51 ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೀರಿಲ್ಲ!

7

51 ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೀರಿಲ್ಲ!

Published:
Updated:

ಶಿವಮೊಗ್ಗ: ಮಲೆನಾಡಿನಲ್ಲಿ ನದಿ, ಕೆರೆ, ಹಳ್ಳ-ಕೊಳ್ಳ, ಝರಿಗಳಿಗೆ ಕೊರತೆ ಇಲ್ಲ. ಯಥೇಚ್ಚ ನೀರಿನ ಮೂಲಗಳಿವೆ. ಆದರೂ, ಜಿಲ್ಲೆಯ 51 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ!

ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲು, ಶೌಚಾಲಯಕ್ಕೆ ಬಳಸಲು 51 ಶಾಲೆಗಳಲ್ಲಿ ನೀರಿನ ವ್ಯವಸ್ಥೆಯೇ ಇಲ್ಲ.

ಸರ್ಕಾರೇತರ ಸಂಸ್ಥೆ `ಪ್ರಜಾಯತ್ನ~ 2011ರ ನವೆಂಬರ್‌ನಿಂದ 2012 ಏಪ್ರಿಲ್‌ವರೆಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ 1,781 (ಭದ್ರಾವತಿ ತಾಲ್ಲೂಕಿನ 16 ಶಾಲೆಗಳು, ಹೊಸನಗರ 12, ಸಾಗರದ 13, ಶಿವಮೊಗ್ಗ 96, ಸೊರಬ 2 ಮತ್ತು ತೀರ್ಥಹಳ್ಳಿ 9 ಶಾಲೆಗಳನ್ನು ಹೊರತುಪಡಿಸಿ) ಪ್ರಾಥಮಿಕ ಶಾಲೆಗಳಿಂದ ಸ್ಥಳೀಯ ಶೈಕ್ಷಣಿಕ ಆಳ್ವಿಕೆಯಿಂದ ಸಂಗ್ರಹಿಸಿ ಸಿದ್ಧಪಡಿಸಿದ ವರದಿಯಲ್ಲಿ ಇದು ಬಹಿರಂಗಗೊಂಡಿದೆ.

ಹೊಸನಗರ ತಾಲ್ಲೂಕಿನ ವಸುವೆ, ಗುಬ್ಬಿಗ, ಕಲ್ಲುಹಳ್ಳ, ಕೊಳವಂಕ ಹಾಗೂ ಕೇದಲಗುಡ್ಡೆ. ಭದ್ರಾವತಿ ತಾಲ್ಲೂಕಿನ ಸಿದ್ದನಮಟ್ಟಿ, ದಾಸರಕಲ್ಲಹಳ್ಳಿ. ಸಾಗರ ತಾಲ್ಲೂಕಿನ ಮುಂಗಳಿಮನೆ, ಹೊಸಕೊಪ್ಪ, ಅಲೆಮನೆ, ಮಣಕಂದೂರು, ಸೌತ್‌ಕೆರಿ, ಹೊಸಡು, ಸುಂಕದಮನೆ, ಬಿಲ್‌ಕಂದೂರು, ಬ್ರಾಹ್ಮಣ, ಇಳಕಳಲೆ, ಸಿರುಗುಪ್ಪೆ, ಬಳಿಬೈಲು, ಇರ್ವಹಕ್ಕಿ, ಕೆರೆಹಿತ್ತಲು, ತಂಗಳವಾಡಿ, ಜಾಲಿಗದ್ದೆ ಹಾಗೂ ಬಳಸಗೋಡು. ಸೊರಬ ತಾಲ್ಲೂಕಿನ ಕಂತನಹಳ್ಳಿ, ಗಿಣಿವಾಲವಡ್ಡಗೆರೆ, ಗಿಣಿವಾಲಸಿದ್ದಿಗೆರೆ, ಸೂರಣಗಿ ಗೋಮಾಳ, ತಲಗುಂದ, ಬಳಸಗೋಡು, ಕಮಾರೂರು, ಕೈಸೋಡಿ, ಬರಿಗೆ, ಹೊಡಬಟ್ಟೆ, ಯಡಗೊಪ್ಪ, ಜಡೆಹಳ್ಳಿ, ಕೆರೆಹಳ್ಳಿ, ಹೊಸಕೊಪ್ಪ, ಅಬಸೆ, ತಂಡಿಗೆ, ಕೋಣನಜಡ್ಡು, ಹೊಸಕೊಪ್ಪ, ಶಂಕರಿಕೊಪ್ಪ, ಕೋಡಿಹಳ್ಳಿ, ತಲಗಡ್ಡೆ, ಚಿಕ್ಕಇಡಗೋಡು, ದೊಡ್ಡೇರಿ, ಜಡೆಹಳ್ಳಿ, ಬಾಸೂರು, ಪಿಳ್ಳಿಂಗೆರೆ ಹಾಗೂ ಉಳಿವಿಯ ಎರಡು ಶಾಲೆಗಳಲ್ಲಿ ನೀರಿನ ಸೌಲಭ್ಯ ಇಲ್ಲ.

ತಾಲ್ಲೂಕುವಾರು ಗಮನಿಸಿದಾಗ ಶಿಕಾರಿಪುರ ಮತ್ತು ತೀರ್ಥಹಳ್ಳಿಯ ಎಲ್ಲಾ ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿದೆ. ಉಳಿದಂತೆ ಭದ್ರಾವತಿ ತಾಲ್ಲೂಕಿನ 257 ಶಾಲೆಗಳಲ್ಲಿ ಕೊಮರನಹಳ್ಳಿ ಗ್ರಾಮ ಪಂಚಾಯ್ತಿಯ ಸಿದ್ದನಮಟ್ಟಿ ಉರ್ದು ಕಿರಿಯ ಮತ್ತು ದಾಸರಕಲ್ಲಹಳ್ಳಿ ಪಂಚಾಯ್ತಿ ಮುಖ್ಯ ಕೇಂದ್ರದಲ್ಲಿರುವ ಉರ್ದು ಕಿರಿಯ ಪ್ರಾಥಮಿಕ ಶಾಲೆಗಳು, ಹೊಸನಗರ ತಾಲ್ಲೂಕಿನ 221 ಶಾಲೆಗಳಲ್ಲಿ 4 ಗ್ರಾಮ ಪಂಚಾಯ್ತಿಗಳ 5 ಶಾಲೆಗಳು, ಸಾಗರ ತಾಲ್ಲೂಕಿನ 304 ಶಾಲೆಗಳಲ್ಲಿ 11 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ 16 ಶಾಲೆಗಳು ಮತ್ತು ಸೊರಬ ತಾಲ್ಲೂಕಿನ 314 ಶಾಲೆಗಳಲ್ಲಿ 15 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿನ 27 ಶಾಲೆಗಳು ಮತ್ತು ಶಿವಮೊಗ್ಗ ತಾಲ್ಲೂಕಿನ ಪಿಳ್ಳಿಂಗೆರೆ ಗ್ರಾಮ ಪಂಚಾಯ್ತಿಯ ಪಿಳ್ಳಿಂಗೆರೆ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ.

ನೀರಿನ ಸೌಲಭ್ಯ ಇಲ್ಲದ ಶಾಲೆಗಳ ಪೈಕಿ 42 ಶಾಲೆಗಳಿಗೆ ಗ್ರಾಮದಲ್ಲಿನ ಸಾರ್ವಜನಿಕ ನಲ್ಲಿಗಳಿಂದ ಹಾಗೂ 6 ಶಾಲೆಗಳಿಗೆ ಸಾರ್ವಜನಿಕ ಬಾವಿಗಳಿಂದ ನೀರನ್ನು ತಂದು, ಬಳಸಿದರೆ ಉಳಿದ ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯ್ತಿಯ ಕಲ್ಲುಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಲಾ ಸಮಿತಿ ಅಧ್ಯಕ್ಷರ ಮನೆಯಿಂದ, ಶಿವಮೊಗ್ಗದ ಪಿಳ್ಳಿಂಗೆರೆ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಮಸೀದಿ ನಲ್ಲಿಯಿಂದ ಮತ್ತು ಸಾಗರ ತಾಲ್ಲೂಕಿನ ಹೆಗ್ಗೋಡು ಗ್ರಾಮ ಪಂಚಾಯ್ತಿಯ ಹೊಸಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪಕ್ಕದ ಮನೆಯಿಂದ ನೀರನ್ನು ತಂದು ವಿದ್ಯಾರ್ಥಿಗಳಿಗೆ ಕುಡಿ ಯಲು ಮತ್ತು ಬಿಸಿಯೂಟ ತಯಾರಿಸಲು ಬಳಸಲಾಗುತ್ತಿದೆ.

ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಜಿಲ್ಲೆಯ 1,060 ಶಾಲೆಗಳಿಗೆ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗಿದೆ. ಅಲ್ಲದೇ, ಸಾರ್ವಜನಿಕ ಶಿಕ್ಷಣ ಇಲಾಖೆ ಕೂಡ ಬೇರೆಬೇರೆ ಕಾರ್ಯಕ್ರಮಗಳ ಅಡಿಯಲ್ಲಿ ನೀರಿನ ಸೌಲಭ್ಯವನ್ನು ಶಾಲೆಗಳಿಗೆ ಕಲ್ಪಿಸಿದೆ. ಪಂಚಾಯತ್ ರಾಜ್ ಸಂಸ್ಥೆಗಳಿಂದಲೂ ಸಾಕಷ್ಟು ಶಾಲೆಗಳು ಕುಡಿಯುವ ನೀರಿನ ಸೌಲಭ್ಯ ಪಡೆದಿವೆ ಎನ್ನುತ್ತಾರೆ ಡಿಡಿಪಿಐ ಪರಮಶಿವಯ್ಯ.

ಹೊಸನಗರ, ತೀರ್ಥಹಳ್ಳಿ ಮತ್ತು ಸಾಗರ ತಾಲ್ಲೂಕುಗಳ ಶಾಲೆಗಳಲ್ಲಿ ಬಾವಿ ತೋಡಿಸಿ ಕುಡಿಯುವ ನೀರಿನ ಸೌಕರ್ಯ ಕಲ್ಪಿಸುವ ಪ್ರಯತ್ನಗಳಾಗಿವೆ. ಹೊಸನಗರ ಕಲ್ಲುಹಳ್ಳ ಶಾಲೆಯಲ್ಲಿ ಕುಡಿಯುವ ನೀರಿಗೆಂದು ಬಾವಿ ತೋಡಲಾಗಿತ್ತು. ಆದರೆ, ಈ ಬಾವಿಯಲ್ಲಿ ಬಹಳ ದಿನ ನೀರು ಸಿಗಲಿಲ್ಲ. ಈ ಮೂರು ತಾಲ್ಲೂಕುಗಳಲ್ಲಿ ಎತ್ತರದ ಪ್ರದೇಶಗಳಿರುವ ಶಾಲೆಗಳಿಗೆ ನೀರಿನ ಸೌಕರ್ಯ ಕಲ್ಪಿಸಬೇಕಾದರೆ ಆಳವಾಗಿ ಬಾವಿ ತೋಡಿಸಬೇಕು. ಇಲ್ಲವೇ ಕೊಳವೆಬಾವಿಗಳನ್ನು ಕೊರೆಸಬೇಕು. ಇಲ್ಲದಿದ್ದರೆ ಮಳೆಗಾಲದಲ್ಲಷ್ಟೇ ನೀರು ಸಿಗುತ್ತದೆ ಎನ್ನುತ್ತಾರೆ `ಪ್ರಜಾಯತ್ನ~ ಸಂಸ್ಥೆ ಜಿಲ್ಲಾ ಸಂಯೋಜಕ ಗೋಪಾಲನಾಯ್ಕ.

ಬಾವಿಗಳನ್ನು ಆಳವಾಗಿ ತೋಡಿಸಿ, ರಿಂಗ್‌ಗಳನ್ನು ಅಳವಡಿಸುವ ಕಾರಣದಿಂದ ಗ್ರಾಮ ಪಂಚಾಯ್ತಿಗಳು ಕೂಡ ಶಾಲೆಗಳಿಗೆ ನೀರಿನ ಸೌಕರ್ಯವನ್ನು ಕಲ್ಪಿಸುವಾಗ ಹೆಚ್ಚಿನ ಹಣ ಮೀಸಲಿಡಬೇಕಾಗುತ್ತದೆ. ಜತೆಗೆ ಇಲಾಖೆ ಕೂಡ ಆಯಾ ಶಾಲೆಗಳಿರುವ ಪ್ರದೇಶಗಳನ್ನು ಗಮನದಲ್ಲಿ ಇಟ್ಟುಕೊಂಡು ಸೌಲಭ್ಯ ಮಂಜೂರು ಮಾಡಬೇಕು ಎಂದು `ಪ್ರಜಾಯತ್ನ~ ವರದಿ ಸಲಹೆ ಮಾಡಿದೆ.

ಈ ಮಧ್ಯೆ ಎಲ್ಲಾ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಲು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ತುರ್ತಾಗಿ ರಾಜ್ಯದ ಎಲ್ಲಾ ಶಾಲೆಗಳಿಗೆ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯವನ್ನು ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತು.

ಹೈಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಶಾಲೆಗಳಿಗೆ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯ ಒದಗಿಸಲಾಗಿದೆ ಎಂದು ಹೈಕೋರ್ಟ್‌ಗೆ 2012ರ ಏಪ್ರಿಲ್ ಆರಂಭದಲ್ಲಿ ಪ್ರಮಾಣ ಪತ್ರ ಸಲ್ಲಿಸಿದೆ. ಆದರೆ, ಶಿವಮೊಗ್ಗದಂತಹ ನೀರಿನ ಮೂಲ ಇರುವ ಜಿಲ್ಲೆಯಲ್ಲೇ 51 ಶಾಲೆಗಳಿಗೆ ಇನ್ನೂ ನೀರಿನ ಸೌಲಭ್ಯ ಕಲ್ಪಿಸದ ಸರ್ಕಾರ ಉಳಿದ ಜಿಲ್ಲೆಗಳಿಗೆ ಕಲ್ಪಿಸಿರಲು ಸಾಧ್ಯವೇ ಇಲ್ಲ ಎಂದು ವರದಿ ಅಭಿಪ್ರಾಯಪಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry