ಮಂಗಳವಾರ, ನವೆಂಬರ್ 19, 2019
24 °C

`59 ಅಭ್ಯರ್ಥಿಗಳ 92 ನಾಮಪತ್ರ ಕ್ರಮಬದ್ಧ'

Published:
Updated:

ಯಾದಗಿರಿ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಲು ಉಮೇದುವಾರಿಕೆ ಸಲ್ಲಿಸಿದ್ದ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಕಾರ್ಯ ಗುರುವಾರ ನಡೆದಿದ್ದು, 59 ಅಭ್ಯರ್ಥಿಗಳ 92 ನಾಮಪತ್ರಗಳು ಕ್ರಮಬದ್ಧವಾಗಿದ್ದು, 6 ತಿರಸ್ಕೃತಗೊಂಡಿವೆ ಎಂದು ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್  ತಿಳಿಸಿದ್ದಾರೆ.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸುರಪುರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ತಿಮ್ಮಮ್ಮ ಕೊಡೇಕಲ್, ಯಾದಗಿರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ದೇವರಾಜ ನಾಯಕ, ಸಿದ್ರಾಮರೆಡ್ಡಿ ಬಲಕಲ್, ಡಾ. ವೆಂಕಟೇಶ ಗಡ್ಡಿಮನಿ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಇಬ್ಬರು ವಯಸ್ಸು ಕಡಿಮೆ ಇದ್ದುದರಿಂದ ಅವರ ನಾಮಪತ್ರಗಳು ತಿರಸ್ಕೃತಗೊಂಡಿವೆ. ಉಳಿದಂತೆ ಶಹಾಪುರ ಹಾಗೂ ಗುರುಮಠಕಲ್ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಎಲ್ಲ ಅಭ್ಯರ್ಥಿಗಳ ಉಮೇದುವಾರಿಕೆ ಕ್ರಮಬದ್ಧವಾಗಿವೆ ಎಂದು ತಿಳಿಸಿದರು.ಈ ಹಿಂದೆ ನಡೆದ ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳ ಸಂದರ್ಭದಲ್ಲಿ ಮತದಾನ ಪ್ರಕ್ರಿಯೆಗೆ ಅಡ್ಡಿ ಮಾಡಿದ ಆರೋಪ ಎದುರಿಸುತ್ತಿರುವವರ ಮೇಲೆ ಕಣ್ಣಿಡಲಾಗಿದೆ.ರೌಡಿ ಶೀಟರ್‌ಗಳ ಮೇಲೆ ಮುನ್ನೆಚ್ಚರಿಕೆ ಕ್ರಮವಾಗಿ ಸಿಆರ್‌ಪಿಸಿ 107 ಪ್ರಕಾರ ಪ್ರಕರಣ ದಾಖಲಿಸಲಾಗಿದ್ದು, ಅವರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಈಗಾಗಲೇ 160 ರೌಡಿ ಶೀಟರ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, ಇನ್ನೂ ಸುಮಾರು 400 ಜನರ ಮೇಲೆ ಪ್ರಕರಣ ದಾಖಲಿಸಲಾಗುವುದು. ವಿವಿಧ ಪ್ರಕರಣಗಳಲ್ಲಿ ಜಾಮೀನು ರಹಿತ ವಾರಂಟ್ ಎದುರಿಸುತ್ತಿರುವವರ ಮೇಲೂ ಕಣ್ಣಿಡಲಾಗಿದೆ. ಪರವಾನಗಿ ಹೊಂದಿದ ಆಯುಧಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.ಜಿಲ್ಲೆಯಾದ್ಯಂತ 15 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಗುರುವಾರ ಯಾದಗಿರಿ ತಾಲ್ಲೂಕಿನ ಕಡೇಚೂರು ಚೆಕ್‌ಪೋಸ್ಟ್‌ನಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ ರೂ. 5 ಲಕ್ಷ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಲಾಗಿದೆ.ಬುಧವಾರ 550 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಕೇಂದ್ರೀಯ ಅರೆ ಸೇನಾ ಪಡೆಯ 10 ತುಕಡಿಗಳು ಮೊದಲ ಹಂತವಾಗಿ ಜಿಲ್ಲೆಗೆ ಆಗಮಿಸಿದ್ದು, ಅಗತ್ಯವಿದ್ದಲ್ಲಿ ಮತ್ತಷ್ಟು ಸಿಬ್ಬಂದಿ ಸೇವೆ ಪಡೆಯಲಾಗುವುದು. ಎಲ್ಲ ವಾಹನಗಳ ತಪಾಸಣೆ ಮಾಡಲಾಗುತ್ತಿದ್ದು, ಅಧಿಕಾರಿಗಳ ವಾಹನವನ್ನೂ ಬಿಡದಂತೆ ಸೂಚನೆ ನೀಡಲಾಗಿದೆ. ಇದಕ್ಕೆ ತಪ್ಪಿದಲ್ಲಿ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. 209 ಅತಿಸೂಕ್ಷ್ಮ ಹಾಗೂ 172 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಚೋಳನ್ ತಿಳಿಸಿದರು.ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೂ ವೀಕ್ಷಕರಾಗಿ ಹಿರಿಯ ಅಧಿಕಾರಿಗಳು ಆಗಮಿಸಿದ್ದಾರೆ. ಆಯಾ ಕ್ಷೇತ್ರದಲ್ಲಿ ಅವರು ಇರಲಿದ್ದು, ಚುನಾವಣಾ ಸಂಬಂಧಿ ದೂರಗಳಿದ್ದರೆ ಅವರಿಗೆ ತಿಳಿಸಬೇಕು. ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕ ರೀತಿಯಲ್ಲಿ ಚುನಾವಣೆ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ. ಮತದಾರರ ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಕನಿಷ್ಠ ಶೇ.70ರಷ್ಟು ಮತದಾನವಾದರೂ ಆಗುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದು ಹೇಳಿದರು.ಎಸ್ಪಿ ವಂಶಿಕೃಷ್ಣ, ವೀಕ್ಷಕರಾದ ಯು.ಜಿ. ಅವಾಸಕ್, ಸುಧೀರಕುಮಾರ ದೀಕ್ಷಿತ, ಕೆ.ಸಿ.ಗುಪ್ತಾ, ನರ್ಮದೇಶ್ವರಲಾಲ ಇದ್ದರು.

ಪ್ರತಿಕ್ರಿಯಿಸಿ (+)