ಮಂಗಳವಾರ, ಮೇ 11, 2021
28 °C

53 ಲಕ್ಷ ಯುವಜನಾಂಗ ಉನ್ನತ ಶಿಕ್ಷಣದಿಂದ ಹೊರಗೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ರಾಜ್ಯದಲ್ಲಿ 70 ಲಕ್ಷ ಯುವಕ-ಯುವತಿಯರಿದ್ದಾರೆ. ಆದರೆ, ಉನ್ನತ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಕೇವಲ 17 ಲಕ್ಷ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.ಸಮೀಪದ ತೊಳಹುಣಸೆಯಲ್ಲಿರುವ ದಾವಣಗೆರೆ ವಿಶ್ವವಿದ್ಯಾಲಯದ `ಶಿವಗಂಗೋತ್ರಿ' ಕ್ಯಾಂಪಸ್‌ನಲ್ಲಿ ವಿವಿಯ ಆಡಳಿತ ಭವನದ ಉದ್ಘಾಟನೆ ನೆರವೇರಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`53 ಲಕ್ಷ ಯುವ ಸಮೂಹ ಉನ್ನತ ಶಿಕ್ಷಣದಿಂದ ಹೊರಗಿದ್ದು, ಅವರನ್ನು ಒಳಗೊಳಿಸುವ ಕೆಲಸ ನಡೆಯಬೇಕು. ವಿವಿಗಳಲ್ಲಿ ಸಂಶೋಧನೆ, ಅನ್ವೇಷಣೆಗೆ ಒತ್ತು ನೀಡಬೇಕು. ಯುವ ಸಮೂಹವನ್ನು ದೇಶದ ಆಸ್ತಿಯನ್ನಾಗಿ ಬೆಳೆಸಬೇಕು' ಎಂದು ಹೇಳಿದರು.`ನಾವಿಂದು 21ನೇ ಶತಮಾನದಲ್ಲಿದ್ದರೂ, ಸರ್ಕಾರಿ ಕಾಲೇಜುಗಳಲ್ಲಿ ಗುಣಮಟ್ಟದ ಕೊರತೆ ಇದೆ. ಹಲವು ಖಾಸಗಿ ಕಾಲೇಜುಗಳಲ್ಲೂ ಗುಣಮಟ್ಟವಿಲ್ಲ. ಗುಣಮಟ್ಟ ವೃದ್ಧಿಸುವ ಜವಾಬ್ದಾರಿ ಸರ್ಕಾರ, ಜನಪ್ರತಿನಿಧಿಗಳು, ಬೋಧಕ ಸಿಬ್ಬಂದಿ ಮೇಲಿದೆ ಎಂದರು.ವಿದ್ಯಾರ್ಥಿಗಳಿಗೆ ಹಲವು ಕೋರ್ಸ್‌ಗಳ ಆಯ್ಕೆಯ ಅವಕಾಶ ಇರಬೇಕು. ಶಿಕ್ಷಣ ಕೈಗೆಟುಕಬೇಕು. ಪದವಿ ಪಡೆದ ಕೂಡಲೇ ಉದ್ಯೋಗ ಸಿಗುವಂತಾಗಬೇಕು. ಸಂಖ್ಯೆಗಿಂತ, ಗುಣಮಟ್ಟದ ಪದವೀಧರರನ್ನು ರೂಪಿಸುವುದು ಇಂದಿಗ ಅಗತ್ಯ ಎಂದು ಹೇಳಿದರು.ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಮಾತನಾಡಿ, ವಿಶ್ವವಿದ್ಯಾಲಯದ 21 ವಿಭಾಗಗಳಲ್ಲೂ ಬೋಧಕ-ಬೋಧಕೇತರ ಸಿಬ್ಬಂದಿ ಕೊರತೆ ಇದ್ದು, ನೇಮಕಾತಿಗೆ ಕ್ರಮ ಕೈಗೊಳ್ಳಬೇಕು. ಹಿಂದಿನ ಮುಖ್ಯಮಂತ್ರಿ ಘೋಷಿಸಿದ್ದ ರೂ 10 ಕೋಟಿ ವಿಶೇಷ ಅನುದಾನ ಬಿಡುಗಡೆಗೊಳಿಸಬೇಕು. ದೃಶ್ಯ ಕಲಾ ಕಾಲೇಜಿನಲ್ಲಿ ಕಲಾಗ್ಯಾಲರಿ ನಿರ್ಮಾಣಕ್ಕೆ ರೂ 2 ಕೋಟಿ ನೀಡಬೇಕು. ವಾಣಿಜ್ಯ ವಿಷಯಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ದಾವಣಗೆರೆಯಲ್ಲಿ ಸರ್ಕಾರಿ ವಾಣಿಜ್ಯ ಕಾಲೇಜು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.ಚಿತ್ರದುರ್ಗ ಕ್ಷೇತ್ರದ ಸಂಸತ್ ಸದಸ್ಯ ಜನಾರ್ದನ ಸ್ವಾಮಿ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆ ಓದಿಗೆ, ಪರೀಕ್ಷೆಗೆ ಸೀಮಿತವಾಗಿದೆ. ಅಂಕವಷ್ಟೇ ಮುಖ್ಯವಲ್ಲ; ಓದಿದನ್ನು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿದ್ದಾರೆ ಎಂಬುದು ಮುಖ್ಯ ಎಂದರು.ವಿವಿಯ ಕೆಫೆಟೇರಿಯಾ ಉದ್ಘಾಟಿಸಿದ ಸಂಸತ್ ಸದಸ್ಯ ಜಿ.ಎಂ.