ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5265 ಫಲಾನುಭವಿಗಳಿಗೆ ಬಾಂಡ್ ವಿತರಣೆ

Last Updated 20 ಜನವರಿ 2011, 10:10 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ‘ಭಾಗ್ಯಲಕ್ಷ್ಮಿ’ ಯೋಜನೆಯಡಿ 2006-07ನೇ ಸಾಲಿನಿಂದ 2010ರ ಡಿಸೆಂಬರ್ ಅಂತ್ಯದವರೆಗೆ ಒಟ್ಟು 7,449 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಈ ಪೈಕಿ 5,265 ಫಲಾನುಭವಿಗಳಿಗೆ ಠೇವಣಿ ಬಾಂಡ್‌ಗಳನ್ನು ವಿತರಿಸಲಾಗಿದೆ. ಒಟ್ಟು 6,75,48,000 ರೂಪಾಯಿಗಳನ್ನು ಭಾರತೀಯ ಜೀವ ವಿಮಾ ನಿಗಮದಲ್ಲಿ ಠೇವಣಿ ಇರಿಸಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಈ ಯೋಜನೆಯಡಿ 1435 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, 920 ಫಲಾನುಭವಿಗಳಿಗೆ ಠೇವಣಿ ಬಾಂಡ್‌ಗಳನ್ನು ವಿತರಿಸಲಾಗಿದೆ. ಒಟ್ಟು 1,74,42,200 ರೂಪಾಯಿಗಳನ್ನು ಜೀವ ವಿಮಾ ನಿಗಮದಲ್ಲಿ ಠೇವಣಿಯಿಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ವಿಜಯಲಕ್ಷ್ಮಿ ಶೆಣೈ ಮಾಹಿತಿ ನೀಡಿದ್ದಾರೆ.

ಐಸಿಡಿಎಸ್ ಯೋಜನೆ: ಕೊಡಗು ಜಿಲ್ಲೆಯಲ್ಲಿನ ಮೂರು ತಾಲ್ಲೂಕುಗಳ 0-6 ವರ್ಷದ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಹಾಗೂ ಪ್ರಾಯ ಪೂರ್ವ ಬಾಲಕಿಯರು (ಕಿಶೋರಿಯರು), ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರೂ ಸೇರಿದಂತೆ ಒಟ್ಟು 39,981 ಫಲಾನುಭವಿಗಳ ಪೈಕಿ 38,695 ಫಲಾನುಭವಿಗಳಿಗೆ ಪೂರಕ ಪೌಷ್ಠಿಕ ಆಹಾರ ಒದಗಿಸಲಾಗುತ್ತಿದ್ದು, ಶೇ 97ರಷ್ಟು ಸಾಧನೆ ಮಾಡಲಾಗಿದೆ.

ಪೂರಕ ಪೌಷ್ಠಿಕ ಆಹಾರ ಯೋಜನೆಯಡಿ ಬಿಡುಗಡೆಯಾದ 75.83 ಲಕ್ಷ ರೂಪಾಯಿಗಳ ಪೈಕಿ 70.75 ಲಕ್ಷ ರೂಪಾಯಿ ಖರ್ಚಾಗಿದ್ದು, ಶೇ 93ರಷ್ಟು ಸಾಧನೆಯಾಗಿದೆ. ಜಿಲ್ಲೆಯ 847 ಅಂಗನವಾಡಿ ಕೇಂದ್ರಗಳು ಹಾಗೂ 23 ಮಿನಿ ಅಂಗನವಾಡಿ ಕೇಂದ್ರಗಳ ಪೈಕಿ 608 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸ್ತ್ರೀಶಕ್ತಿ ಯೋಜನೆ:
ಜಿಲ್ಲೆಯಲ್ಲಿ ಒಟ್ಟು 928 ಗ್ರಾಮೀಣ ಹಾಗೂ 53 ನಗರ ಸ್ತ್ರೀಶಕ್ತಿ ಗುಂಪುಗಳಿದ್ದು, 2000ದಿಂದ ಇದುವರೆಗೆ ಈ ಗುಂಪುಗಳು 8.98 ಲಕ್ಷ ರೂಪಾಯಿ ಮೊತ್ತ ಉಳಿತಾಯ ಮಾಡಿವೆ.

ಸ್ತ್ರೀಶಕ್ತಿ ಗುಂಪುಗಳು 26.77 ಕೋಟಿ ರೂಪಾಯಿ ಆಂತರಿಕ ಸಾಲ ಪಡೆದಿವೆ. ಇಲಾಖೆ ವತಿಯಿಂದ 760 ಗುಂಪುಗಳಿಗೆ ತಲಾ ರೂ. 5 ಸಾವಿರ ಸುತ್ತು ನಿಧಿಯಂತೆ ಒಟ್ಟು 2.58 ಲಕ್ಷ ಸುತ್ತು ನಿಧಿ ಹಾಗೂ ಎಸ್‌ಜಿಎಸ್‌ವೈ ಯೋಜನೆಯಡಿ ತಲಾ 10,000 ರೂಪಾಯಿಗಳಂತೆ 62 ಗುಂಪುಗಳಿಗೆ, ಇಲಾಖೆ ಹಾಗೂ ಎಸ್‌ಜಿಎಸ್‌ವೈನಿಂದ 252 ಗುಂಪುಗಳಿಗೆ ಒಟ್ಟು 13.35 ಲಕ್ಷ ರೂಪಾಯಿ ಸುತ್ತುನಿಧಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಡ ಮಹಿಳೆಯರು ವಿವಿಧ ರೀತಿಯ ಆರ್ಥಿಕ ಚಟುವಟಿಕೆ ನಡೆಸಿ ಜೀವನದಲ್ಲಿ ಸ್ವಾವಲಂಬನೆ ಸಾಧಿಸಲು ‘ಉದ್ಯೋಗಿನಿ’ ಯೋಜನೆಯಡಿ 2010-11ನೇ ಸಾಲಿಗೆ ಜಿಲ್ಲೆಗೆ 100 ಭೌತಿಕ ಗುರಿ ನೀಡಿದ್ದು, ರೂ. 8.75 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ.ಈಗಾಗಲೇ 95 ಭೌತಿಕ ಗುರಿ ಸಾಧನೆ ಮಾಡಿ 4.25 ಲಕ್ಷ ರೂಪಾಯಿ ಸಹಾಯಧನ ವಿತರಿಸಲಾಗಿದೆ. 2010ರ ಡಿಸೆಂಬರ್‌ವರೆಗೆ ಶೇ 95 ಭೌತಿಕ ಹಾಗೂ ಶೇ 49 ಆರ್ಥಿಕ ಸಾಧನೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT