ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5ರಂದು ಶಾಲೆಗಾಗಿ ನಾವು-ನೀವು ಕಾರ್ಯಕ್ರಮ

Last Updated 1 ಜುಲೈ 2012, 8:35 IST
ಅಕ್ಷರ ಗಾತ್ರ

ಶಿವಮೊಗ್ಗ: ಸಾರ್ವಜನಿಕ ಶಿಕ್ಷಣ ಇಲಾಖೆ, ಮಕ್ಕಳ ಶಿಕ್ಷಣದ ಹಕ್ಕು ಕಾಯ್ದೆ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜುಲೈ 5ರಿಂದ 31ರವರೆಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ `ಶಾಲೆಗಾಗಿ ನಾವು-ನೀವು~ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಸ್. ಕುಮಾರ್ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಶಾಲಾಭಿವೃದ್ಧಿ ಸಮಿತಿಗಳ ಪದಾಧಿಕಾರಿಗಳು ಶಾಲೆಗೆ ಭೇಟಿ ನೀಡಿ, ಮಕ್ಕಳ ಶಿಕ್ಷಣದ ಹಕ್ಕು, ಕಾಯ್ದೆ ಮತ್ತಿತರ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವರು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

2ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಗುರುತಿಸಿ ದಾಖಲಿಸುವುದಲ್ಲದೆ, ವಿದ್ಯಾರ್ಥಿಗಳ ಫಲಿತಾಂಶವನ್ನಾಧರಿಸಿ ಕಾರ್ಯಾನುಸರಣೆ ಮಾಡ ಲಾಗುವುದು ಎಂದ ಅವರು, ಸಮುದಾಯದಲ್ಲಿರುವ ದಾನಿಗಳನ್ನು ಪ್ರೇರೇಪಿಸಿ ಅವರಿಂದ ಶಾಲೆಯ ಅಭಿವೃದ್ಧಿಗೆ ಕೊಡುಗೆಯನ್ನು ಪಡೆಯಲಾಗುವುದು.

ಕಳೆದ ಸಾಲಿನಲ್ಲಿ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮದಿಂದಾಗಿ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ನಗದು ಮತ್ತು ವಸ್ತುರೂಪದಲ್ಲಿ ಸುಮಾರು ್ಙ 55 ಕೋಟಿ ಮೊತ್ತದ ದೇಣಿಗೆ ಸಂಗ್ರಹವಾಗಿದೆ. ಅಲ್ಲದೇ, ವಿವಿಧ ರೀತಿಯ ಸೇವೆಯ ಜೊತೆಗೆ ಶಾಲೆಯ ಭೌತಿಕ, ಶೈಕ್ಷಣಿಕ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದರು.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆತರಲು ವಿದ್ಯಾರ್ಥಿಗಳು, ಶಿಕ್ಷಕರು, ಎಸ್‌ಡಿಎಂಸಿ ಹಳೇ ವಿದ್ಯಾರ್ಥಿಗಳು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಮತ್ತು ಅಧಿಕಾರಿಗಳನ್ನು ತೊಡಗಿಸಿಕೊಳ್ಳಲಾಗುವುದು ಎಂದರು.

ಈ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತಗೊಳ್ಳದೆ ನಿರಂತರವಾಗಿರುವಂತೆ ಆಗಸ್ಟ್ 16ರಿಂದ 2013ರ ಜನವರಿ 15ರವರೆಗೆ ಶಾಲೆಗಳಲ್ಲಿ ನಿರಂತರ ಕಾರ್ಯಾನುಸರಣೆ ನಡೆಯಲಿದೆ. ಹಾಗೆಯೇ ಜನವರಿಯಲ್ಲಿ ಎಸ್‌ಡಿಎಂಸಿ ಸದಸ್ಯರ ಸಮಾವೇಶ ನಡೆಸಲಾಗುವುದು. ಈ ಕಾರ್ಯಕ್ರಮ ಅನುಷ್ಠಾನದ ಉಸ್ತುವಾರಿಗಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಹಲವು ತಂಡಗಳನ್ನು ರಚಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸರ್ವಶಿಕ್ಷಣ ಅಭಿಯಾನ ಜಿಲ್ಲಾ ಉಪಯೋಜನ ಸಮನ್ವಯಾಧಿಕಾರಿ ಕೆ. ಗಣಪತಿ, ಶಿಕ್ಷಣ ಸಂಯೋಜಕ ಎಚ್.ಎಸ್. ಪಾಟೀಲ್, ವಿಷಯ ಪರಿವೀಕ್ಷಕ ಮತ್ತು ನೋಡಲ್ ಅಧಿಕಾರಿ ಕೆ.ಆರ್. ಉಮಾಮಹೇಶ್ ಉಪಸ್ಥಿತರಿದ್ದರು.
 

706 ಶಿಕ್ಷಕರ ಕೊರತೆ
ಜಿಲ್ಲೆಯ 92 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದು, ಈ ಶಾಲೆಗಳನ್ನು ಪಕ್ಕದ ಶಾಲೆಗಳಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಕುರಿತಂತೆ ಇದುವರೆಗೂ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂದು ಡಿಡಿಪಿಐ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಒಂದು ಅಥವಾ ಎರಡು ಮಕ್ಕಳಿದ್ದ ಶಾಲೆಗಳನ್ನು ಈಗಾಗಲೇ ಮುಚ್ಚಿದ್ದು, 2009-10ರಲ್ಲಿ 16, 10-11ನೇ ಸಾಲಿನಲ್ಲಿ 14 ಮುಚ್ಚಲಾಗಿದೆ. ಈ ಬಾರಿ 2 ಶಾಲೆಗಳನ್ನು ಮುಚ್ಚುವ ಪ್ರಸ್ತಾವ ಇದೆ. ಅದು ಇದೇ ಜೂನ್ 30ರ ನಂತರ ತಿಳಿಯಲಿದೆ ಎಂದರು.

ಜಿಲ್ಲೆಯಲ್ಲಿ 587 ಪ್ರಾಥಮಿಕ, 119 ಪ್ರೌಢಶಾಲಾ ಶಿಕ್ಷಕರ ಕೊರತೆ ಇದೆ. ರಾಜ್ಯದಲ್ಲಿ 26 ಮಕ್ಕಳಿಗೆ ಒಬ್ಬರು ಶಿಕ್ಷಕರು ಅನುಪಾತವಿದೆ. ಜಿಲ್ಲೆಯಲ್ಲಿ ಅದು 1:19 ಇದೆ. ಸದ್ಯಕ್ಕಂತೂ ಯಾವುದೇ ನೇಮಕಾತಿ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT