5 ವರ್ಷದಲ್ಲಿ ಪ್ರತಿ ಕುಟುಂಬಕ್ಕೂ 24 ಗಂಟೆ ವಿದ್ಯುತ್: ಪ್ರಧಾನಿ

7

5 ವರ್ಷದಲ್ಲಿ ಪ್ರತಿ ಕುಟುಂಬಕ್ಕೂ 24 ಗಂಟೆ ವಿದ್ಯುತ್: ಪ್ರಧಾನಿ

Published:
Updated:
5 ವರ್ಷದಲ್ಲಿ ಪ್ರತಿ ಕುಟುಂಬಕ್ಕೂ 24 ಗಂಟೆ ವಿದ್ಯುತ್: ಪ್ರಧಾನಿ

ನವದೆಹಲಿ (ಪಿಟಿಐ): ಮುಂದಿನ ಐದು ವರ್ಷಗಳಲ್ಲಿ ರಾಷ್ಟ್ರದ ಎಲ್ಲ ಕುಟುಂಬಗಳಿಗೆ ದಿನದ 24 ಗಂಟೆಯೂ ವಿದ್ಯುತ್ ಪೂರೈಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಗ್ರಾಮೀಣ ಬಡ ಜನತೆಗೆ ವಿದ್ಯುತ್ ಸಬ್ಸಿಡಿ ನೀಡುವ ಅಗತ್ಯವಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಮಂಗಳವಾರ ಹೇಳಿದರು.`ಇಂಧನ ಲಭ್ಯತೆ~ ಕುರಿತು ಏರ್ಪಡಿಸಿದ್ದ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಧಾನಿ ಮಾತನಾಡಿದರು.  ಸದ್ಯ ರಾಷ್ಟ್ರದಲ್ಲಿ ಹತ್ತು ಲಕ್ಷ ಕುಟುಂಬಗಳು ಸೌರ ಶಕ್ತಿಯನ್ನು ಬೆಳಗುವ ದೀಪಕ್ಕಾಗಿ ಬಳಸಿಕೊಳ್ಳುತ್ತಿವೆ. ಇದರ ಜತೆಗೆ, 2022ರ ವೇಳೆಗೆ 20 ಗಿಗಾವಾಟ್ ಸೌರ ವಿದ್ಯುತ್ತನ್ನು ಗ್ರಿಡ್ ಮೂಲಕ ಪೂರೈಸುವ ಯೋಜನೆ ಸರ್ಕಾರದ್ದಾಗಿದೆ.ಇದೇ ವೇಳೆಗೆ ಗ್ರಾಮೀಣ ಪ್ರದೇಶದ 2 ಕೋಟಿ ಕುಟುಂಬಗಳಿಗೆ ಸೌರ ದೀಪದ ವ್ಯವಸ್ಥೆ ಕಲ್ಪಿಸುವ ಹಾಗೂ 2017ರ ವೇಳೆಗೆ ಬರಿದಾಗದ ಇಂಧನ ಮೂಲಗಳಿಂದ 55 ಗಿಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಇದೆ ಎಂದರು. `ಗ್ರಾಮೀಣ ಬಡ ಕುಟುಂಬಗಳಿಗೆ ಎಲ್‌ಪಿಜಿ ಮತ್ತು ವಿದ್ಯುತ್ತಿಗೆ ಸಬ್ಸಿಡಿ ಕೊಡುವ ಅಗತ್ಯವಿದೆ. ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸುವ ಚಿಂತನೆ ನಡೆದಿದೆ~ ಎಂದರು.ಕರ್ನಾಟಕದ ಮೈಸೂರಿನಲ್ಲಿ ಈ ಸಂಬಂಧ ಪ್ರಾಯೋಗಿಕ ಯೋಜನೆ ಜಾರಿಗೊಳಿಸಲಾಗಿತ್ತು. ಆಧಾರ್ ಗುರುತಿನ ಸಂಖ್ಯೆಯನ್ನು ಆಧರಿಸಿ, ಮನೆಯಲ್ಲಿರುವ ಯಾರಾದರೊಬ್ಬ ಕುಟುಂಬ ಸದಸ್ಯರ ಬಯೋಮೆಟ್ರಿಕ್ ದಾಖಲಾತಿ ಹೊಂದಾಣಿಕೆಯಾದ ನಂತರವೇ ಸಿಲಿಂಡರ್ ಪೂರೈಸುವ ನಿಬಂಧನೆಯಡಿ, ಅಲ್ಲಿ 27,000 ಸಿಲಿಂಡರ್‌ಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಉದಾಹರಣೆ ನೀಡಿದರು.ರಾಷ್ಟ್ರದ ಗ್ರಾಮೀಣ ಪ್ರದೇಶದಲ್ಲಿ 19 ಕೋಟಿ ಕುಟುಂಬಗಳಿದ್ದು, ಇದರಲ್ಲಿ ಶೇ 12ರಷ್ಟು ಕುಟುಂಬಗಳು ಸಿಲಿಂಡರ್ ಬಳಸುತ್ತವೆ. ಉಳಿದಂತೆ ಎಲ್ಲಾ ಕುಟುಂಬಗಳಿಗೂ ವಾರ್ಷಿಕ 6 ಸಿಲಿಂಡರ್‌ಗಳ ಮಿತಿಯಲ್ಲಿ, ಸಿಲಿಂಡರ್ ಒದಗಿಸಲು ಹೆಚ್ಚುವರಿಯಾಗಿ 2.5 ಕೋಟಿ ಟನ್ ಎಲ್‌ಪಿಜಿ ನಮಗೆ ಬೇಕಾಗುತ್ತದೆ. ಇದೇನೂ ರಾಷ್ಟಕ್ಕೆ ಹೊರೆಯಾಗಲಾರದು~ ಎಂದು ಅವರು ವಿವರಿಸಿದರು.ಉರುವಲು ಸಂಗ್ರಹಿಸುವುದಕ್ಕಾಗಿ ಮಹಿಳೆಯರು ಪರದಾಡುವುದನ್ನು ತಪ್ಪಿಸಲು, ಎಲ್ಲ ಊರುಗಳ ಒಂದು ಕಿ.ಮೀ. ವ್ಯಾಪ್ತಿಯೊಳಗೆ ಉರುವಲು ತೋಪುಗಳ ಪ್ಲಾಂಟೇಷನ್ ಬೆಳೆಸುವ ಸಲಹೆಯನ್ನೂ ಪ್ರಧಾನಿ ನೀಡಿದರು.`ರಾಷ್ಟ್ರದ ಪ್ರತಿಯೊಂದು ಕುಟುಂಬಕ್ಕೂ ಶುದ್ಧ ಇಂಧನ ಪೂರೈಸುವ ಗುರಿ ನಮ್ಮದು. ಇದೊಂದು ಭಾರಿ ಸವಾಲಿನ ಕಾರ್ಯವಾದರೂ ಅಸಾಧ್ಯವಾದುದೇನಲ್ಲ. ಇದನ್ನು ಆದ್ಯತೆಯ ಮೇಲೆ ಮಾಡಬೇಕಾಗಿದೆ. ಆದರೆ ಎಲ್ಲಾ ಹಳ್ಳಿಗಳಿಗೂ ಎಲ್‌ಪಿಜಿ ವಿತರಣಾ ಜಾಲ ವಿಸ್ತರಿಸಲು ಸಾಕಷ್ಟು ಸಮಯ ಹಿಡಿಯುತ್ತದೆ~ ಎಂದರು.ಈ ಗುರಿಗಳನ್ನು ಸಾಧಿಸಲು ಅಪಾರ ಕ್ರಿಯಾಶೀಲತೆ, ಸಂಪನ್ಮೂಲ, ಹೊಸ ರೀತಿ ಚಿಂತನೆ ಹಾಗೂ ಗ್ರಹಿಕೆಗಳು ಅಗತ್ಯ ಎಂದು ಸಿಂಗ್ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry