560 ಆಸ್ಪತ್ರೆಗಳಲ್ಲಿ ಕಾಸು ರಹಿತ ಚಿಕಿತ್ಸಾ ಸೌಲಭ್ಯ

7

560 ಆಸ್ಪತ್ರೆಗಳಲ್ಲಿ ಕಾಸು ರಹಿತ ಚಿಕಿತ್ಸಾ ಸೌಲಭ್ಯ

Published:
Updated:

ನವದೆಹಲಿ (ಪಿಟಿಐ):  ಕೇಂದ್ರ ಸರ್ಕಾರಿ ಸ್ವಾಮ್ಯದ ವಿಮೆ ಸಂಸ್ಥೆಗಳಲ್ಲಿ ಆರೋಗ್ಯ ವಿಮೆ ಪಾಲಿಸಿ ಪಡೆದವರಿಗೆ ಬೆಂಗಳೂರು ಸೇರಿದಂತೆ ದೇಶದ ನಾಲ್ಕು ಮಹಾನಗರಗಳಲ್ಲಿನ 560 ಆಸ್ಪತ್ರೆಗಳಲ್ಲಿ  ಇನ್ನು ಮುಂದೆ ಕಾಸು ರಹಿತ ಚಿಕಿತ್ಸಾ ಸೌಲಭ್ಯ ದೊರೆಯಲಿದೆ ಎಂದು  ರಾಜ್ಯಸಭೆಗೆ ತಿಳಿಸಲಾಯಿತು.ಬೆಂಗಳೂರು, ಚೆನ್ನೈ,  ಮುಂಬೈ ಮತ್ತು ದೆಹಲಿಯಲ್ಲಿ  ಜಾರಿಗೆ ತಂದಿರುವ ‘ಆದ್ಯತಾ ಸೇವಾ ಜಾಲ’ (ಪಿಪಿಎನ್) ವ್ಯವಸ್ಥೆಯ ವ್ಯಾಪ್ತಿಗೆ 560 ಆಸ್ಪತ್ರೆಗಳು ಸೇರ್ಪಡೆಗೊಂಡಿವೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ತಿಳಿಸಿದರು.ಈ ‘ಪಿಪಿಎನ್’ ಜಾಲವನ್ನು ಅಹ್ಮದಾಬಾದ್, ಕೋಲ್ಕತ್ತಾ, ಹೈದರಾಬಾದ್ ಮತ್ತು ಚಂಡೀಗಡ ನಗರಗಳಿಗೆ ವಿಸ್ತರಿಸಲೂ ನಿರ್ಧರಿಸಲಾಗಿದೆ. ಸರ್ಕಾರಿ ಸ್ವಾಮ್ಯದ ವಿಮೆ ಸಂಸ್ಥೆಗಳು ‘ಆದ್ಯತಾ ಸೇವಾ ಜಾಲ’ ವ್ಯಾಪ್ತಿಯಲ್ಲಿ ಆಸ್ಪತ್ರೆಗಳ ಜಾಲ ಹೊಂದಿದ್ದು ಇಲ್ಲಿ ಕಾಸುರಹಿತ ಆರೋಗ್ಯ ವಿಮೆ ಸೌಲಭ್ಯ ದೊರೆಯುತ್ತಿದೆ.ವಿಮೆ ಸಂಸ್ಥೆಗಳು ಮತ್ತು ಮೆಡಿಕ್ಲೇಮ್ ಪಾಲಿಸಿದಾರರ ಮಧ್ಯೆ ಮಧ್ಯವರ್ತಿಗಳಂತೆ ಕಾರ್ಯನಿರ್ವಹಿಸುವ ಸಂಸ್ಥೆಗಳ (ಟಿಪಿಎ) ಜೊತೆ ಆಗಿರುವ ಒಪ್ಪಂದದ ಅನ್ವಯ ಸೇವಾ ಜಾಲ ವ್ಯಾಪ್ತಿಯಲ್ಲಿ ಬರುವ ಆಸ್ಪತ್ರೆಗಳನ್ನು ನಿರ್ದಿಷ್ಟವಾಗಿ ಗುರುತಿಸಲಾಗುವುದು. ‘ಕಾಸು ರಹಿತ’ ಚಿಕಿತ್ಸೆ ನೀಡಲು ಮುಂದೆ ಬಂದಿರುವ  ಆಸ್ಪತ್ರೆಗಳನ್ನು ಮತ್ತು ಪಟ್ಟಿಯನ್ನು ಕಾಲ ಕಾಲಕ್ಕೆ ಪರಿಷ್ಕರಿಸಲಾಗುವುದು.ತುರ್ತು ಸಂದರ್ಭಗಳಲ್ಲಿ ಮೆಡಿಕ್ಲೇಮ್ ಪಾಲಿಸಿದಾರರಿಗೆ ‘ಪಿಪಿಎನ್’ ಆಸ್ಪತ್ರೆಗಳಲ್ಲದೇ ಇತರ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಒದಗಿಸಬೇಕು ಎಂದು ‘ಕಾಸು ರಹಿತ ಚಿಕಿತ್ಸಾ’ ವ್ಯವಸ್ಥೆಯಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳಿಗೆ (ಟಿಪಿಎ) ಸೂಚಿಸಲಾಗಿದೆ ಎಂದೂ ಪ್ರಣವ್ ತಿಳಿಸಿದರು.ಕೆಲ ಖಾಸಗಿ ಆಸ್ಪತ್ರೆಗಳು ದುಬಾರಿ ಶುಲ್ಕ ವಸೂಲಿ ಮಾಡುತ್ತಿವೆ ಎಂದು ಆರೋಪಿಸಿ ಸರ್ಕಾರಿ ಸ್ವಾಮ್ಯದ ವಿಮೆ ಸಂಸ್ಥೆಗಳಾದ ನ್ಯೂ ಇಂಡಿಯಾ ಅಶ್ಯುರನ್ಸ್,  ಯೂನೈಟೆಡ್ ಇಂಡಿಯಾ ಇನ್ಶುರನ್ಸ್, ನ್ಯಾಷನಲ್ ಇನ್ಶುರನ್ಸ್ ಮತ್ತು ಓರಿಯಂಟಲ್ ಇನ್ಶುರನ್ಸ್ ಸಂಸ್ಥೆಗಳು ಕಳೆದ ವರ್ಷದ ಜುಲೈ 1ರಿಂದ ‘ಕಾಸು ರಹಿತ’ ಚಿಕಿತ್ಸಾ ಸೌಲಭ್ಯ  ಸ್ಥಗಿತಗೊಳಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry