ಮಂಗಳವಾರ, ಆಗಸ್ಟ್ 11, 2020
27 °C

50ಸಾವಿರ ಕೋಟಿ ಹೂಡಿಕೆ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನೂತನ ಕೃಷಿ- ವ್ಯವಹಾರ ನೀತಿ ಸಾರ್ವಜನಿಕ -ಖಾಸಗಿ ಸಹಭಾಗಿತ್ವದಲ್ಲಿ ಕೃಷಿ ಉತ್ಪನ್ನ ಸಂಸ್ಕರಣೆ ವಲಯದಲ್ಲಿ ಹೂಡಿಕೆ ಮಾಡುವ ವಾತಾವರಣ ನಿರ್ಮಾಣ ಮಾಡುವ ಗುರಿ ಹೊಂದಿದೆ. ಮುಂದಿನ 5 ವರ್ಷಗಳಲ್ಲಿ ಕೃಷಿ ಉತ್ಪನ್ನ ಸಂಸ್ಕರಣೆ ಕ್ಷೇತ್ರದಲ್ಲಿ ರೂ. 50ಸಾವಿರ ಕೋಟಿ ಹೂಡಿಕೆ ನಿರೀಕ್ಷೆ ಮಾಡಲಾಗಿದೆ ಎಂದು ರಾಜ್ಯ ಕೃಷಿ ಮತ್ತು ಆಹಾರ ಸಂಸ್ಕರಣೆ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಡಾ. ವಸಂತಕುಮಾರ್ ತಿಳಿಸಿದರು.ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ವತಿಯಿಂದ ನಗರದ ಕೆಸಿಸಿಐ ಸಭಾಂಗಣದಲ್ಲಿ ಮಂಗಳವಾರ ನಡೆದ ` ಸಮಗ್ರ ಕೃಷಿ-ವ್ಯವಹಾರ ಅಭಿವೃದ್ಧಿ ನೀತಿ-2011~ ಕುರಿತ ವಿಷಯ ಮಂಡನೆ ಮತ್ತು ಸಂವಾದದಲ್ಲಿ ಅವರು ಮಾತನಾಡಿದರು.ಕೃಷಿ ಉತ್ಪನ್ನಗಳಿಗೆ ಬ್ರಾಂಡ್ ಇಮೇಜ್ ಸೃಷ್ಟಿಸಿದಾಗ ಅವುಗಳ ಬೆಲೆ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ನೂತನ ಕೃಷಿ-ವ್ಯವಹಾರ ನೀತಿ ಕಾರ್ಯನಿರ್ವಹಿಸಲಿದೆ. ಕೃಷಿ ಉತ್ಪನ್ನವೊಂದಕ್ಕೆ ರೈತನಿಗೆ ರೂ.5 ದೊರೆತರೆ ಆ ಉತ್ಪನ್ನದ ಮಾರುಕಟ್ಟೆ ಬೆಲೆ ರೂ.50 ಆಗಿರುತ್ತದೆ.

 

ನಮ್ಮಲ್ಲಿ ಸ್ಥಳೀಯವಾಗಿ ಸಿಗುವ ಪುನರ್ಪುಳಿ, ಹಲಸಿನಕಾಯಿ ಮುಂತಾದ ಉತ್ಪನ್ನಗಳನ್ನು ವಾಣಿಜ್ಯೀಕರಣಗೊಳಿಸಬೇಕು. ಬ್ರ್ಯಾಂಡ್ ಸೃಷ್ಟಿಯಾದಾಗ  ಸಹಜವಾಗಿ ಬೆಲೆ ಹೆಚ್ಚಾಗುತ್ತದೆ ಎಂದು ಹೇಳಿದರು.`ಈವರೆಗೆ ಕೃಷಿ ಉತ್ಪನ್ನ ಉತ್ಪಾದನೆಗೆ ಮಾತ್ರ ಗಮನ ನೀಡಲಾಗಿದೆ. ಹೊಸ ನೀತಿ ಉತ್ಪನ್ನಗಳ ಸಂಸ್ಕರಣೆ ಬಗ್ಗೆ ಗಮನ ಹರಿಸಿದೆ. ತಂತ್ರಜ್ಞಾನ ಮತ್ತು ಜ್ಞಾನವನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವ ಗುರಿ ಹೊಂದಲಾಗಿದೆ. ಹೊಸ ನೀತಿ ರೈತರು, ಮೀನುಗಾರರು, ಗ್ರಾಮೀಣ ಜನರಿಗೆ ನೆರವಾಗಲಿದೆ.ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮೂಲಕ ರಾಜ್ಯದ 5ಸಾವಿರ ಹೆಕ್ಟೇರ್ ಭೂಮಿಯಲ್ಲಿ ಕೃಷಿ- ಹೂಡಿಕೆ ಕಾರಿಡಾರ್ ನಿರ್ಮಿಸಲಾಗುವುದು~ ಎಂದರು. ಕೆಸಿಸಿಐ ಅಧ್ಯಕ್ಷ ಜಿ.ಜಿ. ಮೋಹನದಾಸ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಎಫ್‌ಕೆಸಿಸಿಐ ನಿಯೋಜಿತ ಅಧ್ಯಕ್ಷ ಜೆ.ಆರ್ ಬಂಗೇರ, ಕೆಸಿಸಿಐ ಉಪಾಧ್ಯಕ್ಷೆ ಲತಾ ಕಿಣಿ ಮತ್ತಿತರರು ಇದ್ದರು.ಪೂರ್ವಸಿದ್ದತಾ ಸಭೆ 8ಕ್ಕೆ: `ವಿಶ್ವ ಕೃಷಿ- ವ್ಯವಹಾರ ಮತ್ತು ಆಹಾರ ಸಂಸ್ಕರಣೆ ಸಮಾವೇಶ~ದ ಪೂರ್ವಸಿದ್ದತಾ ಸಭೆ ಜೂನ್ 8ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಾವೇಶದ ವೆಬ್‌ಸೈಟ್ ಅನಾವರಣ ಮಾಡಲಿದ್ದು,  ನೆದರ್‌ಲ್ಯಾಂಡ್‌ನ ಕೃಷಿ ಸಚಿವರು ಪಾಲ್ಗೊಳ್ಳಲಿದ್ದಾರೆ. ಜತೆಗೆ ಅಲ್ಲಿನ 40 ಮಂದಿಯ ನಿಯೋಗವೂ ಆಗಮಿಸಲಿದೆ ಎಂದು ವಸಂತಕುಮಾರ್ ತಿಳಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.