ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಲಕ್ಷ ನೇಕಾರರಿಗೆ ಉದ್ಯೋಗಾವಕಾಶ

Last Updated 19 ಮೇ 2012, 20:05 IST
ಅಕ್ಷರ ಗಾತ್ರ

ಬೆಂಗಳೂರು: `ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸುವರ್ಣ ಜವಳಿ ನೀತಿ ರೂಪಿಸಿದ್ದು, 2013ರೊಳಗೆ ಐದು ಲಕ್ಷ ನೇಕಾರರಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿ ಇರಿಸಿಕೊಂಡಿದೆ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಿಳಿಸಿದರು.

ನಗರದ ಪುರಭವನದಲ್ಲಿ ಶನಿವಾರ ನಡೆದ ನೇಕಾರ ಸಮುದಾಯಗಳ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಸ್ಥೆ `ಕಲಾ ನೇಕಾರ~ ಉದ್ಘಾಟಿಸಿ ಅವರು ಮಾತನಾಡಿದರು.

`ರೈತ ಹಾಗೂ ನೇಕಾರರು ರಾಜ್ಯದ ಆಧಾರಸ್ತಂಭಗಳು. ಅವರ ಸಬಲೀಕರಣಕ್ಕೆ ಸರ್ಕಾರ ಬದ್ಧ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶೇ 3 ಬಡ್ಡಿದರದಲ್ಲಿ 10 ಸಾವಿರ ನೇಕಾರರಿಗೆ ಸಾಲ ನೀಡಲಾಗಿದೆ. ಬಡ ನೇಕಾರರಿಗೆ ರೂ 65 ಸಾವಿರ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗುತ್ತಿದ್ದು, ಇದರಲ್ಲಿ ರೂ 40 ಸಾವಿರ ಸಬ್ಸಿಡಿ ಹಾಗೂ ರೂ 20 ಸಾವಿರ ಸಾಲ ರೂಪದಲ್ಲಿ ನೀಡಲಾಗುತ್ತಿದೆ. 2008-09ನೇ ಸಾಲಿನಲ್ಲಿ ನೇಕಾರರ ರೂ 5.86 ಕೋಟಿ ಸಾಲ ಹಾಗೂ 10-11ನೇ ಸಾಲಿನಲ್ಲಿ ರೂ 7.5 ಕೋಟಿ ಸಾಲ ಮನ್ನಾ ಮಾಡಲಾಗಿದೆ~ ಎಂದರು.

`ನೇಕಾರರ ಸಮಗ್ರ ಸಬಲೀಕರಣಕ್ಕೆ 11-12ನೇ ಸಾಲಿನಲ್ಲಿ ರೂ 138 ಕೋಟಿಯ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಜವಳಿ ನೀತಿಯಡಿಯಲ್ಲಿ ರೂ 40 ಕೋಟಿ ನೀಡಲಾಗಿದೆ. ಕೈಮಗ್ಗವನ್ನು ವಿದ್ಯುತ್ ಮಗ್ಗವನ್ನಾಗಿ ಪರಿವರ್ತಿಸಲು ರೂ 10 ಕೋಟಿ ಹಾಗೂ ಅದಕ್ಕೆ ಬೇಕಾದ ಶೆಡ್ ನಿರ್ಮಾಣಕ್ಕೆ ರೂ 10 ಕೋಟಿ ಬಿಡುಗಡೆ ಮಾಡಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಉಡುಪು ತಯಾರಿಕಾ ಘಟಕದ ಯೋಜನೆ ರೂಪಿಸಲಾಗಿದೆ~ ಎಂದು ಅವರು ವಿವರಿಸಿದರು.

`ನೇಕಾರ ಸಮುದಾಯದಿಂದಲೇ ಶಾಲಾ ಸಮವಸ್ತ್ರವನ್ನು ಪಡೆಯಲು ಸರ್ಕಾರ ನಿರ್ಧರಿಸಿದೆ. ನೇಕಾರರ ಸಮುದಾಯದ ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು~ ಎಂದು ಅವರು ಭರವಸೆ ನೀಡಿದರು.

ದಯಾನಂದಪುರಿ ಸ್ವಾಮೀಜಿ, ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಯೋಗಾನಂದ ಸರಸ್ವತಿ ಸ್ವಾಮೀಜಿ, ಈಶ್ವರ ಮಂಟೂರ ಶರಣರು ಸಾನಿಧ್ಯ ವಹಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಎಂ. ಕಾರಜೋಳ, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಡಿ. ಲಕ್ಷ್ಮಿನಾರಾಯಣ, ಹಿರಿಯ ಚಿತ್ರನಟ ಲೋಕನಾಥ್, ಶ್ರೀನಿವಾಸಮೂರ್ತಿ, ಉಮಾಶ್ರೀ, ಸಂಗೀತ ನಿರ್ದೇಶಕ ಹಂಸಲೇಖ, ಮಾಜಿ ಉಪಮೇಯರ್ ಎಸ್.ಹರೀಶ್, ಕಲಾ ನೇಕಾರ ಸಂಸ್ಥೆಯ ಅಧ್ಯಕ್ಷ ವಿ.ನಾಗೇಂದ್ರ ಪ್ರಸಾದ್, ಉಪಾಧ್ಯಕ್ಷ ಪ್ರೇಮ್, ಬೂದಾಳ್ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT