು ಆರೋಗ್ಯ ಇಲಾಖೆ ಮತ್ತು ಇತರೆ ಸಂಘ- ಸಂಸ್ಥೆಗಳ ಸಹಕಾರದೊಂದಿಗೆ ನಗರದ ಬಸ್ ನಿಲ್ದಾಣ, ರೈಲು ನಿಲ್ದಾಣ, ಬಿಬಿಎಂಪಿ ಆಸ್ಪತ್ರೆ ಹಾಗೂ ಸರ್ಕಾರಿ ಶಾಲೆಗಳೂ ಸೇರಿದಂತೆ ವಿವಿಧೆಡೆ 1,800 ಲಸಿಕಾ ಕೇಂದ್ರಗಳನ್ನು ತೆರೆದಿತ್ತು. ಇದಕ್ಕಾಗಿ 8,500 ವಿಶೇಷ ಸಿಬ್ಬಂದಿಯನ್ನು ನಿಯೋಜಿಸಿತ್ತು. 

ಇತರೆ ಸ್ವಯಂ ಸೇವಾ ಸಂಸ್ಥೆಗಳ ಒಟ್ಟು 300ಕ್ಕೂ ಅಧಿಕ ಸದಸ್ಯರು ಲಸಿಕಾ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು. ಇದೇ ಉದ್ದೇಶಕ್ಕಾಗಿ ಬಿಬಿಎಂಪಿಯು 256 ಸಂಚಾರಿ ವಾಹನಗಳನ್ನು ಚಾಲ್ತಿಯಲ್ಲಿಟ್ಟಿದ್ದು, ನಗರದಾದ್ಯಂತ ಸಂಚಾರ ನಡೆಸಿ ಲಸಿಕೆ ನೀಡಲು ಮುಂದಾದವು.

ಈ ಬಗ್ಗೆ ಮಾಹಿತಿ ನೀಡಿದ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ಮಂಜುಳಾ, `ಈ ಬಾರಿ ಶೇ. 84.75 ರಷ್ಟು ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಪೋಲಿಯೊ ಲಸಿಕೆಯಿಂದ ಯಾವುದೇ ಮಕ್ಕಳು ವಂಚಿತರಾಗಬಾರದು ಎಂಬ ಕಾರಣಕ್ಕಾಗಿ ಇನ್ನೂ ಮೂರು ದಿನಗಳ ಕಾಲ ಆಸ್ಪತ್ರೆಯ ಸಿಬ್ಬಂದಿ ಮನೆ- ಮನೆಗೆ ತೆರಳಿ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry