ಶುಕ್ರವಾರ, ನವೆಂಬರ್ 22, 2019
22 °C

500ಕ್ಕೂ ಅಧಿಕ ಮನೆಗಳಿಗೆ ಅಕ್ರಮ ನೀರಿನ ಸಂಪರ್ಕ

Published:
Updated:

ಬೆಂಗಳೂರು: ಸುಬ್ರಹ್ಮಣ್ಯಪುರ ಮುಖ್ಯ ರಸ್ತೆಯ ಯಾದಾಳಮ್ಮ ನಗರ ಬಡಾವಣೆಯ 500ಕ್ಕೂ ಅಧಿಕ ಮನೆಗಳಿಗೆ ನೀರು ಪೂರೈಕೆಗೆ ನೆರವಾಗಲು ಕಾವೇರಿ ನೀರಿನ ಅಕ್ರಮ ಸಂಪರ್ಕ ಪಡೆದಿರುವುದು ಸೋಮವಾರ ಬೆಳಕಿಗೆ ಬಂದಿದೆ.ಈ ಸಂಪರ್ಕವನ್ನು ಕಡಿತಗೊಳಿಸಲು ಜಲಮಂಡಳಿ ಅಧಿಕಾರಿಗಳು ಮುಂದಾದಾಗ ಅಧಿಕಾರಿಗಳು ಹಾಗೂ ಸ್ಥಳೀಯರ ನಡುವೆ ಜಟಾಪಟಿ ನಡೆಯಿತು. ಸುಮಾರು ಒಂದು ಗಂಟೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಹಿನ್ನೆಲೆ: ಈ ಬಡಾವಣೆಯು ಉತ್ತರಹಳ್ಳಿಯಿಂದ ಇಸ್ರೊ ಬಡಾವಣೆಗೆ ಹೋಗುವ ಮಾರ್ಗ ಮಧ್ಯದಲ್ಲಿದೆ. ಬಿಬಿಎಂಪಿಗೆ ಸೇರ್ಪಡೆಯಾದ 110 ಗ್ರಾಮಗಳಲ್ಲಿ ಇದು ಒಂದು. ಈವರೆಗೆ ಈ ಬಡಾವಣೆಗೆ ಕಾವೇರಿ ನೀರಿನ ಸಂಪರ್ಕ ಒದಗಿಸಿರಲಿಲ್ಲ.ಉತ್ತರಹಳ್ಳಿ ವೃತ್ತದಿಂದ ಮಾರುತಿ ಲೇಔಟ್‌ಗೆ ನೀರು ಪೂರೈಕೆ ಮಾಡುವ ಕೊಳವೆ ಮಾರ್ಗ ಈ ಬಡಾವಣೆಯ ಪ್ರವೇಶದ್ವಾರದಲ್ಲೇ ಹೋಗಿದೆ. ಪ್ರವೇಶದ್ವಾರದ ಬಳಿ ಮುಕ್ಕಾಲು ಇಂಚು ಹಾಗೂ ಅರ್ಧ ಇಂಚು ಗಾತ್ರದ ಎರಡು ಕೊಳವೆ ಸಂಪರ್ಕಗಳನ್ನು ಅನಧಿಕೃತವಾಗಿ ಪಡೆಯಲಾಗಿತ್ತು. ಈ ಸಂಬಂಧ ಭಾನುವಾರ ಸಂಜೆ ಜಲಮಂಡಳಿ ಅಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು.ಸ್ಥಳೀಯ ಪೊಲೀಸ್ ಠಾಣೆಗೆ ಅಧಿಕಾರಿಗಳು ದೂರು ಸಲ್ಲಿಸಿದರು. ಪೊಲೀಸ್ ಬಿಗು ಬಂದೋಬಸ್ತ್‌ನಲ್ಲಿ ದಕ್ಷಿಣ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಗುರುರಾಜ್ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲೇಶಪ್ಪ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ದಿಢೀರ್ ಕಾರ್ಯಾಚರಣೆ ನಡೆಸಲಾಯಿತು.ಅಧಿಕಾರಿಗಳು ಅಕ್ರಮ ಸಂಪರ್ಕ ಕಡಿತಗೊಳಿಸಲು ಮುಂದಾದಾಗ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದರು. ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಈ ಸಂದರ್ಭ ಅಧಿಕಾರಿಗಳು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದೆ. `ಅಕ್ರಮ ಸಂಪರ್ಕ ಪಡೆಯುವುದು ತಪ್ಪು' ಎಂದು ಅಧಿಕಾರಿಗಳು ಮನವರಿಕೆ ಮಾಡಿಕೊಡಲು ಮುಂದಾದರು. ಇದಕ್ಕೂ ಸ್ಥಳೀಯರು ಪಟ್ಟು ಸಡಿಲಿಸಲಿಲ್ಲ. ಅಧಿಕಾರಿಗಳಿಗೆ ದಿಗ್ಬಂಧನ ಹಾಕಲು ಮುಂದಾದರು. ಪೊಲೀಸರು ಮಧ್ಯಪ್ರವೇಶಿಸಿ ಹೆಚ್ಚಿನ ಅನಾಹುತ ಆಗದಂತೆ ತಡೆದರು. ಬಳಿಕ ಅಧಿಕಾರಿಗಳು ಸಂಪರ್ಕವನ್ನು ಕಿತ್ತು ಹಾಕಿದರು.ಕಾವೇರಿ ನೀರಿನ ಸಂಪರ್ಕ ನೀಡಲೇಬೇಕೆಂದು ಹಟ ಹಿಡಿದ ಸ್ಥಳೀಯರು ಸಂಪರ್ಕವನ್ನು ಮರುಜೋಡಿಸಲು ಮುಂದಾದರು. ಆಗ ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಜಲಮಂಡಳಿಯ ಅಧಿಕಾರಿಗಳು ಸ್ಥಳೀಯ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು. `ಅರ್ಜಿ ಸಲ್ಲಿಸಿದರೆ ಮಾನವೀಯ ನೆಲೆಯಲ್ಲಿ ತಾತ್ಕಾಲಿಕವಾಗಿ ನೀರಿನ ಸಂಪರ್ಕ ನೀಡಲು ಕ್ರಮ ಕೈಗೊಳ್ಳಲಾಗುವುದು' ಎಂದು ಅಧಿಕಾರಿಗಳು ಭರವಸೆ ನೀಡಿದ ಬಳಿಕ ನಿವಾಸಿಗಳು ತಣ್ಣಗಾದರು.`ಬಡಾವಣೆಯ ಜನರ ಪರವಾಗಿ ಯಾರಾದರೂ ಒಬ್ಬರು ಅರ್ಜಿ ಸಲ್ಲಿಸುವಂತೆ ವಿನಂತಿಸಲಾಗಿತ್ತು. ಈ ಸಂದರ್ಭ ಅವರೊಳಗೆ ವಾಗ್ವಾದಗಳು ನಡೆದವು. ಯಾರೂ ಅರ್ಜಿ ಸಲ್ಲಿಸಲು ಮುಂದೆ ಬರಲಿಲ್ಲ. ಅರ್ಜಿಯ ಮೊತ್ತವನ್ನು ನಾವೇ ಪಾವತಿಸುವುದಾಗಿ ಅಧಿಕಾರಿಗಳು ಹೇಳಿದರೂ ಜನರ ಪ್ರತಿಕ್ರಿಯೆ ನಿರಾಶದಾಯಕವಾಗಿತ್ತು. ಕದ್ದು ಮುಚ್ಚಿ ನೀರಿನ ಸಂಪರ್ಕ ಪಡೆಯುವುದಕ್ಕೇ ಜನರು ಮುಂದಾಗುತ್ತಾರೆ. ಸಕ್ರಮ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದರೂ ಮುಂದಾಗುತ್ತಿಲ್ಲ' ಎಂದು ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.`ಬಡಾವಣೆಯಲ್ಲಿ 8,000ಕ್ಕೂ ಅಧಿಕ ಜನರು ಇದ್ದಾರೆ. ಕೊಳವೆಬಾವಿ ನೀರು ಪ್ರಮುಖ ನೀರಿನ ಮೂಲವಾಗಿತ್ತು. ಈಗ ಎಲ್ಲ ಕೊಳವೆಬಾವಿಗಳು ಬತ್ತಿಹೋಗಿವೆ. ಈಗ ದಿನಕ್ಕೆ ಮೂರು ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆಯಾಗುತ್ತಿದ್ದು, ಯಾವ ಮೂಲೆಗೂ ಸಾಕಾಗುವುದಿಲ್ಲ. ಕಾವೇರಿ ನೀರು ಪೂರೈಕೆ ಮಾಡುವಂತೆ ಜಲಮಂಡಳಿಗೆ ಹತ್ತಾರು ಬಾರಿ ಮನವಿ ಸಲ್ಲಿಸಲಾಗಿತ್ತು. ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ತಾಳಿದ್ದರಿಂದ ಅನ್ಯಮಾರ್ಗ ಕಾಣದೆ ಭಾನುವಾರ ನೀರಿನ ಸಂಪರ್ಕ ಪಡೆದಿದ್ದೇವೆ' ಎಂದು ಸ್ಥಳೀಯ ನಿವಾಸಿ ಮೋಹನ್ ಅಳಲು ತೋಡಿಕೊಂಡರು.

`ಹಿರಿಯ ಅಧಿಕಾರಿಗಳ ಸೂಚನೆಯಂತೆ ಕ್ರಮ'

`ದೂರು ಬಂದ ಹಿನ್ನೆಲೆಯಲ್ಲಿ ಅಕ್ರಮ ಸಂಪರ್ಕ ಕಡಿತಗೊಳಿಸಲಾಗಿದೆ. ಈಗ ಕಾನೂನು ಪ್ರಕಾರ ದಂಡ ವಿಧಿಸಲಾಗಿದೆ. ತುರ್ತು ನೀರು ಬೇಕಿದ್ದರೆ ಬಡಾವಣೆಯ ಒಬ್ಬರ ಹೆಸರಿನಲ್ಲಿ ಅರ್ಜಿ ಹಾಕಿ ನೀರಿನ ಸಂಪರ್ಕ ಪಡೆಯುವಂತೆ ಸೂಚಿಸಲಾಗಿದೆ.ಮಾನವೀಯತೆ ನೆಲೆಯಲ್ಲಿ ನೀರಿನ ಸಂಪರ್ಕ ಒದಗಿಸಬಹುದು. ಹಿರಿಯ ಅಧಿಕಾರಿಗಳ ನಿರ್ದೇಶನದ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ದಕ್ಷಿಣ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಗುರುರಾಜ್ ತಿಳಿಸಿದರು.

`ಕಾವೇರಿ ನೀರು ಪೂರೈಕೆ ಅಸಾಧ್ಯ'

`ಕಾವೇರಿ ನಾಲ್ಕನೇ ಹಂತ ಎರಡನೇ ಘಟ್ಟ ಯೋಜನೆಯ ಮೂಲಕ ಬಿಬಿಎಂಪಿಗೆ ಸೇರ್ಪಡೆಯಾದ ಪುರಸಭೆ ಹಾಗೂ ನಗರಸಭೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. 110 ಗ್ರಾಮಗಳಿಗೆ ಕಾವೇರಿ ನೀರು ಪೂರೈಕೆ ಮಾಡಲು ಸಾಧ್ಯವಿಲ್ಲ. ಈಗ ನಗರದ ಕೇಂದ್ರ ಭಾಗದಲ್ಲೇ ನೀರಿನ ಸಮಸ್ಯೆ ಇದೆ. ಇದೇ ಹೊತ್ತಿನಲ್ಲಿ ಈ ಗ್ರಾಮಗಳಿಗೂ ನೀರು ಪೂರೈಕೆ ಮಾಡಲು ಮುಂದಾದರೆ ಮತ್ತಷ್ಟು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ' ಎಂದು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.`ಈ ಪ್ರದೇಶಗಳಿಗೆ ಪರ್ಯಾಯ ಜಲಮೂಲದಿಂದ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಒಪ್ಪಿಗೆ ಸಿಕ್ಕರೆ ನೀರು ಪೂರೈಕೆ ಮಾಡಬಹುದು. ಅಲ್ಲದೆ ಎತ್ತಿನಹೊಳೆ ಯೋಜನೆ ಅನುಷ್ಠಾನವಾದಾಗ ನೀರು ಪೂರೈಸುವ ಬಗ್ಗೆ ಗಮನ ಹರಿಸಬಹುದು. ನೀರಿನ ಸಮಸ್ಯೆ ಇದೆ ಎಂಬ ಕಾರಣಕ್ಕೆ ಅಕ್ರಮ ಸಂಪರ್ಕ ಪಡೆದು ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸಲು ಮುಂದಾಗುವುದು ಅಕ್ಷಮ್ಯ. ನಿಯಮಾನುಸಾರ ನೀರಿನ ಸಂಪರ್ಕ ಪಡೆಯಲು ಮಂಡಲಿಗೆ ಅರ್ಜಿ ಸಲ್ಲಿಸಿ ಅನುಮೋದನೆ ದೊರೆತ ನಂತರವಷ್ಟೇ ಸಂಪರ್ಕ ಪಡೆಯಬೇಕಾಗುತ್ತದೆ' ಎಂದು ಅವರು ಸ್ಪಷ್ಟಪಡಿಸಿದರು.

`ಬಡಾವಣೆಗೂ ನೀರು ಕೊಡಿ'

`ನಗರದಲ್ಲಿ ದಿನನಿತ್ಯ ಲೆಕ್ಕಕ್ಕೆ ಸಿಗದಷ್ಟು ಕಾವೇರಿ ನೀರು ಪೋಲಾಗುತ್ತಿದೆ. ಬಡಾವಣೆಯಲ್ಲಿ ನೀರಿನ ಸಮಸ್ಯೆ ಗಂಭೀರ ಸ್ವರೂಪದಲ್ಲಿದೆ. ಪೋಲಾಗುವ ನೀರನ್ನು ಬಡಾವಣೆಯ ಸಾಮಾನ್ಯ ಜನರಿಗೆ ಕೊಡುವ ವ್ಯವಸ್ಥೆಯನ್ನು ಜಲಮಂಡಳಿ ಮಾಡಬೇಕು' ಎಂದು ಬಿಬಿಎಂಪಿ (ಉತ್ತರಹಳ್ಳಿ ವಾರ್ಡ್) ಸದಸ್ಯ ಕೆ. ರಮೇಶ್‌ರಾಜು ಆಗ್ರಹಿಸಿದರು.ಬಡಾವಣೆಯಲ್ಲಿ ಬಿಬಿಎಂಪಿ ವತಿಯಿಂದ ಈವರೆಗೆ 15 ಬೋರ್‌ವೆಲ್‌ಗಳನ್ನು ತೋಡಲಾಗಿದೆ. ಕಳೆದ 15 ದಿನಗಳಲ್ಲೇ 10ಕ್ಕೂ ಅಧಿಕ ಕೊಳವೆಬಾವಿಗಳನ್ನು ತೋಡಲಾಗಿದೆ. ಇದರಲ್ಲಿ ಅರ್ಧ ಇಂಚಿನಷ್ಟು ಮಾತ್ರ ನೀರು ಬಂದಿದೆ. 1,150 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಇಲ್ಲಿನ ನೀರಿನ ಪರಿಸ್ಥಿತಿ ಭಯಾನಕವಾಗಿದೆ' ಎಂದರು. ಕಾವೇರಿ ನೀರು ಪೂರೈಕೆ ಮಾಡುವಂತೆ 2 ವರ್ಷಗಳ ಹಿಂದೆಯೇ ಜಲಮಂಡಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೂ, ಈವರೆಗೂ ನೀರಿನ ಸಂಪರ್ಕ ನೀಡಿರಲಿಲ್ಲ. ಹಾಗಾಗಿ ಬಡಾವಣೆಯ ಜನರು ಅನ್ಯಮಾರ್ಗ ಕಾಣದೆ ಅಕ್ರಮ ಸಂಪರ್ಕ ಪಡೆದಿದ್ದಾರೆ. ಇದೆಲ್ಲ ಕುಡಿಯುವ ನೀರಿಗಾಗಿ ಮಾಡಿದ್ದು. ಇದರಲ್ಲಿ ಯಾವ ದುರುದ್ದೇಶ ಇಲ್ಲ' ಎಂದು ಅವರು ಸಮಜಾಯಿಷಿ ನೀಡಿದರು.

ಪ್ರತಿಕ್ರಿಯಿಸಿ (+)