ಗುರುವಾರ , ಮೇ 13, 2021
16 °C
ಕೆನರಾ ಬ್ಯಾಂಕ್ ಗ್ರಾಮೀಣ ಸೇರ್ಪಡೆ ಕಾರ್ಯಕ್ರಮ

5200 ರೈತರಿಗೆ ಕಿಸಾನ್ ಕಾರ್ಡ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಠೇವಣಿ ಇಲ್ಲದೆ ಖಾತೆ ಹೊಂದಿರುವ ಗ್ರಾಹಕರಿಗೆ ಸಾಲ ನೀಡುವಾಗ ಭದ್ರತೆಗಾಗಿ ಒತ್ತಾಯಿಸಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ಕೆನರಾ ಬ್ಯಾಂಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್.ಕೆ.ದುಬೆ ತಿಳಿಸಿದರು.ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಶುಕ್ರವಾರ ಬ್ಯಾಂಕ್ ವತಿಯಿಂದ ಏರ್ಪಡಿಸಿದ್ದ ಗ್ರಾಮೀಣ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಲ ವಿತರಣೆ ಪ್ರಕ್ರಿಯೆ ಗ್ರಾಹಕ ಸ್ನೇಹಿಯಾಗಿದ್ದರೆ ಮಾತ್ರ ಬ್ಯಾಂಕಿನ ವಹಿವಾಟು ಉತ್ತಮವಾಗಿರುತ್ತದೆ. ಅರ್ಹ ಗ್ರಾಹಕರಿಗೆ ಸಾಲ ನೀಡುವಾಗ ಇಲ್ಲದ ನಿಯಮಗಳನ್ನು ಬಲವಂತವಾಗಿ ಹೇರುವಂತಿಲ್ಲ ಎಂದರು.ಜಿಲ್ಲೆಯಲ್ಲಿ 11 ಸಾವಿರ ಜನಸಂಖ್ಯೆಗೆ ಒಂದರಂತೆ ಕೆನರಾ ಬ್ಯಾಂಕ್ ಶಾಖೆಗಳಿದ್ದೂ ಸಾರ್ವಜನಿಕ ಅಗತ್ಯದ ದೃಷ್ಟಿಯಿಂದ ಇನ್ನಷ್ಟು ಶಾಖೆ ಸ್ಥಾಪಿಸಬೇಕಿದೆ. ಕನಿಷ್ಠ ಇನ್ನೂ 50 ಎಟಿಎಂಗಳನ್ನು ಸ್ಥಾಪಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಮುಖ್ಯ ವ್ಯವಸ್ಥಾಪಕರಿರುವ ಶಾಖೆಯೊಂದನ್ನು ಶೀಘ್ರದಲ್ಲೇ ತೆರೆಯಲಾಗುವುದು. ಸಣ್ಣ, ಮಧ್ಯಮ ಕೈಗಾರಿಕೆಗಳಿರುವ ಈ ಜಿಲ್ಲೆಯಲ್ಲಿ ಹೆಚ್ಚು ಹಣಕಾಸಿನ ವಹಿವಾಟು ನಡೆಯಬೇಕು. ಈ ನಿಟ್ಟಿನಲ್ಲಿ ಉದ್ಯಮಿ ಮಾರ್ಗದರ್ಶನ ಘಟಕವೂ ಬೇಕಾಗಿದೆ ಎಂದರು.ಹೈನುಗಾರಿಕೆಯನ್ನು ಆಶ್ರಯಿಸಿರುವ 20 ಸಾವಿರ ರೈತರ ಪೈಕಿ ಶೇ 50ರಿಂದ 60ರಷ್ಟು ಮಂದಿಗೆ ಬ್ಯಾಂಕ್ ವತಿಯಿಂದ ವಿಶೇಷ ಸಾಲದ ಪ್ಯಾಕೇಜ್ ನೀಡಲಾಗುವುದು. ಮನೆಗೊಂದು ಶೌಚಾಲಯ, ಸೌರ ವಿದ್ಯುತ್ ಸೌಲಭ್ಯ ಪೂರೈಕೆ ಕಾರ್ಯಕ್ರಮ ರೂಪಿಸುವ ಉದ್ದೇಶವಿದೆ ಎಂದರು.ಕೈಗಾರಿಕೆ ಬೆಳವಣಿಗೆ: ಭಾರತ ಸಬಲ ಮತ್ತು ಸದೃಢ ರಾಷ್ಟ್ರವಾಗಿ ಅಭಿವೃದ್ಧಿಯಾಗಬೇಕಾದರೆ ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳು ಸೇರಿದಂತೆ ಕೈಗಾರಿಕೋದ್ಯಮ ಬೆಳವಣಿಗೆಯಾಗಬೇಕು ಎಂದು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳ ಉತ್ಪಾದನೆ ಶೇ 45 ರಷ್ಟಿದ್ದು, ಅದರಲ್ಲಿ 40 ರಷ್ಟನ್ನು ರಫ್ತು ಮಾಡಲಾಗುತ್ತಿದೆ ಎಂದರು.ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸ್ವಸಹಾಯ ಸಂಘಗಳ ಸಾಲ ಮರು ಪಾವತಿಯಲ್ಲಿ ನೂರರಷ್ಟು ಸಾಧನೆಯಾಗಿರುವುದು ಪ್ರಗತಿಯ ಮುನ್ಸೂಚನೆಯಾಗಿದೆ ಎಂದರು.ಬ್ಯಾಂಕ್‌ನಿಂದ ಪಡೆದ ಸಾಲವನ್ನು ಮರುಪಾವತಿ ಮಾಡಬೇಕು. ಬ್ಯಾಂಕ್‌ಗಳು ಬದುಕಿದಾಗ ಮಾತ್ರ ಗ್ರಾಹಕರು ಬದುಕಲು ಸಾಧ್ಯ ಎಂದರು.ಶಾಸಕರಾದ ನಸೀರ್ ಅಹ್ಮದ್, ಕೆ.ಎಸ್.ಮಂಜುನಾಥ್, ಜೆ.ಕೆ.ಕೃಷ್ಣಾರೆಡ್ಡಿ, ಡಾ.ಜಿ.ಮಂಜುನಾಥ್, ಕೆ.ಎಂ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೌಡೇಶ್ವರಿ, ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್, ಚಿಕ್ಕಬಳ್ಳಾಪುರ ಹೆಚ್ಚುವರಿ ಜಿಲ್ಲಾಧಿಕಾರಿ ಸತ್ಯಭಾಮ ಮಾತನಾಡಿದರು.ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಚಂದ್ರಮೌಳಿ, ಗ್ರಾಮೀಣ ವೃತ್ತ ಕಚೇರಿಯ ಉಪ ಮಹಾ ಪ್ರಬಂಧಕ ಆರ್.ಸಂಪತ್‌ಕುಮಾರ್, ಎರಡೂ ಜಿಲ್ಲೆಗಳ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ರೆಡ್ಡಯ್ಯ ರಾಜು, ಸುಂದರೇಶ್, ನಗರ ಪ್ರಧಾನ ಶಾಖೆಯ ಮುಖ್ಯ ವ್ಯವಸ್ಥಾಪಕ ಎಸ್.ಜಿ.ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ.ಝಲ್ಫಿಕರ್ ಉಲ್ಲಾ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಎರಡೂ ಜಿಲ್ಲೆಯ 1111 ಅತಿ ಸಣ್ಣ, ಸಣ್ಣ ಉದ್ಯಮಿಗಳಿಗೆ ಸಾಲ ವಿತರಣೆ, 200 ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯದ ಸಂಪರ್ಕ, 3200 ಮಂದಿಗೆ ಓವರ್ ಡ್ರಾಫ್ಟ್ ಸಾಲ, 5200 ಮಂದಿಗೆ ಓವರ್ ಡ್ರಾಫ್ಟ್ ಕಿಸಾನ್ ಕಾರ್ಡ್‌ಗಳನ್ನು ವಿತರಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.