ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

509 ಚಾಲಕರಿಗೆ ಚಿನ್ನದ ಪದಕ ಪ್ರದಾನ

Last Updated 24 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಗ್ರಾಮಾಂತರ ಪ್ರದೇಶಗಳಲ್ಲಿ 15 ವರ್ಷಗಳಿಂದ ಅಪಘಾತ ರಹಿತ ಚಾಲನೆ ಮಾಡಿದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 262 ಬಸ್ ಚಾಲಕರಿಗೆ ಮತ್ತು 7 ವರ್ಷಗಳಿಂದ ನಗರ ಪ್ರದೇಶಗಳಲ್ಲಿ ಅಪಘಾತ ರಹಿತ ಚಾಲನೆ ಮಾಡಿದ ಬಿಎಂಟಿಸಿಯ 247 ಮಂದಿ ಬಸ್ ಚಾಲಕರಿಗೆ ಗುರುವಾರ ‘ಮುಖ್ಯಮಂತ್ರಿಗಳ ಚಿನ್ನದ ಪದಕ’ ನೀಡಿ ಗೌರವಿಸಲಾಯಿತು.

ಇಲ್ಲಿನ ‘ಸಾರಿಗೆ ಭವನ’ದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎಂಟು ಗ್ರಾಂ ಚಿನ್ನ ಮತ್ತು 40 ಗ್ರಾಂ ಬೆಳ್ಳಿಯ ಲೇಪ ಇರುವ ಪದಕವನ್ನು ಚಾಲಕರಿಗೆ ಪ್ರದಾನ ಮಾಡಿದರು.ನಂತರ ಮಾತನಾಡಿದ ಯಡಿಯೂರಪ್ಪ ಅವರು, ‘1.06 ಲಕ್ಷ ಮಂದಿಗೆ ಉದ್ಯೋಗ ನೀಡಿರುವ ಸಾರಿಗೆ ಇಲಾಖೆ ರಾಜ್ಯದ ಎರಡನೇ ಅತಿದೊಡ್ಡ ಉದ್ಯೋಗದಾತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆ ಪಡೆದಿರುವ ಪ್ರಶಸ್ತಿಗಳು ನಾಡಿಗೆ ಗೌರವ ತಂದಿವೆ’ ಎಂದು ಶ್ಲಾಘಿಸಿದರು.

ಸಾರಿಗೆ ಸಚಿವ ಆರ್. ಅಶೋಕ ಅವರು ಮಾತನಾಡಿ, ‘ಟ್ರೈನಿ ಚಾಲಕರಿಗೆ ನೀಡುವ ಮಾಸಿಕ ಭತ್ಯೆಯನ್ನು ಈ ಬಾರಿ ರೂ 1000ದಿಂದ ರೂ 1400ಕ್ಕೆ ಏರಿಸಬೇಕು ಮತ್ತು ಎರಡನೆ ವರ್ಷದಲ್ಲಿರುವ ಟ್ರೈನಿ ಚಾಲಕರ ಭತ್ಯೆಯನ್ನು ರೂ 600ರಿಂದ ರೂ 900ಕ್ಕೆ ಏರಿಸಬೇಕು ಎನ್ನುವ ಯೋಚನೆ ಇದೆ. ಇದಕ್ಕೆ ರೂ 50 ಕೋಟಿ ಮೀಸಲಿರಿಸಿದ್ದೇವೆ’ ಎಂದು ತಿಳಿಸಿದರು.

‘ಅಲ್ಲದೆ, ಟ್ರೈನಿ ಬಸ್ ಚಾಲಕರಿಗೂ ಈ ಬಾರಿಯಿಂದ ವೈದ್ಯಕೀಯ ಸವಲತ್ತುಗಳು ದೊರೆಯುವಂತೆ ಮಾಡಲಾಗುವುದು. ಇದಕ್ಕೆ ರೂ 4 ಕೋಟಿ ಮೀಸಲಿರಿಸಿದ್ದೇವೆ’ ಎಂದರು.ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಸ್ತುತ 23 ಸಾವಿರ ಬಸ್‌ಗಳನ್ನು ಹೊಂದಿದೆ. ಈ ವರ್ಷದಲ್ಲಿ 20 ಸಾವಿರ ಮಂದಿ ಚಾಲಕರು ಮತ್ತು ನಿರ್ವಾಹಕರನ್ನು ಹೊಸದಾಗಿ ನೇಮಕ ಮಾಡಲಾಗಿದೆ. ಎರಡು ವರ್ಷಗಳಲ್ಲಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ 30 ಪ್ರಶಸ್ತಿಗಳು ಸಂಸ್ಥೆಗೆ ಲಭಿಸಿವೆ, ನಾಲ್ಕು ವರ್ಷಗಳಿಂದ ಸಂಸ್ಥೆ ನಷ್ಟವಿಲ್ಲದೆ ನಡೆಯುತ್ತಿದೆ ಎಂದರು.

ಬಸ್ ಪ್ರಯಾಣದ ಟಿಕೆಟ್‌ಗಳಿಂದ ಮಾತ್ರವಲ್ಲದೆ ಇತರ ಮೂಲಗಳಿಂದ ವರ್ಷಕ್ಕೆ ಸುಮಾರು ರೂ 70 ಕೋಟಿ ಆದಾಯ ಸಂಸ್ಥೆಗೆ ಬರುತ್ತಿದೆ ಎಂದು ತಿಳಿಸಿದರು.ಶಾಸಕ ಎನ್.ಎ. ಹ್ಯಾರಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಂ. ಕೃಷ್ಣಪ್ಪ, ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ವಿಧಾನ ಪರಿಷತ್ ಸದಸ್ಯ ಅಶ್ವತ್ಥ ನಾರಾಯಣ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸಾರಿಗೆ ಇಲಾಖೆ ಸಚಿವರ ಬದಲಾವಣೆ?

ರಾಜ್ಯ ಸಚಿವ ಸಂಪುಟದಲ್ಲಿ ಪ್ರಸ್ತುತ ಗೃಹ ಮತ್ತು ಸಾರಿಗೆ ಇಲಾಖೆಗಳ ಮಂತ್ರಿಯಾಗಿರುವ ಆರ್. ಅಶೋಕ ಅವರು ಇನ್ನು ಕೆಲವೇ ದಿನಗಳ ನಂತರ ಗೃಹ ಇಲಾಖೆಗೆ ಮಾತ್ರ ಸೀಮಿತವಾಗಲಿದ್ದಾರೆಯೇ?ಗುರುವಾರ ನಡೆದ ರಸ್ತೆ ಸಾರಿಗೆ ನಿಗಮದ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರು ಇಂಥದೊಂದು ಸೂಚನೆ ನೀಡಿದರು. ತಮ್ಮ ಭಾಷಣದ ಕೊನೆಯಲ್ಲಿ ಅವರು, ‘ಸಾರಿಗೆ ಸಚಿವರು ಒಪ್ಪಿದ್ದರೆ ಅವರಿಗೆ ಇಂದೇ ಬೀಳ್ಕೊಡುಗೆ ಕಾರ್ಯಕ್ರಮವನ್ನೂ ಮಾಡಬಹುದಿತ್ತು. ಅಶೋಕ ಅವರು ಈಗ ಗೃಹ ಸಚಿವರೂ ಆಗಿದ್ದಾರೆ...’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT