ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ದಶಕಗಳ ಚಿತ್ರಯಾನ

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕರ್ನಾಟಕದ ಹಿರಿಯ ಛಾಯಾಗ್ರಾಹಕ  ಎಸ್. ತಿಪ್ಪೇಸ್ವಾಮಿ ಕಳೆದ 50 ವರ್ಷಗಳಿಂದಲೂ ಛಾಯಾಗ್ರಹಣ ಕ್ಷೇತ್ರದಲ್ಲಿ ದುಡಿಯುತ್ತಲೇ ಇದ್ದಾರೆ. ಛಾಯಾಗ್ರಹಣ ಕ್ಷೇತ್ರದ ದೈತ್ಯ ಪ್ರತಿಭೆ ಅವರು. ಛಾಯಾಚಿತ್ರ ಪತ್ರಕರ್ತ, ವೈದ್ಯಕೀಯ ಛಾಯಾಗ್ರಹಣ, ಸಿನಿಮಾ, ಸ್ಥಿರ ಚಿತ್ರ, ಛಾಯಾಚಿತ್ರ ಶಿಕ್ಷಣ, ವನ್ಯಜೀವಿ ಛಾಯಾಗ್ರಹಣ ಹೀಗೆ ಎಲ್ಲ ವಿಭಾಗಗಳಲ್ಲಿಯೂ ಅವರದ್ದು ಅನನ್ಯ ಸೇವೆ.
 
ವಿಶ್ವ ಮಟ್ಟದ ನಾಲ್ಕು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಅವರಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ 250ಕ್ಕೂ ಹೆಚ್ಚು ಪ್ರಶಸ್ತಿ ಲಭಿಸಿವೆ. ಜಗತ್ತಿನ ಕೆಲವೇ ಕೆಲವು ಛಾಯಾಗ್ರಾಹಕರಿಗೆ ಲಭ್ಯವಾಗಿರುವ `ಎಫ್‌ಪಿಎಸ್‌ಎ~ ಫೆಲೋಶಿಪ್ ಅವರಿಗೆ ಸಿಕ್ಕಿದೆ. ಫೋಟೋಗ್ರಫಿಕ್ ಸೊಸೈಟಿ ಆಫ್ ಅಮೆರಿಕದ ಈ ಫೆಲೋಶಿಪ್‌ಗೆ ಭಾಜನರಾದ ಏಕೈಕ ಕನ್ನಡಿಗ ತಿಪ್ಪೇಸ್ವಾಮಿ.

ದಕ್ಷಿಣ ಭಾರತದಲ್ಲಿಯೂ ಇದು ಯಾರಿಗೂ ಬಂದಿಲ್ಲ. ನಾಲ್ಕು ಬಾರಿ ಅಂತರರಾಷ್ಟ್ರೀಯ ಗೌರವಕ್ಕೆ ಪಾತ್ರರಾದ ಭಾರತದ ಏಕೈಕ ವನ್ಯಜೀವಿ ಛಾಯಾಗ್ರಾಹಕ ಎನ್ನುವ ಅಗ್ಗಳಿಕೆ ಅವರದ್ದು.

1992ರಲ್ಲಿ ಗ್ರೇಟ್ ಬ್ರಿಟನ್‌ನ `ರಾಯಲ್ ಫೋಟೋಗ್ರಫಿ ಸೊಸೈಟಿ~ಯ ಫೆಲೋಶಿಪ್ (ಎಫ್‌ಆರ್‌ಪಿಎಸ್), 1995ರಲ್ಲಿ ಯುನೆಸ್ಕೊದ `ಫೆಡರೇಷನ್ ಆಫ್ ಇಂಟರ್‌ನ್ಯಾಷನಲ್ ಆರ್ಟ್ ಫೋಟೋಗ್ರಫಿ~ ಗೌರವ (ಇಎಫ್‌ಐಎಸಿ), 2000ದಲ್ಲಿ `ಕೊಲೀಗ್ ಸೊಸೈಟಿ ಕ್ಯಾಲಿಫೋರ್ನಿಯಾ~ದ ಗೌರವ ಫೆಲೋಶಿಪ್ (ಎಫ್‌ಐಸಿಎಸ್), 2011ರಲ್ಲಿ ಅಮೆರಿಕದ `ಎಫ್‌ಪಿಎಸ್‌ಎ~ ಫೆಲೋಶಿಪ್ ಪ್ರಶಸ್ತಿ.

ವನ್ಯಜೀವಿ ಚಿತ್ರಗಳಿಗಾಗಿ 35 ದೇಶಗಳ ನಡುವೆ ನಡೆದ `ವಿಶ್ವಕಪ್~ನಲ್ಲಿ ಪ್ರಶಸ್ತಿಯನ್ನು 7 ಬಾರಿ ಪಡೆದ ಭಾರತೀಯ ತಂಡದ ಓರ್ವ ಛಾಯಾಗ್ರಾಹಕ ತಿಪ್ಪೇಸ್ವಾಮಿ.
ಹೊಸ ತಂತ್ರಜ್ಞಾನದಲ್ಲಿ ಪ್ರಭುತ್ವ ಸಾಧಿಸಿದ ತಿಪ್ಪೇಸ್ವಾಮಿ (ಜ: ಅ. 24, 1942) ಹುಟ್ಟೂರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಆಲೂರು.

ತಂದೆ ಸಿದ್ದಣ್ಣ, ತಾಯಿ ಕರಿಯಮ್ಮ. ಹುಟ್ಟೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರ್ಣ. ಚಿತ್ರದುರ್ಗದಲ್ಲಿ ಬಿಎಸ್‌ಸಿ ಪದವಿ ಪಡೆಯುವ ಹಂತದಲ್ಲಿ ಹುಟ್ಟಿತು ಛಾಯಾಗ್ರಹಣ ಗೀಳು.

ದೇಶ ವಿದೇಶಗಳಲ್ಲಿ ಛಾಯಾಚಿತ್ರ ಪ್ರದರ್ಶನ ನಡೆಸಿದ ಅವರು ಬದುಕು ಕೊಟ್ಟ ಮೈಸೂರಿನಲ್ಲಿಯೇ ಪ್ರದರ್ಶನ ನಡೆಸಿರಲಿಲ್ಲ. ಈಗ ಅದು ಕೈಗೂಡುತ್ತಿದೆ. ಅ.14ರಿಂದ 23ರವರೆಗೆ ಅವರ ಅಪರೂಪದ ಚಿತ್ರಗಳನ್ನು ನೋಡುವ ಭಾಗ್ಯ ಸಾಂಸ್ಕೃತಿಕ ರಾಜಧಾನಿ ಜನರಿಗೆ ಸಿಕ್ಕಿದೆ.

ಈ ಸಂದರ್ಭದಲ್ಲೇ ತಿಪ್ಪೇಸ್ವಾಮಿ ಅವರಿಗೆ ಎಪ್ಪತ್ತರ ಸಂಭ್ರಮವೂ ಕೂಡಿಬಂದಿದೆ. ಬರುವ ಅ.24ರಂದು ಅವರಿಗೆ ಎಪ್ಪತ್ತು ತುಂಬಲಿದೆ. ಈ ಯುಗಳ ಸಂಭ್ರಮದ ಸಂದರ್ಭದಲ್ಲಿ ತಿಪ್ಪೇಸ್ವಾಮಿ ಅವರನ್ನು `ಸಾಪ್ತಾಹಿಕ ಪುರವಣಿ~ ಮಾತನಾಡಿಸಿತು. 
 

`ಕ್ಯಾಮೆರಾ ಹಿಂದಿನ ಮನುಷ್ಯನೇ ಬಹಳ ಮುಖ್ಯ...~

ಆಧುನಿಕ ತಂತ್ರಜ್ಞಾನ ಸಂದರ್ಭದಲ್ಲಿ ಛಾಯಾಗ್ರಾಹಕನ ಮಹತ್ವ ಕಡಿಮೆಯಾಗಿದೆಯೇ?
ಇಲ್ಲ. ಆಧುನಿಕ ತಂತ್ರಜ್ಞಾನದಿಂದ ಉತ್ತಮ ಛಾಯಾಗ್ರಾಹಕನಿಗೆ ಅನುಕೂಲವಾಗಿದೆ. ಆದರೆ ಅವನ ಮಹತ್ವ ಕಡಿಮೆಯಾಗಿಲ್ಲ.

ಈಗ ಡಿಜಿಟಲ್ ಯುಗ. ಅನೇಕರ ಬಳಿ ಡಿಜಿಟಲ್ ಕ್ಯಾಮೆರಾ ಇದೆ. ಮೊಬೈಲ್ ಪೋನ್‌ಗಳಲ್ಲಿಯೂ ಕ್ಯಾಮರಾ ಬಂದಿದೆ. ಈಗಲೂ ಛಾಯಾಗ್ರಾಹಕನಿಗೆ ಬೆಲೆ ಇದೆ ಎನ್ನುವುದು ಸರಿಯೆ?
ಎಲ್ಲರ ಮನೆಯಲ್ಲಿ ಕಾರುಗಳಿದ್ದರೂ ಅನುಭವಿ ಚಾಲಕನಿಗೆ ಹೇಗೆ ಬೇಡಿಕೆ ಕಡಿಮೆಯಾಗುವುದಿಲ್ಲವೋ ಹಾಗೆಯೇ ಉತ್ತಮ ಛಾಯಾಗ್ರಾಹಕನಿಗೆ ಎಂದೂ ಬೇಡಿಕೆ ಕಡಿಮೆಯಾಗುವುದಿಲ್ಲ. ಕೈಯಲ್ಲಿ ಕ್ಯಾಮೆರಾ ಇದ್ದರೆ ಒಳ್ಳೆಯ ಛಾಯಾಗ್ರಾಹಕ ನಾಗುವುದು ಸಾಧ್ಯವಿಲ್ಲ. ಕಪ್ಪು ಬಿಳುಪು ಕಾಲದಿಂದ ಹಿಡಿದು ಈಗಿನ ಡಿಜಿಟಲ್ ಯುಗದವರೆಗೂ ಕ್ಯಾಮೆರಾ ಹಿಂದಿನ ಮನುಷ್ಯನೇ (ಮ್ಯಾನ್ ಬಿಹೈಂಡ್ ಕ್ಯಾಮೆರಾ) ಎಂದಿಗೂ ಮುಖ್ಯ.

ಆಧುನಿಕ ತಂತ್ರಜ್ಞಾನದಿಂದ ಅವಕಾಶಗಳು ಕಡಿಮೆಯಾಗಿಲ್ಲವೇ?
ಅವಕಾಶಗಳು ಹೆಚ್ಚಾಗಿವೆ. ಅದರಲ್ಲೂ ಛಾಯಾ ಪತ್ರಕರ್ತರಿಗೆ ಇನ್ನೂ ಬೇಡಿಕೆ ಹೆಚ್ಚಿದೆ. ಮೊದಲೆಲ್ಲಾ ಛಾಯಾಗ್ರಾಹಕರು ಬೆಂಗಳೂರಿನಲ್ಲಿಯೇ ಇರಬೇಕಾಗಿತ್ತು. ಪತ್ರಿಕೆಯ ಪ್ರಧಾನ ಕಚೇರಿಯಲ್ಲಿ ಮಾತ್ರ ಛಾಯಾ ಪತ್ರಕರ್ತರು ಇರುತ್ತಿದ್ದರು. ಈಗ ಹಾಗಿಲ್ಲ. ಎಲ್ಲ ಜಿಲ್ಲೆಗಳಲ್ಲಿಯೂ ಛಾಯಾಚಿತ್ರ ಪತ್ರಕರ್ತರಿದ್ದಾರೆ.

ಡಿಜಿಟಲ್ ತಂತ್ರಜ್ಞಾನ ಬಂದ ಮೇಲೆ ಛಾಯಾಗ್ರಹಣ ಸುಲಭ ಆಯಿತೇ?
ಫೋಟೋ ತೆಗೆಯುವುದು ಸುಲಭವಾಗಿದೆ, ನಿಜ. ಆದರೆ, ತೆಗೆದ ಫೋಟೋಗಳೆಲ್ಲಾ ಕಲಾತ್ಮಕ ಚಿತ್ರಗಳಾಗುವುದಿಲ್ಲ. ಉತ್ತಮ ಛಾಯಾಗ್ರಾಹಕನಿಗೆ ನೆರಳು ಬೆಳಕಿನ ಕಲ್ಪನೆ ಇರಬೇಕು. ಯಾವ ಕೋನದಿಂದ ಚಿತ್ರ ತೆಗೆಯಬೇಕು ಎನ್ನುವುದು ಗೊತ್ತಿರಬೇಕು. ಕಲಾತ್ಮಕ ದೃಷ್ಟಿ ಇರಬೇಕು.
 
ಪತ್ರಿಕೆಗಳಲ್ಲಿ ಅಥವಾ ಇತರ ಮಾಧ್ಯಮಗಳಲ್ಲಿ ಕೆಲಸ ಮಾಡುವ ಛಾಯಾಗ್ರಾಹಕರಿಗೆ ಯಾವುದು ಉತ್ತಮ ಸುದ್ದಿ ಚಿತ್ರವಾಗಬಲ್ಲದು ಎನ್ನುವುದರ ಬಗ್ಗೆ ಅರಿವು ಇರಬೇಕು. ಜನಾಕರ್ಷಣೆಯ ಚಿತ್ರ ಯಾವುದು ಆಗಬಹುದು ಎನ್ನುವುದು ಗೊತ್ತಿರಬೇಕು. ಎಲ್ಲರ ಕೈಯಲ್ಲಿ ಕ್ಯಾಮೆರಾ ಇದ್ದರೂ ಭಿನ್ನವಾದ ಚಿತ್ರಗಳಿಗೆ ಮಾತ್ರ ಬೆಲೆ ಇರುತ್ತದೆ. ಛಾಯಾಗ್ರಾಹಕನಿಗೆ ಮೂರನೇ ಕಣ್ಣು ಬಹಳ ಮುಖ್ಯ.

ಹಿಂದಿನ ಛಾಯಾಗ್ರಾಹಕರಿಗೂ ಇಂದಿನ ಛಾಯಾಗ್ರಾಹಕರಿಗೂ ಏನು ವ್ಯತ್ಯಾಸ?
ಉತ್ತಮ ಛಾಯಾಗ್ರಾಹಕರು ಈ ಮೊದಲೂ ಇದ್ದರು. ಈಗಲೂ ಇದ್ದಾರೆ. ಆದರೆ ಛಾಯಾಗ್ರಹಣ ಶಿಕ್ಷಣದಲ್ಲಿ ಕೇವಲ ಕ್ಯಾಮೆರಾ ಬಗ್ಗೆ ತಿಳಿಸಿಕೊಟ್ಟರೆ ಸಾಲದು. ಮಾಧ್ಯಮಗಳಲ್ಲಿ ಕೆಲಸ ಮಾಡುವ ಛಾಯಾಗ್ರಾಹಕರಿಗೆ ನಮ್ಮ ಭಾಷೆ, ಸಂಸ್ಕೃತಿ, ಭಾಷಾ ಚಳವಳಿ, ಇತರ ಚಳವಳಿಗಳು, ಸ್ವಾತಂತ್ರ್ಯ ಹೋರಾಟ, ತುರ್ತು ಪರಿಸ್ಥಿತಿ ಹೋರಾಟಗಳ ಬಗ್ಗೆ ಮಾಹಿತಿ ಇರಬೇಕು. ಸಾಹಿತ್ಯ-ಸಾಂಸ್ಕೃತಿಕ ಲೋಕದ ಬಗ್ಗೆ ಗೊತ್ತಿರಬೇಕು. ಅಂದಾಗ ಮಾತ್ರ ಉತ್ತಮ ಚಿತ್ರಗಳನ್ನು ತೆಗೆಯಲು ಸಾಧ್ಯ. ಹಿಂದಿನ ಛಾಯಾಗ್ರಾಹಕರು ಹಾಗೆ ಇದ್ದರು.

ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೀರಿ. ಮಾಧ್ಯಮ ಕ್ಷೇತ್ರದಲ್ಲಿ ಮತ್ತು ವನ್ಯಜೀವಿ ಛಾಯಾಗ್ರಾಹಕರಾಗಿ ಹೆಸರು ಮಾಡಿದ್ದೀರಿ. ನಿಮ್ಮ ಆದ್ಯತೆ ಯಾವುದಕ್ಕೆ?
ನನ್ನ ಹೊಟ್ಟೆಪಾಡಿಗೆ ಮತ್ತು ಜನರ ಸಂಪರ್ಕ ಹೆಚ್ಚಳಕ್ಕೆ ನೆರವಾಗಿದ್ದು ಮಾಧ್ಯಮ ಕ್ಷೇತ್ರದ ಕೆಲಸ. ಸಿನಿಮಾದಿಂದಲೂ ಬಹಳ ಕಲಿತಿದ್ದೇನೆ. ಆದರೆ ನನಗೆ ಖುಷಿ ಕೊಟ್ಟಿದ್ದು ವನ್ಯಜೀವಿ ಛಾಯಾಗ್ರಹಣ. ಇದು ಆರೋಗ್ಯ, ಸಂತೋಷ, ನೆಮ್ಮದಿಯನ್ನು ಕೊಟ್ಟಿದೆ. ಆ ರೋಮಾಂಚನ ಬೇರೆಯದರಿಂದ ಸಿಗುವುದಿಲ್ಲ.

ಕರ್ನಾಟಕದಲ್ಲಿ ವನ್ಯಜೀವಿ ಛಾಯಾಗ್ರಾಹಕರು ರಾಷ್ಟ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಂಡ ಹಾಗೆ ಮಾಧ್ಯಮ ಕ್ಷೇತ್ರದ ಛಾಯಾಗ್ರಾಹಕರು ಗುರುತಿಸಿಕೊಂಡಿಲ್ಲ ಯಾಕೆ?
ಕರ್ನಾಟಕದ ವನ್ಯಜೀವಿ ಛಾಯಾಗ್ರಹಣಕ್ಕೆ ದೊಡ್ಡ ಪರಂಪರೆಯೇ ಇದೆ. ಇತಿಹಾಸ ಇದೆ. ಕರ್ನಾಟಕದ ಹವಾಮಾನ ಇಲ್ಲಿ ವನ್ಯಜೀವಿ ಛಾಯಾಗ್ರಾಹಕರು ಹುಟ್ಟುವುದಕ್ಕೆ ಕಾರಣವಾಗಿದೆ. ಮೈಸೂರನ್ನೇ ತೆಗೆದುಕೊಳ್ಳಿ. ಎಷ್ಟೊಂದು ಸುಂದರ ತಾಣಗಳಿವೆ. ರಂಗನತಿಟ್ಟು, ನಗುವನಹಳ್ಳಿ, ಕೊಕ್ಕರೆ ಬೆಳ್ಳೂರು, ನಾಗರಹೊಳೆ, ಬಂಡೀಪುರ ಮುಂತಾದ ಪ್ರದೇಶಗಳಲ್ಲಿ ಚಿತ್ರ ತೆಗೆಯುವುದೇ ಒಂದು ಆನಂದ.

ರಾಜ್ಯದಲ್ಲಿ ಹರಿಯುವ ಹಲವಾರು ನದಿ ದಡದಲ್ಲಿ ಎಂತಹ ವನ್ಯಜೀವಿಗಳಿವೆ! ನಮ್ಮ ಊರು ಕೇರಿಗಳಲ್ಲಿರುವ ಕೆರೆಗಳಿಗೂ ಅಪರೂಪದ ಪಕ್ಷಿಗಳು ಬರುತ್ತವೆ. ಅವುಗಳನ್ನು ಸೆರೆ ಹಿಡಿಯುವುದೇ ಆನಂದ. ಇದರಿಂದಾಗಿ ಕರ್ನಾಟಕದಲ್ಲಿ ವನ್ಯಜೀವಿ ಛಾಯಾಗ್ರಾಹಕರು ಬಹಳ ಇದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿಯೂ ಕೆಲವು ಉತ್ತಮ ಛಾಯಾಗ್ರಾಹಕರು ಇದ್ದಾರೆ. ಆದರೆ ವೃತ್ತಿಯಲ್ಲಿರುವ ಕೆಲವು ಮಿತಿಗಳಿಂದ ಅವರು ಪ್ರಸಿದ್ಧಿಗೆ ಬಂದಿಲ್ಲ ಅಷ್ಟೆ.

ವನ್ಯಜೀವಿ ಛಾಯಾಚಿತ್ರಗಳ ಬಗ್ಗೆ ನಿಮ್ಮ ಅನುಭವ ಏನು?
1983ರಿಂದ ನಾನು ವನ್ಯಜೀವಿಗಳ ಚಿತ್ರಗಳನ್ನು ತೆಗೆಯುತ್ತಿದ್ದೇನೆ. ವನ್ಯಜೀವಿ ಛಾಯಾಗ್ರಹಣದಲ್ಲಿ ಹೋಂ ವರ್ಕ್ ಬಹಳ ಮುಖ್ಯ. ಶೇ 80ರಷ್ಟು ಅಧ್ಯಯನ, ಶೇ 20ರಷ್ಟು ಮಾತ್ರ ಛಾಯಾಗ್ರಹಣ. ಪ್ರಾಣಿ, ಪಕ್ಷಿಗಳ ಚಲನವಲನ, ಗರ್ಭ ಧರಿಸುವ ಕಾಲ, ಓಡಾಡುವ ಕಾಲದ ಬಗ್ಗೆ ನಮಗೆ ಗೊತ್ತಿರಬೇಕು. ಈ ಬಗ್ಗೆ ಆಳವಾದ ಅಧ್ಯಯನ ನಡೆಸಬೇಕು. ಅಂದರೆ ಮಾತ್ರ ಉತ್ತಮ ದರ್ಜೆಯ ಚಿತ್ರಗಳನ್ನು ತೆಗೆಯುವುದು ಸಾಧ್ಯ. ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆ ಇರಬೇಕು. ಅದೊಂದು ತಪಸ್ಸು. ತಪಸ್ಸು ಫಲಿಸಿದರೆ ವರ ಕೂಡ ಸಿಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT