ಗುರುವಾರ , ಅಕ್ಟೋಬರ್ 17, 2019
27 °C

50 ವರ್ಷಗಳ ಹಿಂದಿನ ಗುರು ಶಿಷ್ಯರ ಸಮಾಗಮ

Published:
Updated:

ಶಿರಹಟ್ಟಿ: ಅದೊಂದು ವಿಶಿಷ್ಟ ಮತ್ತು ಅಪರೂಪದ  ಕಾರ್ಯಕ್ರಮ. 50 ವರ್ಷಗಳ ಹಿಂದೆ ನಾಲ್ಕಕ್ಷರ ಕಲಿಸಿದ ಮತ್ತು ತಮ್ಮ ಜೀವನವನ್ನು ರೂಪಿಸಿದ ಗುರುಬಳಗಕ್ಕೆ ಕೃತಜ್ಞತೆ ಅರ್ಪಿಸುವ ವಿಶಿಷ್ಟ ಮತ್ತು ವಿನೂತನ ಸಮಾರಂಭವದು.ಸುಮಾರು ಐದಾರು ದಶಕಗಳ ಹಿಂದೆ ತಮ್ಮ ಕೈಯಲ್ಲಿ ಕಲಿತ ಆ ವೃದ್ದ ಜೀವಗಳು ತಮ್ಮ ವೃತ್ತಿ ಜೀವನವನ್ನೆ ಕೊನೆಗಾಣಿಸಿ ಅದೆಷ್ಟೋ ವರ್ಷಗಳು ಗತಿಸಿದರೂ ಅದನ್ನು ನೆನಪಿನಲ್ಲಿಟ್ಟುಕೊಂಡು ಸ್ಮರಿಸಿ ಬೇರೆ ಬೇರೆ ಸ್ಥಳಗಳಲ್ಲಿ ಇದ್ದ ಅವರೆಲ್ಲರನ್ನು (ರಾಜ್ಯ ಮತ್ತು ರಾಷ್ಟ್ರಗಳಲ್ಲಿ) ಕರೆಯಿಸಿದ ಆ ಚಿಣ್ಣರು (ಈಗ ಅವರೂ ಸಹ ವೃದ್ಧರು) ಗುರುವಂದನೆ ಸಲ್ಲಿಸಿದ ಏರ್ಪಡಿಸಿದ್ದ ಸ್ಮರಣೀಯ ಕ್ಷಣಗಳ ಕಾರ್ಯಕ್ರಮವಿದು.ಶುಕ್ರವಾರ ಪಟ್ಟಣದ ಎಫ್.ಎಂ. ಡಬಾಲಿ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ 1958ರಲ್ಲಿ 8ನೇ ತರಗತಿಗೆ ಸೇರಿದ ಎಸ್‌ಎಸ್‌ಸಿ (1962) ಕೊನೆಯ ತಂಡ ವಿದ್ಯಾರ್ಥಿಗಳಿಂದ ಜರುಗಿದ 50 ವರ್ಷಗಳ ಗುರು ಶಿಷ್ಯರ ಸಮಾಗಮ ಅಥವಾ ಸುವರ್ಣ ಮಿಲನ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳಿವು.ಗುರುಗಳ ಸಾಲಿನಲ್ಲಿ ನಿವೃತ್ತ ಪ್ರಾಚಾರ್ಯ ಬಿ.ಎಫ್. ಹೊಳಿಬಸಯ್ಯ, ಸಂಸ್ಕೃತ ಮತ್ತು ಹಿಂದಿ ಭಾಷೆಯ ಶಿಕ್ಷಕ ಡಾ.ಆರ್.ಆರ್. ಮುಂಡರಗಿ, ಎಸ್.ಎಂ. ಮಂಗಳಿ, ಎಫ್.ಸಿ. ಬೆಟಗೇರಿ, ಆರ್.ಎಸ್. ಮಳಲಿ, ಎಂ.ಜಿ. ವಾಚೇದಮಠ, ಎಂ.ಜಿ. ಸವದತ್ತಿ, ಎಂ.ಡಿ. ಕಡ್ಲಿಕೊಪ್ಪ ಉಪಸ್ಥಿತರಿದ್ದರು. ಶಿಷ್ಯರ ಸಾಲಿನಲ್ಲಿ (ಹಳೆಯ ವಿದ್ಯಾರ್ಥಿಗಳು) ಮಾಜಿ ಸಂಸದ ಐ.ಜಿ. ಸನದಿ, ಕಾರ್ಮಿಕ ಇಲಾಖೆ ನಿವೃತ್ತ ಅಪರ ಆಯುಕ್ತ ಎಸ್.ಎಂ. ಮ್ಯಾಗೇರಿಮಠ, ಕಾಲೇಜಿನ ಸಧ್ಯದ ಪ್ರಾಚಾರ್ಯ ನಟರಾಜ ಕಲಾವಂತ, ವಿಜ್ಞಾನಿ ಮೋಹನ ದೇಶಪಾಂಡೆ, ಕೇಂದ್ರಿಯ ವಿಶ್ವವಿದ್ಯಾಲಯ ನಿವೃತ ಅಧ್ಯಾಪಕ ಎನ್.ಎನ್. ಪತ್ತಾರ, ನಿವೃತ್ತ ಪ್ರಾಧ್ಯಾಪಕ ಎಸ್.ವಿ. ಮಂಗಸೂಳಿ,  ಜಿ.ಬಿ. ಚನ್ನವೀರಶೆಟ್ಟರ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ. ದ್ಯಾವನೂರ, ಎನ್.ಎಚ್. ಕುಂಟಿ, ಬಿ.ಎಚ್. ಬಾರ್ಕಿ, ಹೂವಪ್ಪ ಪೂಜಾರ, ಸಿ.ಎಂ. ಜೋಶಿ, ಎನ್.ಎಸ್. ಕುಬೇರ, ಎಂ.ಎಂ. ಮರಾಠೆ. ಬಿ.ಬಿ. ಸಜ್ಜನರ, ಎಚ್.ಡಿ. ವಡ್ಡಟ್ಟಿ, ಎಂ.ಸಿ. ಬಟ್ಟೂರ, ಎಂ.ಎನ್. ಬಡಿಗೇರ, ಕೆ.ಬಿ. ಹೊನ್ನಪ್ಪನವರ, ಕೆ.ಕೆ. ಕರಿಯತ್ತಿನ, ಬಿ.ಬಿ. ಕೆಂಚನಗೌಡರ, ನಿವೃತ್ತ ಕೃಷಿ ವಿಸ್ತರಣಾಧಿಕಾರಿ ವಿ.ಜಿ. ಹಿರೇಮಠ ಸೇರಿದಂತೆ ಹಲವಾರು ಶಿಷ್ಯರ ಬಳಗ ಅಲ್ಲಿ ಬೀಡುಬಿಟ್ಟಿತ್ತು.ವಿಶೇಷ ಎಂದರೆ ಆ ಎಲ್ಲ ಗುರುಗಳು ತಮ್ಮ ಶಿಷ್ಯರಿಗೆ ಅಂತಹ ಇಳಿವಯಸ್ಸಿನಲ್ಲಿಯೂ ಬದುಕಿನ ಮತ್ತು ಮಾನವೀಯತೆಯ ಪಾಠ ಹೇಳಿ ತಮ್ಮ ಶಿಕ್ಷಕ ವೃತ್ತಿಯಲ್ಲಿನ ನೆನಪುಗಳನ್ನು ಮೆಲಕು ಹಾಕಿ ಸಂದರ್ಭವನ್ನು ಸಾರ್ಥಕಪಡಿಸಿಕೊಂಡರು.ವಿಜ್ಞಾನಿ, ರಾಜಕಾರಣಿ, ಹಿರಿಯ ಪೋಲಿಸ್ ಅಧಿಕಾರಿ, ಕೃಷಿ ಪಂಡಿತ್ ಪ್ರಶಸ್ತಿ ಸಾಧಕರು, ವಿಶ್ವವಿದ್ಯಾಲಯ ಅಧ್ಯಾಪಕರು ಸೇರಿದಂತೆ ಹಲವಾರು ಸೇವೆಗಳನ್ನು ಸಲ್ಲಿಸಿದ ತಮ್ಮ ಶಿಷ್ಯ ಬಳಗವನ್ನು ಕಂಡು ಗುರುಬಳಗ ಸಂತಸ ಪಟ್ಟರು. ಇಂಥ ಅಪೂರ್ವ ಗುರುವಂದನಾ ಕಾರ್ಯಕ್ರಮಕ್ಕೆ ಫ.ಸಿದ್ಧರಾಮ ಶ್ರೀಗಳು ಸಾಕ್ಷಿಯಾಗಿ ಆಶೀರ್ವಚನ ನೀಡಿದರು.ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಡಿ.ಎನ್. ಡಬಾಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಎಲ್ಲ ಗುರುಗಳಿಗೆ ಶಿಷ್ಯರ ಬಳಗ ಸನ್ಮಾನ ಮಾಡಿ ಕೃತಜ್ಞತೆ ಅರ್ಪಿಸಿದರು.ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಸಹಾಯಕ್ಕಾಗಿ ದತ್ತಿನಿಧಿಯನ್ನು ನೀಡುವದಾಗಿ ಶಿಷ್ಯರ ಬಳಗ ಭರವಸೆ ನೀಡಿತಲ್ಲದೆ ಈ ವರ್ಷ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗಾಗಿ ರೂ. 11,500 ರೂ ಮೊತ್ತದ ಚೆಕ್ ಅನ್ನು ಸಹ ವಿತರಣೆ ಮಾಡಲಾಯಿತು. ನಿಧನ ಹೊಂದಿದ ಗುರುಬಳಗವನ್ನು ಇದೇ ಸಂದರ್ಭದಲ್ಲಿ ಸ್ಮರಿಸಲಾಯಿತು.ಕನ್ನಡ ಭಾಷೆ ಬಗ್ಗೆ ವಿಶೇಷ ಪಾಂಡಿತ್ಯವನ್ನು ಹೊಂದಿದ್ದ ಹಿರಿಯ ಕವಿ ಡಾ. ಎಂ. ಅಕಬರ ಅಲಿ ಅನಾರೋಗ್ಯದ ನಿಮಿತ್ತ ಕಾರ್ಯಕ್ರಮಕ್ಕೆ ಆಗಮಿಲಿಲ್ಲ.   ನಿವೃತ್ತ ಶಿಕ್ಷಕ ನಿಂಗಣ್ಣ ಕುಂಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

 

Post Comments (+)