ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ಸಾವಿರ ಖಾಲಿ ಹುದ್ದೆ ಭರ್ತಿ

Last Updated 4 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರದ ಪರಿಶಿಷ್ಟ ಜಾತಿ/ ಪಂಗಡ ವಿಭಾಗಗಳಲ್ಲಿ ಖಾಲಿ ಇರುವ 50 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುವ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಐದು ರಾಜ್ಯಗಳಲ್ಲಿ, ಅದರಲ್ಲೂ ವಿಶೇಷವಾಗಿ ಪರಿಶಿಷ್ಟರು ಗಣನೀಯ ಸಂಖ್ಯೆಯಲ್ಲಿರುವ ಉತ್ತರ ಪ್ರದೇಶ, ಪಂಜಾಬ್ ಹಾಗೂ ಉತ್ತರಾಖಂಡದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರದ ಈ ನಿರ್ಧಾರ ಹೊರಬಿದ್ದಂತಿದೆ. ಆದರೆ ಈಗಾಗಲೇ ಚುನಾವಣೆ ಘೋಷಣೆಯಾಗಿರುವುದರಿಂದ ಸಂಪುಟ ಪ್ರಸ್ತುತ ತೆಗೆದುಕೊಂಡ ನಿರ್ಧಾರ, ಚುನಾವಣೆ ಬಳಿಕ ಅನುಷ್ಠಾನಕ್ಕೆ ಬರಲಿದೆ. ಆದಾಗ್ಯೂ ಚುನಾವಣೆ ನಡೆಯಲಿರುವ ರಾಜ್ಯಗಳ ದಲಿತರು ಮತ್ತು ಆದಿವಾಸಿಗಳಿಗೆ ಸರ್ಕಾರ ಈ ಮೂಲಕ ಸಂದೇಶ ರವಾನಿಸಿದೆ ಎಂದು ವಿಶ್ಲೇಷಿಸಲಾಗಿದೆ.

ಒಬಿಸಿ ಕೋಟಾದೊಳಗೆ ಅಲ್ಪಸಂಖ್ಯಾತರಿಗೆ ಶೇ 4.5ರಷ್ಟು ಮೀಸಲಾತಿ ನೀಡಲು ನಿರ್ಧಾರ ತೆಗೆದುಕೊಂಡ ಬೆನ್ನಲ್ಲಿಯೇ ಸಂಪುಟ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ.

ಕೇಂದ್ರ ಸರ್ಕಾರದ ಪ.ಜಾತಿ/ ಪಂಗಡ ವಿಭಾಗಗಳಲ್ಲಿ ತೆರವಾದ ಸ್ಥಾನವನ್ನು ತುಂಬಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಈ ಮೊದಲು ಸಂಪುಟ ಟಿಪ್ಪಣಿಯ ಸುತ್ತೋಲೆ ಹೊರಡಿಸಲಾಗಿತ್ತು.

ಈ ಹಿಂದೆ 2008ರಲ್ಲಿ ಸರ್ಕಾರ, ಪ.ಜಾತಿ/ ಪಂಗಡ ವಿಭಾಗಕ್ಕೆ ವಿಶೇಷ ನೇಮಕಾತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದರ ಅಂಗವಾಗಿ ಈ ವಿಭಾಗಗಳಲ್ಲಿ ತೆರವಾದ ಸ್ಥಾನವನ್ನು ತುಂಬುವ ಕೆಲಸ ಮಾಡಲಾಗಿತ್ತು.
ಆಕಾಂಕ್ಷಿಗಳಿಗೆ ತರಬೇತಿ ನೀಡುವುದಕ್ಕೆ ಆದ್ಯತೆ ನೀಡಲಾಗುತ್ತದೆ. ಕನಿಷ್ಠ ಅರ್ಧ ಡಜನ್‌ನಷ್ಟು ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಪ. ಜಾತಿಗೆ ಮೀಸಲಾದ ಹುದ್ದೆ ತುಂಬಿಲ್ಲ ಎಂದು ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT