ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

570 ಶಾಲೆಗಳಿಗೆ ಕಂಪ್ಯೂಟರ್

Last Updated 15 ಅಕ್ಟೋಬರ್ 2012, 19:20 IST
ಅಕ್ಷರ ಗಾತ್ರ

ಬೆಂಗಳೂರು: ಶಾಲಾ ಹಂತದಲ್ಲೇ ಕಂಪ್ಯೂಟರ್ ನೆರವಿನಿಂದ ಮಕ್ಕಳಿಗೆ ಪರಿಣಾಮಕಾರಿಯಾಗಿ ಬೋಧಿಸುವುದಕ್ಕಾಗಿ 570 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಈ ವರ್ಷ ತಲಾ ಐದು ಕಂಪ್ಯೂಟರ್‌ಗಳನ್ನು ವಿತರಿಸಲು ಸರ್ಕಾರ ನಿರ್ಧರಿಸಿದೆ.

ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಇಲ್ಲಿಯವರೆಗೆ 3,699 ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ವಿತರಿಸಲಾಗಿದೆ. ಈ ವರ್ಷ 570 ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ವಿತರಿಸಲು ಟೆಂಡರ್ ಕರೆಯಲಾಗಿದೆ ಎಂದು ಸರ್ವ ಶಿಕ್ಷಣ ಅಭಿಯಾನ ಯೋಜನೆಯ ರಾಜ್ಯ ಯೋಜನಾ ನಿರ್ದೇಶಕ ವಿಪುಲ್ ಬನ್ಸಲ್ `ಪ್ರಜಾವಾಣಿ~ಗೆ ತಿಳಿಸಿದರು.

ಶೈಕ್ಷಣಿಕ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವುದು, ಕಂಪ್ಯೂಟರ್ ಸಹಾಯದಿಂದ ಮಕ್ಕಳ ವಿಷಯ ಕಲಿಕೆಯನ್ನು ಪರಿಣಾಮಕಾರಿಗೊಳಿಸುವುದು ಹಾಗೂ ದಾಖಲಾತಿಯನ್ನು ಹೆಚ್ಚಿಸುವುದು, ಗ್ರಾಮಾಂತರ ಪ್ರದೇಶದ ಹೆಣ್ಣು ಮಕ್ಕಳಿಗೆ ಕಂಪ್ಯೂಟರ್ ತಂತ್ರಜ್ಞಾನದ ಅರಿವು ಮೂಡಿಸುವ ಉದ್ದೇಶದಿಂದ ಕಂಪ್ಯೂಟರ್‌ಗಳನ್ನು ನೀಡಲಾಗುತ್ತಿದೆ ಎಂದರು.


ರಾಜ್ಯದಲ್ಲಿ ಒಟ್ಟು 22,601 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿವೆ. 3-4 ವರ್ಷಗಳಲ್ಲಿ ಎಲ್ಲ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ಪೂರೈಸುವ ಉದ್ದೇಶವಿದೆ. ಕಂಪ್ಯೂಟರ್ ಜೊತೆಗೆ ನಿರಂತರ ವಿದ್ಯುತ್ ಪೂರೈಕೆಗಾಗಿ ಯುಪಿಎಸ್ ಸಹ ನೀಡಲಾಗುತ್ತಿದೆ. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ 13 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು ಎಂದು ತಿಳಿಸಿದರು.

ಕಂಪ್ಯೂಟರ್ ಪಡೆಯುವ ಶಾಲೆಗಳ ಒಬ್ಬರು ಅಥವಾ ಇಬ್ಬರು ಶಿಕ್ಷಕರಿಗೆ ಕಂಪ್ಯೂಟರ್ ತರಬೇತಿ ನೀಡಲಾಗುತ್ತದೆ. ಇಲ್ಲಿಯವರೆಗೆ 21,520 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. 6,87,355 ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣದ ಪ್ರಯೋಜನ ಪಡೆದಿದ್ದಾರೆ. ಈ ಉದ್ದೇಶಕ್ಕೆ ಈ ವರ್ಷ ಪ್ರತಿ ಜಿಲ್ಲೆಗೆ 50 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯೆಟ್) ಮೂಲಕ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ. ಆದಷ್ಟು ಬೇಗ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸಿ ಜನವರಿ ವೇಳೆಗೆ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ವಿತರಿಸಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT