ಭಾನುವಾರ, ಜೂನ್ 20, 2021
26 °C

52 ಅಂಗನವಾಡಿಗಳಿಗೆ ದೇಗುಲಗಳೇ ಆಸರೆ

ಪ್ರಜಾವಾಣಿ ವಾರ್ತೆ/ ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯಲ್ಲಿ ಅಂಗನ­ವಾಡಿಗೆ ಹೋಗುವ ಮಕ್ಕಳಿಗೆ ದೇವಾಲ­ಯವೇ ಗತಿ ಎನ್ನುವಂತಾಗಿದೆ. ದೇವ­ಸ್ಥಾನದ ಆವರಣದಲ್ಲಿಯೇ ಕಾರ್ಯ­ಕರ್ತೆ­ಯರು ಮಕ್ಕಳಿಗೆ ಆಟ, ಪಾಠ­ಗಳನ್ನು ಮಾಡುತ್ತಿದ್ದು, ಕಟ್ಟ­ಡ­ಕ್ಕಾಗಿ ಕಾಯು­ವಂತಾಗಿದೆ. ಜಿಲ್ಲೆಯ ಸುಮಾರು 52 ಅಂಗನವಾಡಿ ಕೇಂದ್ರ­ಗ­ಳಿಗೆ ದೇವಾಲಯಗಳೇ ಆಸರೆ­ಯಾಗಿವೆ.ಹೌದು, ರಾಜ್ಯದ 30ನೇ ಜಿಲ್ಲೆ­ಯಾದ ಯಾದಗಿರಿಯಲ್ಲಿ ಒಟ್ಟು 1,300 ಅಂಗನವಾಡಿ ಕೇಂದ್ರಗಳಿದ್ದು, ಅವುಗಳಲ್ಲಿ 52 ಕೇಂದ್ರಗಳು ದೇವಾ­ಲಯ­ದಲ್ಲಿಯೇ ನಡೆಯುತ್ತಿವೆ. ಹಲ­ವಾರು ಸಮಸ್ಯೆಗಳ ಮಧ್ಯೆಯೂ ಈ ಕೇಂದ್ರಗಳಿಗೆ ಬರುವ ಮಕ್ಕಳನ್ನು ನೋಡಿ­ಕೊಳ್ಳುವ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರದ್ದಾಗಿದೆ.ಜಿಲ್ಲೆಯ 1,300 ಅಂಗನವಾಡಿ ಕೇಂದ್ರ­­ಗಳಲ್ಲಿ ಒಟ್ಟು 1,02,237 ಮಕ್ಕಳು ಕಲಿಯುತ್ತಿದ್ದಾರೆ. ಇವುಗಳಲ್ಲಿ 880 ಕೇಂದ್ರಗಳಿಗೆ ಸ್ವಂತ ಕಟ್ಟಡವಿದ್ದು, 149 ಅಂಗನವಾಡಿ ಕೇಂದ್ರ­­ಗಳು ಬಾಡಿಗೆ ಕಟ್ಟಡದಲ್ಲಿ ನಡೆ­ಯುತ್ತಿವೆ. ಇನ್ನು 52 ಕೇಂದ್ರಗಳು ದೇವಾ­­ಲಯಗಳಲ್ಲಿ ನಡೆಯುತ್ತಿದ್ದರೆ, ಇನ್ನೂ 241 ಕಟ್ಟಡಗಳು ಅವಶ್ಯಕ­ವಾಗಿವೆ.ಜಿಲ್ಲೆಯಲ್ಲಿ 6 ತಿಂಗಳಿನಿಂದ ಹಿಡಿದು 6 ವರ್ಷದೊಳಗಿನ ಮಕ್ಕಳು ಈ ಅಂಗನವಾಡಿ ಕೇಂದ್ರಗಳಲ್ಲಿ ಕಲಿಯು­ತ್ತಿದ್ದಾರೆ. ಅಂಗನವಾಡಿ ಕೇಂದ್ರಗಳಿಗೆ ಅಗತ್ಯವಾದ ಕಟ್ಟಡಗಳ ಕೊರತೆ ಬಹು­ದೊಡ್ಡ ಸಮಸ್ಯೆಯಾಗಿದೆ. ಚಿಕ್ಕಮಕ್ಕಳಿಗೆ ಆಟ ಆಡಿಸಿ, ಅಕ್ಷರಾಭ್ಯಾಸ ಮಾಡಿಸಿ, ಅವರಿಗೆ ಪೌಷ್ಟಿಕ ಆಹಾರವನ್ನು ಕೊಡುವ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರ ಮೇಲಿದೆ. ಆದರೆ ಬಹುತೇಕ ಕಡೆಗಳಲ್ಲಿ ಕಟ್ಟಡಗಳಿದ್ದರೆ, ಸೌಲಭ್ಯಗಳಿಲ್ಲ. ಇನ್ನೂ ಕೆಲವೆಡೆ ಕಟ್ಟಡ ಹಾಗೂ ಸೌಲಭ್ಯಗಳೆರಡೂ ಇಲ್ಲ­ದಂತಾಗಿದೆ.75 ಕಟ್ಟಡಗಳು ಅಪೂರ್ಣ: ಜಿಲ್ಲೆಯಲ್ಲಿ ಮೊದಲೇ ಅಂಗನವಾಡಿ ಕಟ್ಟಡಗಳ ಕೊರತೆ ಇದೆ. ಇದರ ಜೊತೆಗೆ ಮಂಜೂ­ರಾದ ಸುಮಾರು 75 ಕಟ್ಟಡಗಳು ಇನ್ನೂ ಪೂರ್ಣವಾಗಿಲ್ಲ. 2–3 ವರ್ಷ­ಗಳ ಹಿಂದೆ ಮಂಜೂರಾದ ಈ ಕಟ್ಟಡ­ಗಳು ಇದುವರೆಗೂ ಪೂರ್ಣವಾಗಿಲ್ಲ.ನಿವೇಶನದ ಸಮಸ್ಯೆ ಸೇರಿದಂತೆ ಹಲ­ವಾರು ತೊಂದರೆಗಳಿಂದಾಗಿ 2–3 ವರ್ಷಗಳಿಂದ ಈ ಕಟ್ಟಡಗಳ ಕಾಮ­ಗಾರಿ ಆರಂಭವಾಗಿಲ್ಲ. ಆದರೆ, ಈಗ ಕಟ್ಟಡ ಸಾಮಗ್ರಿಗಳ ಬೆಲೆಯೂ ಹೆಚ್ಚಾ­ಗಿದ್ದು, ಅಂಗನವಾಡಿ ಕೇಂದ್ರಗಳ ನಿರ್ಮಾಣ ವೆಚ್ಚವೂ ದುಬಾರಿ­ಯಾ­ಗಿದೆ. ಹೀಗಾಗಿ 2–3 ವರ್ಷಗಳ ಹಿಂದೆ ಬಿಡುಗಡೆಯಾದ ಅನುದಾನ 75 ಅಂಗ­ನ­ವಾಡಿ ಕಟ್ಟಡಗಳಿಗೆ ಸಾಕಾಗುತ್ತಿಲ್ಲ.75 ಅಂಗನವಾಡಿ ಕೇಂದ್ರಗಳಲ್ಲಿ 42 ಅಂಗನವಾಡಿ ಕೇಂದ್ರಗಳಿಗೆ ಬೇಕಾಗುವ ಅನುದಾನ ಲಭ್ಯವಾಗಿದೆ. ಇನ್ನುಳಿದ 33 ಕೇಂದ್ರಗಳಿಗೆ ಅನುದಾನದ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮೂರು ತಾಲ್ಲೂಕುಗಳಿಗೆ ನಿರ್ವಹಣೆ ಮತ್ತು ದುರಸ್ತಿಗಾಗಿ ಬರುವ ಸುಮಾರು ₨45 ಲಕ್ಷ ಕೊರತೆ ನೀಗಿಸಲು ಬಳಸ­ಲಾಗುತ್ತಿದೆ. ಈಗಾಗಲೇ ಇಲಾಖೆ­ಯಿಂದ ಅನುಮತಿ ಪಡೆದು, ಕಟ್ಟಡಗಳ ಕಾಮಗಾರಿ ಆರಂಭಿಸಲು ಸೂಚನೆ ನೀಡಲಾಗಿದೆ. ಅಲ್ಲದೇ ಶೀಘ್ರ ಪೂರ್ಣ­ಗೊಳಿ­ಸುವಂತೆ ಆದೇಶಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ತಳವಾರ ಹೇಳುತ್ತಾರೆ.15 ಕಟ್ಟಡ ಮಂಜೂರು: ಈ ಬಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿವಿಧ ಯೋಜನೆಗಳಡಿ ಸುಮಾರು 15 ಹೊಸ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಗ್ರಾಮ ಸ್ವರಾಜ್‌ ಯೋಜ­ನೆ­ಯಡಿ 11, ಉದ್ಯೋಗ ಖಾತರಿ ಯೋಜನೆಯಡಿ 1 ಹಾಗೂ ಎಸ್‌ಡಿಪಿ ಯೋಜನೆಯಡಿ 3 ಅಂಗನವಾಡಿ ಕಟ್ಟಡ­ಗಳ ನಿರ್ಮಾಣಕ್ಕೆ ಅಗತ್ಯ ಮಂಜೂರಾತಿ ದೊರಕಿದೆ. ಇದಲ್ಲದೇ ಬಿಆರ್‌ಜಿಎಫ್‌ ಅನುದಾನದಡಿಯೂ 60ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ಒಪ್ಪಿಗೆ ಸಿಗುವ ಸಾಧ್ಯತೆಗಳಿವೆ ಎಂದು ಇಲಾ­ಖೆಯ ಮೂಲಗಳು ತಿಳಿಸಿವೆ.ಅದಾಗ್ಯೂ 150ಕ್ಕೂ ಹೆಚ್ಚು ಅಂಗನ­ವಾಡಿ ಕಟ್ಟಡಗಳ ಕೊರತೆ ಎದುರಾ­ಗ­ಲಿದೆ. ಹಾಗಾಗಿ ಕೆಲವೊಂದು ಅಂಗನ­ವಾಡಿ ಕೇಂದ್ರಗಳಿಗೆ ಕಟ್ಟಡವಿಲ್ಲದೇ, ದೇವಾಲಯಗಳಲ್ಲಿ ನಡೆಸುವಂತಾಗಿದೆ.ಕಟ್ಟಡ ಅಗತ್ಯ: ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿ­ಕರು, ಇನ್ನಿತರ ಬಡಜನರ ಮಕ್ಕಳೇ ಕಲಿಯುತ್ತಾರೆ. ಸರ್ಕಾರಿ ಬಡಜನರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮ­ಗಳನ್ನು ರೂಪಿಸುತ್ತಿದ್ದು, ಬಡವರ ಮಕ್ಕಳಿ­ಗಾಗಿ ಇರುವ ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದು ರಾಜ್ಯ ಕಟ್ಟಡ ಕಟ್ಟುವ ಹಾಗೂ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೈದಪ್ಪ ಗುತ್ತೇದಾರ ಆಗ್ರಹಿಸಿದ್ದಾರೆ.ಬಡ ಮಕ್ಕಳಿಗೆ ಒಳ್ಳೆಯ ಸೌಕರ್ಯ­ಗಳನ್ನು ಒದಗಿಸಿದಲ್ಲಿ, ವಿದ್ಯಾಭ್ಯಾಸದ ಭದ್ರ ಬುನಾದಿ ಹಾಕಿದಂತಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು. ಅಗತ್ಯವಿರುವ ಕಡೆ­ಗಳಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಮುಂದಾ­­­ಗ­­ಬೇಕು. ಅಲ್ಲಿ ಎಲ್ಲ ಸೌಕರ್ಯ­ಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.