ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

52,162 ಮಕ್ಕಳಿಗೆ ಕಬ್ಬಿಣಾಂಶ ಮಾತ್ರೆ ವಿತರಣೆ

Last Updated 22 ಜುಲೈ 2013, 6:37 IST
ಅಕ್ಷರ ಗಾತ್ರ

ಚಾಮರಾಜನಗರ: ಹದಿಹರೆಯದವರಲ್ಲಿ ಕಂಡುಬರುವ ರಕ್ತಹೀನತೆ ನಿವಾರಿಸಲು ಜಿಲ್ಲೆಯ್ಲ್ಲಲೂ ಕಬ್ಬಿಣಾಂಶದ ಮಾತ್ರೆ ವಿತರಿಸುವ (ವೀಕ್ಲಿ ಐರನ್ ಅಂಡ್ ಪೊಲಿಕ್ ಆಸಿಡ್ ಸಪ್ಲಿಮೆಂಟೇಷನ್) ಕಾರ್ಯಕ್ರಮ ಅನುಷ್ಠಾನಗೊಂಡಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಈ ಕಾರ್ಯಕ್ರಮದ ಅನುಷ್ಠಾನದ ಹೊಣೆ ಹೊತ್ತಿವೆ. ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 6ರಿಂದ 10ನೇ ತರಗತಿಯ ಒಟ್ಟು 52,162 ಮಕ್ಕಳಿಗೆ ಕಬ್ಬಿಣಾಂಶವುಳ್ಳ ಮಾತ್ರೆಯನ್ನು ಪ್ರತಿ ಸೋಮವಾರ ಮಧ್ಯಾಹ್ನ ಉಪಹಾರದ ನಂತರ ನೀಡಲಾಗುತ್ತಿದೆ.

ದೇಶದಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವವರ ಪ್ರಮಾಣ ಹೆಚ್ಚುತ್ತಿದೆ. ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ ಪರಿಣಾಮ ರಕ್ತಹೀನತೆ ಸಮಸ್ಯೆ ಕಾಡುತ್ತದೆ. ಹದಿಹರೆಯದ 10ರಿಂದ 19ವರ್ಷ ವಯಸ್ಸಿನವರಲ್ಲಿ ಶೇ 55ರಷ್ಟು ಮಂದಿ ರಕ್ತಹೀನತೆಗೆ ತುತ್ತಾಗಿರುವುದು ಸಂಶೋಧನಾ ವರದಿಗಳಿಂದ ಬಹಿರಂಗಗೊಂಡಿದೆ.

ಈ ಹಿನ್ನೆಲೆಯಲ್ಲಿ ರಕ್ತಹೀನತೆ ಮುಕ್ತ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದನ್ವಯ ಜಿಲ್ಲೆಯಲ್ಲೂ ವಾರಕ್ಕೊಂದರಂತೆ ಕಬ್ಬಿಣಾಂಶದ ಮಾತ್ರೆ ವಿತರಿಸುವ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಈಗಾಗಲೇ, ಈ ಕಾರ್ಯಕ್ರಮಕ್ಕೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಚಾಲನೆ ನೀಡಲಾಗಿದೆ.

6ರಿಂದ 10ನೇ ತರಗತಿ ಓದುತ್ತಿರುವ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಕಬ್ಬಿಣಾಂಶದ ಮಾತ್ರೆ ನೀಡಲಾಗುತ್ತದೆ. 
ಪ್ರತಿ ಶಾಲೆಯಲ್ಲೂ ಇಬ್ಬರು ಶಿಕ್ಷಕರನ್ನು ಕಾರ್ಯಕ್ರಮಕ್ಕೆ ನೋಡೆಲ್ ಶಿಕ್ಷಕರೆಂದು ಗುರುತಿಸಿ ಕಾರ್ಯಕ್ರಮದ ಅನುಷ್ಠಾನ ನಿರ್ವಹಣೆವಹಿಸಬೇಕಿದೆ.

ಶಾಲೆಯಲ್ಲಿ ತರಗತಿ ಶಿಕ್ಷಕರು ಹಾಜರಾತಿ ಪುಸ್ತಕದಲ್ಲಿ ಮಾತ್ರೆ ಸೇವನೆಯ ಮಾಹಿತಿ ತುಂಬಬೇಕು. ಮಾಸಾಂತ್ಯಕ್ಕೆ ಆಯಾ ತರಗತಿಯ ಮಕ್ಕಳು ಮಾತ್ರೆ ಸೇವಿಸಿದ ಮಾಹಿತಿ ಕ್ರೋಡೀಕರಿಸಿ ನೋಡೆಲ್ ಶಿಕ್ಷಕರಿಗೆ ವರದಿ ನೀಡಬೇಕು. ಬಳಿಕ ಎಲ್ಲ ತರಗತಿಯ ವರದಿ ಕ್ರೋಡೀಕರಿಸಿ ಮುಖ್ಯೋಪಾಧ್ಯಾಯರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಲ್ಲಿಸಬೇಕಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಲ್ಲ ಶಾಲೆಗಳ ವರದಿ ಪರಿಶೀಲಿಸಿ ಜಿಲ್ಲಾಮಟ್ಟದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸಬೇಕು. ಜಿಲ್ಲಾ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಲ್ಲಿಸಲು ಸೂಚಿಸಲಾಗಿದೆ.

ಶಾಲೆಯಿಂದ ಹೊರಗುಳಿದ ಹದಿಹರೆಯದ ಹೆಣ್ಣುಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಐಸಿಡಿಎಸ್ ಯೋಜನೆಯಡಿ ಅಂಗನವಾಡಿ ಕೇಂದ್ರಗಳ ಮೂಲಕ ಕಾರ್ಯಕ್ರಮ ಜಾರಿಗೊಳಿಸಬೇಕಿದೆ. ಪ್ರತಿ ಸೋಮವಾರ ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳು ಅಂಗನವಾಡಿಗೆ ಬಂದು ಕಬ್ಬಿಣಾಂಶದ ಮಾತ್ರೆ ಸೇವಿಸುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಕಾರ್ಯಕರ್ತೆ ಯರಿಗೆ ನೀಡಲಾಗಿದೆ.

ಮಾತ್ರೆ ನೀಡುವ ಮೊದಲು ಹೆಣ್ಣುಮಕ್ಕಳು ಊಟ ಸೇವಿಸಿದ್ದಾರೆಯೇ? ಎಂಬ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರು ಮೊದಲು ಐಎಫ್‌ಎ ಮಾತ್ರೆ ಸೇವಿಸಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಅಂಗನವಾಡಿ ಮೇಲ್ವಿಚಾರಕರು ತಮ್ಮ ವ್ಯಾಪ್ತಿಗೆ ಬರುವ ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳ ಪಟ್ಟಿ ಕ್ರೋಡೀಕರಿಸಿ ಸಲ್ಲಿಸಬೇಕಿದೆ.

ಅಂಗನವಾಡಿ ಕಾರ್ಯಕರ್ತೆಯರು ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳ ಹಾಜರಾತಿ ಪುಸ್ತಕ ನಿರ್ವಹಣೆ ಮಾಡಬೇಕು. ತಿಂಗಳ ಅಂತ್ಯಕ್ಕೆ ಹೆಣ್ಣುಮಕ್ಕಳು ಸೇವಿಸಿದ ಮಾತ್ರೆಗಳ ಮಾಹಿತಿ ಕ್ರೋಡೀಕರಿಸಿ ಮೇಲ್ವಿಚಾರಕರಿಗೆ ಸಲ್ಲಿಸಬೇಕು. ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಆಯಾ ತಾಲ್ಲೂಕಿನ ವರದಿ ಸಂಗ್ರಹಿಸಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಕಳುಹಿಸಬೇಕು. ಜಿಲ್ಲಾಮಟ್ಟದ ಅಧಿಕಾರಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪ್ರತಿ ತಿಂಗಳ 7ರೊಳಗೆ ಜಿಲ್ಲಾ ಕ್ರೋಡೀಕರಣ ವರದಿ ಸಲ್ಲಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT