ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5ರಂದು ಮೊದಲ ಪಟ್ಟಿ: ಶೆಟ್ಟರ್

Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ವಿಧಾನಸಭಾ ಚುನಾವಣೆಗೆ ಪಕ್ಷದ 140 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇದೇ 5ರಂದು ಬಿಡುಗಡೆ ಮಾಡಲಾಗುತ್ತದೆ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಮಂಗಳವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಟ್ಟಿ ಅಂತಿಮಗೊಳಿಸುವ ವಿಚಾರದಲ್ಲಿ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಹಾಲಿ ಶಾಸಕರಿಗೆ ಹಾಗೂ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು ಎಂದರು.

`ಮಾಧ್ಯಮ ಸಮೀಕ್ಷೆಗಳಿಂದ ರಾಜಕೀಯ ಚಿತ್ರಣ ಸಿಗದು. ಹೀಗಾಗಿ ಆತಂಕಪಡದೆ ಸಕ್ರಿಯರಾಗಿದ್ದೇವೆ. ಪಕ್ಷದ ಪ್ರತಿ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಕೋರ್ ಕಮಿಟಿ ಸದಸ್ಯರೊಂದಿಗೆ ಚರ್ಚಿಸಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ. ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಭುಗಿಲೆದ್ದಿರುವ ಅಸಮಾಧಾನ ಬಿಜೆಪಿಯಲ್ಲಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

`ಕಾಂಗ್ರೆಸ್ ಪಕ್ಷ ಇಲ್ಲಿಯವರೆಗೆ ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಲ್ಲ. ಎಸ್.ಎಂ. ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಜಿ. ಪರಮೇಶ್ವರ ಅವರಲ್ಲಿಯೇ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಇದೆ. ಕೇಂದ್ರದ ಯುಪಿಎ ಸರ್ಕಾರದ ಹಗರಣಗಳು ಹಾಗೂ ದುರಾಡಳಿತದಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದೆ. ಇದು ಬಿಜೆಪಿಗೆ ಅನುಕೂಲವಾಗಲಿದೆ' ಎಂದು ಶೆಟ್ಟರ್ ಹೇಳಿದರು.

ಟೀಕೆ ಮಾಡುವಾಗ ಕಟ್ಟುಪಾಡು ಮೀರದಂತೆ ಕೆಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೆ ಕಿವಿಮಾತು ಹೇಳಿದ ಶೆಟ್ಟರ್, `ಟೀಕಿಸಲೇಬೇಕು ಎಂದು ಅನಿವಾರ್ಯವಾಗಿ ಟೀಕೆ ಮಾಡುವುದು ಸಲ್ಲ. ಟೀಕೆಗಳು ರಚನಾತ್ಮಕವಾಗಿರಬೇಕು' ಎಂದು ಹೇಳಿದರು.

ನಿರಾಣಿ, ಬೊಮ್ಮಾಯಿ ಬಿಜೆಪಿಯಿಂದ ಸ್ಪರ್ಧೆ

ಸಚಿವ ಮುರುಗೇಶ ನಿರಾಣಿ ಮಂಗಳವಾರ ಬೆಳಿಗ್ಗೆ ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದಕ್ಕೆ ಯಾವುದೇ ಅರ್ಥ ಕಲ್ಪಿಸಬೇಕಿಲ್ಲ ಎಂದು ಹೇಳಿದ ಶೆಟ್ಟರ್, ಅದೊಂದು ಸೌಜನ್ಯ ಭೇಟಿ. ನಿರಾಣಿ ಹಾಗೂ ಬಸವರಾಜ ಬೊಮ್ಮಾಯಿ ಪಕ್ಷ ತೊರೆಯುವುದಿಲ್ಲ. ಬಿಜೆಪಿಯಿಂದಲೇ ಸ್ಪರ್ಧಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.

'ಬಿಜೆಪಿ ಟಿಕೆಟ್‌ನಡಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ ಮೋಹನ ಲಿಂಬಿಕಾಯಿ ರಾಜೀನಾಮೆ ನೀಡುವ ಮೂಲಕ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಜೊತೆಗೆ ತಮ್ಮನ್ನು ಆರಿಸಿ ಕಳುಹಿಸಿದ ಜನರಿಗೂ ಮೋಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ಅವರಿಗೆ ಬುದ್ಧಿ ಕಲಿಸಲಿದ್ದಾರೆ' ಎಂದು ಶೆಟ್ಟರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಚಾರಕ್ಕೆ ಮೋದಿ: ಈ ಬಾರಿ ಚುನಾವಣಾ ಪ್ರಚಾರಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಬರಲಿದ್ದಾರೆ. ಜೊತೆಗೆ ಪಕ್ಷದ ಕೇಂದ್ರದ ನಾಯಕರೂ ಪಾಲ್ಗೊಳ್ಳಲಿದ್ದಾರೆ ಎಂದು ಶೆಟ್ಟರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT