50 ಲಕ್ಷ ದರೋಡೆ ಪ್ರಕರಣ: ಜೆಡಿಎಸ್ ಶಾಸಕ ಜಮೀರ್ ಆರೋಪಿ

7

50 ಲಕ್ಷ ದರೋಡೆ ಪ್ರಕರಣ: ಜೆಡಿಎಸ್ ಶಾಸಕ ಜಮೀರ್ ಆರೋಪಿ

Published:
Updated:
ಬೆಂಗಳೂರು: ನಗರದ ಕೆಂಗೇರಿ ಸಮೀಪ ನಡೆದಿದ್ದ 50 ಲಕ್ಷ ರೂಪಾಯಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಸೇರಿದಂತೆ ಒಟ್ಟು 13 ಮಂದಿ ವಿರುದ್ಧ ಪೊಲೀಸರು ಮೂರನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

ಜಮೀರ್ ಅವರು ಈ ಪ್ರಕರಣದಲ್ಲಿ ಹದಿಮೂರನೇ ಆರೋಪಿಯಾಗಿದ್ದಾರೆ. ಫರೀದ್ ಖಾನ್, ವಾಸಿಂ ಖಾನ್, ಮುನಾವರ್ ಬೇಗ್, ತಸ್ಲಿಂ, ಮಂಜುನಾಥ್, ಇರ್ಷಾದ್, ಇಮ್ರಾನ್ ಖಾನ್, ದೌಲತ್ ಖಾನ್, ಮೊಹಿಸಿನ್ ಖಾನ್, ಬಿಬಿಎಂಪಿ ಬನಶಂಕರಿ ದೇವಸ್ಥಾನ ವಾರ್ಡ್ ಸದಸ್ಯರಾಗಿದ್ದ ದಿವಾನ್ ಅಲಿ (ಮೃತಪಟ್ಟಿದ್ದಾರೆ), ಅಸ್ಲಂ ಮತ್ತು ರೆಹಮಾನ್ ಷರೀಫ್ ಎಂಬುವರ ಹೆಸರುಗಳು ಆರೋಪ ಪಟ್ಟಿಯಲ್ಲಿವೆ. ಚನ್ನಪಟ್ಟಣದ ಅಕ್ಕಿ ವ್ಯಾಪಾರಿ ಜಿಯಾವುಲ್ಲಾ ಖಾನ್ ಗೋರಿ ಎಂಬುವರು 2010ರ ಅಕ್ಟೋಬರ್ 30ರಂದು ಚನ್ನಪಟ್ಟಣದಿಂದ ಬೆಂಗಳೂರಿಗೆ ಕಾರಿನಲ್ಲಿ ಬರುತ್ತಿದ್ದರು. ದುಷ್ಕರ್ಮಿಗಳು ಅವರನ್ನು ಇನ್ನೊಂದು ಕಾರಿನಲ್ಲಿ ಹಿಂಬಾಲಿಸಿದ್ದರು.

ಕೆಂಗೇರಿ ಬಳಿಯ ಜಯರಾಮ್‌ದಾಸ್ ಕೈಗಾರಿಕಾ ಪ್ರದೇಶದಲ್ಲಿ ಅಡ್ಡಗಟ್ಟಿದ್ದರು. ಮಾರಕಾಸ್ತ್ರಗಳಿಂದ ಜಿಯಾವುಲ್ಲಾ ಅವರನ್ನು ಬೆದರಿಸಿದ್ದ ದುಷ್ಕರ್ಮಿಗಳು ಹಣ ದರೋಡೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

‘ಜಿಯಾವುಲ್ಲಾ ಅವರು ಕೆಲವು ಆರೋಪಿಗಳನ್ನೂ ಗುರುತಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಾಸಿಂ ಖಾನ್, ತಸ್ಲಿಂ ಮತ್ತು ಮುನಾವರ್ ಬೇಗ್‌ನನ್ನು ಬಂಧಿಸಿ ವಿಚಾರಣೆಗೆ ನಡೆಸಿದಾಗ ಅವರು ದರೋಡೆಯ ಹಿಂದೆ ಜಮೀರ್ ಅಹಮ್ಮದ್ ಖಾನ್ ಮತ್ತು ದಿವಾನ್ ಅಲಿಯ ಪಾತ್ರ ಇರುವುದನ್ನು ಬಹಿರಂಗಪಡಿಸಿದ್ದರು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರೋಪಿಗಳು ಹೆಸರು ಬಹಿರಂಗಪಡಿಸಿದ ವಿಷಯ ಗೊತ್ತಾದ ನಂತರ ದಿವಾನ್ ಆಲಿ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಜಮೀರ್ ಅವರ ಪಾತ್ರದ ಬಗ್ಗೆ ತನಿಖೆ ನಡೆಸಿದ ಸಿಬ್ಬಂದಿ ಕೆಲ ಸಾಕ್ಷ್ಯಗಳನ್ನು ಕಲೆ ಹಾಕುವಲ್ಲಿ ಯಶಸ್ವಿಯಾಗಿದ್ದರು. ದರೋಡೆ ಮಾಡಿದ ನಂತರ ಆರೋಪಿಗಳು ಜಮೀರ್ ಅವರಿಗೆ ದೂರವಾಣಿ ಕರೆ ಮಾಡಿ ‘ವಹಿಸಿದ್ದ ಕೆಲಸ ಸಕ್ಸಸ್ ಆಗಿದೆ’ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಇನ್ನೂ ಕೆಲವು ಸಾಂದರ್ಭಿಕ ಸಾಕ್ಷ್ಯಗಳು ಸಹ ತನಿಖಾ ತಂಡಕ್ಕೆ ಲಭ್ಯವಾಗಿದ್ದವು’ ಎಂದು ಆ ಅಧಿಕಾರಿ ಹೇಳಿದ್ದಾರೆ.

ಶಾಸಕರಾಗಿದ್ದಕ್ಕೆ ಬಂಧಿಸಲಿಲ್ಲ: ಜಮೀರ್ ಶಾಸಕರಾಗಿದ್ದ ಕಾರಣ ಅವರನ್ನು ಏಕಾಏಕಿ ಬಂಧಿಸದ ಪೊಲೀಸರು ಸಿಕ್ಕ ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್ ಇಲಾಖೆಗೆ ಕಳುಹಿಸಿಕೊಟ್ಟಿದ್ದರು. ಲಭ್ಯವಿರುವ ಸಾಕ್ಷ್ಯಗಳಿಂದ ಜಮೀರ್ ಅವರನ್ನು ಆರೋಪಿ ಮಾಡಬಹುದೆ ಎಂದು ಪೊಲೀಸರು ಪ್ರಾಸಿಕ್ಯೂಷನ್ ಇಲಾಖೆಗೆ ಕೇಳಿದ್ದರು, ಪ್ರಾಸಿಕ್ಯೂಷನ್ ಇಲಾಖೆ ಒಪ್ಪಿಗೆ ನೀಡಿದ ನಂತರ ಆರೋಪ ಪಟ್ಟಿಯಲ್ಲಿ ಅವರ ಹೆಸರು ಸೇರಿಸಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ದರೋಡೆಯಾಗಿದ್ದು 2.50 ಕೋಟಿ: ಅಸಲಿಗೆ ದರೋಡೆಯಾಗಿದ್ದು 2.50 ಕೋಟಿ ರೂಪಾಯಿ ಮತ್ತು ಆ ಹಣ ಚನ್ನಪಟ್ಟಣದ ಮಾಜಿ ಶಾಸಕ ಎಂ.ಸಿ.ಅಶ್ವತ್ಥ್‌ಗೆ ಸೇರಿದ್ದು ಎಂದು ಪೊಲೀಸರೇ ಮಾಹಿತಿ ನೀಡಿದ್ದರು. ತದ ನಂತರ ಪೊಲೀಸರೇ ಆ ಮಾಹಿತಿಯನ್ನು ನಿರಾಕರಿಸಿದ್ದರು.

ಜಮೀರ್ ಅಹಮ್ಮದ್ ಖಾನ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry