ಸೋಮವಾರ, ಮೇ 25, 2020
27 °C

55 ಯೋಜನೆಗಳಿಗೆ ಅನುಮೋದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಮುಖ ಯೋಜನೆಗಳು
*ಟೊಯೊಟಾ ಕಿರ್ಲೋಸ್ಕರ್ ಕಂಪೆನಿ ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ರೂ500 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ವಾಹನ ಬಿಡಿಭಾಗ ತಯಾರಿಕಾ ಘಟಕವನ್ನು ವಿಸ್ತರಣೆ ಮಾಡಲಿದೆ.

*ಅಮೆರಿಕ ಮೂಲದ ಟೈಕೋ ಎಲೆಕ್ಟ್ರಾನಿಕ್ಸ್ ಕಂಪೆನಿ ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ರೂ 595 ಕೋಟಿ ರೂಪಾಯಿ ಬಂಡವಾಳ ಹೂಡಿ ವಿದ್ಯುತ್ ಉಪಕರಣಗಳ ತಯಾರಿಕಾ ಘಟಕವನ್ನು ಸ್ಥಾಪಿಸಲಿದೆ.

*ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಮಹೀಂದ್ರ ಏರೋಸ್ಪೇಸ್ ಸಂಸ್ಥೆಯು 284 ಕೋಟಿ ರೂಪಾಯಿ ಬಂಡವಾಳ ಹೂಡಿ ಘಟಕ ಸ್ಥಾಪಿಸಲಿದೆ.


ಬೆಂಗಳೂರು:  ರಾಜ್ಯಕ್ಕೆ ರೂ 39,583 ಕೋಟಿ  ಬಂಡವಾಳ ಆಕರ್ಷಿಸಲಿರುವ, 1.14 ಲಕ್ಷ ಉದ್ಯೋಗ ಸೃಷ್ಟಿಸುವ ಒಟ್ಟು 55 ಯೋಜನೆಗಳಿಗೆ ಉನ್ನತಾಧಿಕಾರ ಸಮಿತಿ ಅನುಮೋದನೆ ನೀಡಿದೆ.ಮುಖ್ಯಮಂತ್ರಿಗಳ ಗೃಹಕಚೇರಿ ‘ಕೃಷ್ಣಾ’ದಲ್ಲಿ ಸೋಮವಾರ ನಡೆದ ರಾಜ್ಯ ಉನ್ನತಾಧಿಕಾರ ಸಮಿತಿ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು, ‘ಹಲವು ಕಂಪೆನಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮತ್ತು ವಿಸ್ತರಣೆಗೆ ಆಸಕ್ತಿ ತೋರಿಸಿವೆ’ ಎಂದರು. 2012 ಜೂನ್ ತಿಂಗಳಿನಲ್ಲಿ ಮತ್ತೆ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗುವುದು.ಈ ಸಮಾವೇಶದ ಮೂಲಕ ರೂ  5 ಲಕ್ಷ ಕೋಟಿ ರೂಪಾಯಿ ಬಂಡವಾಳ ಆಕರ್ಷಿಸುವ ಗುರಿ ಹೊಂದಲಾಗಿದೆ ಎಂದರು. ಕಳೆದ ವರ್ಷ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಒಟ್ಟು 204 ಯೋಜನೆಗಳಿಗೆ ಅನುಮತಿ ನೀಡಲಾಗಿತ್ತು. ಅವುಗಳಲ್ಲಿ ಒಟ್ಟು 12 ಯೋಜನೆಗಳು ಮುಕ್ತಾಯ ಕಂಡಿವೆ, 20 ಯೋಜನೆಗಳು ಮುಕ್ತಾಯದ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು.ಯೋಜನೆಗೆ ಅನುಮತಿ ಪಡೆದರೂ ಯಾವುದೇ ಕಾರ್ಯ ಆರಂಭಿಸದ ಕಂಪೆನಿಗಳ ಒಟ್ಟು 500 ಎಕರೆ ಭೂಮಿಯನ್ನು ವಾಪಸ್ ಪಡೆಯಲಾಗಿದೆ ಎಂದರು. ಇತ್ತೀಚೆಗೆ ನಡೆದ ವೈಬ್ರೆಂಟ್ ಗುಜರಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯದ ನಿಯೋಗ ರೂ  24,760 ಕೋಟಿಗಳಷ್ಟು ಬಂಡವಾಳ ಹೂಡಿಕೆ ಆಕರ್ಷಿಸುವ 20 ಒಡಂಬಡಿಕೆಗಳಿಗೆ ಸಹಿ ಹಾಕಿದೆ’ ಎಂದು ತಿಳಿಸಿದರು.ಮೂಲಸೌಕರ್ಯ ಅಭಿವೃದ್ಧಿ: ಒಟ್ಟು ರೂ  31,236 ಕೋಟಿ  ವೆಚ್ಚದ ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗುವ ಮೂರು ಯೋಜನೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.ಲೋಕೋಪಯೋಗಿ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮುಂದಿಟ್ಟಿರುವ ರಸ್ತೆ ಕಾರಿಡಾರ್ ಅಭಿವೃದ್ಧಿ ಯೋಜನೆ (ರೂ  728 ಕೋಟಿ), ವಿಜಯನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳನ್ನು ರೂ 30 ಸಾವಿರ ಕೋಟಿ  ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಮತ್ತ್ಙು  508 ಕೋಟಿ ವೆಚ್ಚದಲ್ಲಿ ವಾಹನದಟ್ಟಣೆ  ನಿರ್ವಹಿಸುವ ಕೇಂದ್ರಗಳ ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.