ಸಿದ್ದೇಶ್ವರ ಮಾತನಾಡಿ, ದಾವಣಗೆರೆ ವಿವಿಗೆ ರಾಜ್ಯ ಸರ್ಕಾರದಿಂದ ರೂ 37.30 ಕೋಟಿ, ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದಿಂದ ರೂ 26.44 ಕೋಟಿ ಅನುದಾನ ತಂದು ಕುಲಪತಿ ಪ್ರೊ.ಇಂದುಮತಿ ಬಹಳಷ್ಟು ಅಭಿವೃದ್ಧಿಪಡಿಸಿದ್ದಾರೆ. ಚಿತ್ರದುರ್ಗದಲ್ಲಿ 80 ಎಕರೆಯಲ್ಲಿರುವ ಸ್ನಾತಕೋತ್ತರ ಕೇಂದ್ರದ ಜಾಗಕ್ಕೆ ಸಂಬಂಧಿಸಿದಂತೆ ಅನುಮತಿ ದೊರೆತಿಲ್ಲ. ಸಚಿವರು ಅನುಮತಿ ಕೊಡಿಸಬೇಕು ಎಂದು ಒತ್ತಾಯಿಸಿದರು.ವಿವಿಯ ಬ್ಯಾಂಕ್, ಅಂಚೆ ಕಚೇರಿ ಹಾಗೂ ಪೊಲೀಸ್ ಚೌಕಿ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಮಾತನಾಡಿ, ದಾವಣಗೆರೆ ವಿವಿ ಕಲ್ಲುಮುಳ್ಳಿನ ಹಾದಿಯಲ್ಲಿ ಸಾಗಿ ಇಲ್ಲಿವರೆಗೆ ಬಂದಿರುವುದೇ ವಿಸ್ಮಯ. ವಿವಿಗಿಂತ ಮುಂಚಿದ್ದ ಸ್ನಾತಕೋತ್ತರ ಕೇಂದ್ರಕ್ಕೆ ಸೀಮೆಸುಣ್ಣ, ಡಸ್ಟರ್‌ನಿಂದ ಹಿಡಿದು ಜಾಗದವರೆಗೆ ಬಾಪೂಜಿ ವಿದ್ಯಾಸಂಸ್ಥೆ ನೀಡಿದೆ ಎಂದು ತಿಳಿಸಿದರು.ಕುಲಪತಿ ಪ್ರೊ.ಎಸ್.ಇಂದುಮತಿ ವಿವಿ ಅಭಿವೃದ್ಧಿಗೆ ಬಹಳ ಶ್ರಮಿಸಿದ್ದಾರೆ. ಹೊಸ ಸರ್ಕಾರ ಬಂದಾಗ ಅಧಿಕಾರಿಗಳು ಬದಲಾಗುವಂತೆ, ವಿರೋಧ ಮಾಡಿದ ಶಾಸಕರು, ಸಂಸದರು ಈಗ ಇಂದುಮತಿ ಅವರನ್ನು ಬೆಂಬಲಿಸುತ್ತಿದ್ದಾರೆ. ಕುಲಪತಿಯನ್ನು ಮತ್ತೊಂದು ಅವಧಿಗೆ ಮುಂದುವರಿಸಬೇಕು ಎಂದು  ಒತ್ತಾಯಿಸಿದರು.ಶಿವಯೋಗಿಸ್ವಾಮಿ ಮಾತಿಗೆ ದನಿಗೂಡಿಸಿದ ಅವರು, ನಗರದಲ್ಲಿ ವಾಣಿಜ್ಯ ಕಾಲೇಜು ಸ್ಥಾಪಿಸಬೇಕು. ಬಹುತೇಕ ಕಾಲೇಜುಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕುಲಪತಿ ಪ್ರೊ.ಇಂದುಮತಿ, 73 ಎಕರೆ ವಿಶಾಲ ಜಾಗದಲ್ಲಿ, ದಾನಿಗಳೇ ನೀಡಿದ ಜಮೀನಿನಲ್ಲಿ ಆರಂಭ ವಾಗಿರುವ ದೇಶದ ಪ್ರಥಮ ವಿವಿ ಇದು. 112 ಸಂಯೋಜಿತ ಕಾಲೇಜುಗಳಲ್ಲಿ 60 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಿದರು.ವಿವಿಗೆ ಜಾಗ ದಾನಮಾಡಿದ ರಾಜನಹಳ್ಳಿ ರಮಾನಂದ ಅವರನ್ನು ಇದೇವೇಳೆ ಸನ್ಮಾನಿಸಲಾಯಿತು.ಶಾಸಕರಾದ ಎಸ್.ಎಸ್.ಮಲ್ಲಿಕಾರ್ಜುನ, ಎಚ್.ಎಸ್.ಶಿವಶಂಕರ್, ಡಿ.ಜಿ.ಶಾಂತನಗೌಡ, ಶಿವಮೂರ್ತಿ, ಎಂ.ಪಿ.ರವೀಂದ್ರ, ಗೋವಿಂದಪ್ಪ, ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ, ಕುವೆಂಪು ವಿವಿ ಕುಲಪತಿ ಪ್ರೊ.ಎಸ್.ಎ.ಬಾರಿ, ಮಹಿಳಾ ವಿವಿ ಕುಲಪತಿ ಮೀನಾ ಚಂದಾವರ್‌ಕರ್, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯೆಲ್ ಹಾಜರಿದ್ದರು.ಶ್ರುತಿ ಪ್ರಕಾಶ್ ಪ್ರಾರ್ಥಿಸಿದರು. ಕುಲಸಚಿವ ಪ್ರೊ.ಡಿ.ಎಸ್.ಪ್ರಕಾಶ್ ಸ್ವಾಗತಿಸಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ಬಕ್ಕಪ್ಪ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ರಾಜಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.