ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5ರಿಂದ ಐತಿಹಾಸಿಕ ನುಂಕಪ್ಪ ಜಾತ್ರೆ

Last Updated 3 ಫೆಬ್ರುವರಿ 2012, 9:15 IST
ಅಕ್ಷರ ಗಾತ್ರ

ಮೊಳಕಾಲ್ಮುರು: ರೇಷ್ಮೆ ಸೀರೆ ತಯಾರಿಕೆಯಲ್ಲಿ ರಾಜ್ಯಮಟ್ಟದಲ್ಲಿ ಹೆಸರು ಪಡೆದಿರುವ ಮೊಳಕಾಲ್ಮುರಿನಲ್ಲಿ ಫೆ. 5ರಿಂದ ನುಂಕಿಮಲೆ ಸಿದ್ದೇಶ್ವರ ಜಾತ್ರೆಗೆ ಚಾಲನೆ ದೊರೆಯಲಿದೆ.

ತಾಲ್ಲೂಕು ಹಾಗೂ ಪಟ್ಟಣ ಜನತೆ ಆರಾಧ್ಯ ದೈವವಾಗಿರುವ ನುಂಕಿಮಲೆ ಸಿದ್ದೇಶ್ವರ ಸ್ವಾಮಿ ಜಾತ್ರೆಯನ್ನು ಪ್ರತಿ ಮೂರು ವರ್ಷಕ್ಕೆ ಒಂದು ಬಾರಿ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಖರನಾಮ ಸಂವತ್ಸರ ಮಾಘ ಬಹುಳ ತ್ರಯೋದಶಿಯ ಭಾನುವಾರದಂದು ಜಾತ್ರೆ ಆರಂಭವಾಗಿ ಬುಧವಾರ ತೆರೆ ಕಾಣಲಿದೆ.

ಹಿನ್ನೆಲೆ: ಇಲ್ಲಿಂದ ಸುಮಾರು ಐದು ಕಿ.ಮೀ. ದೂರದ (ಗುಡ್ಡಗಳ ದಾರಿಯಲ್ಲಿ ಸಾಗಿದರೆ) ಬೆಟ್ಟದ ತಪ್ಪಲಿನಲ್ಲಿ ಇರುವ ನುಂಕಿಮಲೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನವನ್ನು 11ನೇ ಶತಮಾನದಲ್ಲಿ ಕದಂಬ ವಂಶಸ್ಥ ಮಾಹಾರಾಜರು ನಿರ್ಮಿಸಿದರು ಎಂದು ಬೆಟ್ಟದ ಮೀಲಿರುವ ಶಾಸನಗಳಲ್ಲಿ ಕೆತ್ತನೆ ಮಾಡಲಾಗಿದೆ.

ಬೆಟ್ಟದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನವನ್ನು ಕದಂಬರು ವಂಶಸ್ಥ ಬೆಂಜರಸ ರಾಜನ ಆಧಿಕಾರ ಅವಧಿಯಲ್ಲಿ ನಿರ್ಮಾಣ ಮಾಡಲಾಯಿತು ಎಂಬುದಕ್ಕೆ ಸಿಕ್ಕಿರುವ ಶಾಸನಗಳು ಸಾಕ್ಷಿಯಾಗಿದೆ. ಸಿದ್ದೇಶ್ವರ ಸ್ವಾಮಿ ದೇವಸ್ಥಾನ ಸ್ಥಾಪನೆಗೆ ಪೌರಾಣಿಕ ಹಿನ್ನೆಲೆ ಇದೆ. ನಾಥ್‌ಪಂತ್‌ಗೆ ಸೇರಿದ ಮಠಾಧೀಶರು ಈ ದೇವಸ್ಥಾನಗಳ ಉಸ್ತುವಾರಿ ಹೊತ್ತಿದ್ದಾರೆ.

ಮಲಿಯಮ್ಮ, ನುಂಕಮ್ಮ ಎಂಬ ರಕ್ಕಸಿಯರ ಕಾಟವಿದ್ದ ವೇಳೆ ಅವರನ್ನು ಸಂಹಾರ ಮಾಡಲು ಸಿದ್ದೇಶ್ವರ ಸ್ವಾಮಿ ಕುದುರೆ ಮೇಲೆ ಬಂದನೆಂದೂ, ಬರುವಾಗ ಕುದರೆ ಲಗಾಮು ಹರಿದು ಹೋದ ಸಮಯದಲ್ಲಿ ಸಿದ್ದೇಶ್ವರ ಸ್ವಾಮಿ ಭಕ್ತ ದಲಿತ ಕೋಮಿನ ಹರಳಯ್ಯ ತನ್ನ ಕಾಲಿನ ನರ ಕತ್ತರಿಸಿ ಲಗಾಮು ಮಾಡಿ ಕೊಟ್ಟನಂತೆ.
 
ಇದಕ್ಕೆ ಮೆಚ್ಚಿ ಸಿದ್ದೇಶ್ವರ ಸ್ವಾಮಿ ಬೆಟ್ಟದಲ್ಲಿ ತನಗೆ ಪೂಜೆ ಸಲ್ಲುವ ಮುನ್ನ ಹರಳಯ್ಯನಿಗೆ ಪ್ರಥಮ ಪೂಜೆ ಸಲ್ಲಬೇಕು ಎಂಬ ಆದೇಶದ ಪ್ರಕಾರ, ಹರಳಯ್ಯಗೆ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಪ್ರಥಮವಾಗಿ ಹರಳಯ್ಯ ದೇವಸ್ಥಾನ ನಿರ್ಮಿಸಲಾಗಿದೆ.

ಫೆ. 5ರಂದು ಪ್ರಮುಖರ ನೇತೃತ್ವದಲ್ಲಿ ಬೆಟ್ಟಕ್ಕೆ ತೆರಳಿ ಸ್ವಾಮಿಯನ್ನು ಮೆರವಣಿಗೆಯಲ್ಲಿ ಕರೆ ತಂದು ನುಂಕಪ್ಪನಕಟ್ಟೆ ಬಳಿ ಕೂರಿಸಿ ಪೂಜೆ ಸಲ್ಲಿಸಿದ ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ನಂತರ ಸಮೀಪದ ಕಂಪಳರಂಗ ಹೊಂಡಕ್ಕೆ ಕರೆದೊಯ್ದು ಗಂಗಾಪೂಜೆ ಸಲ್ಲಿಸಲಾಗುವುದು. 6ರಂದು ಮೇಲುದುರ್ಗದಿಂದ ಪಟ್ಟಣಕ್ಕೆ ಸ್ವಾಮಿಯನ್ನು ಕರೆದುಕೊಂಡು ಬಂದು ನುಂಕಪ್ಪನಕಟ್ಟೆ ಬಳಿ ಪ್ರತಿಸ್ಥಾಪಿಸಿ ವಿಶೇಷ ಪೂಜೆ ಸಲ್ಲಿಸಲಾಗುವುದು.

7ರಂದು ದೇವರಿಗೆ ಮುಡಿಪು, ಹರಕೆ, ನೈವೇದ್ಯಗಳ ಅರ್ಪಣೆ ಮಾಡಲಾಗುವುದು. 8ರಂದು ಬೆಳಗಿನ ಜಾವ ಕಳಸ ಕನ್ನಡಿ ಜತೆ ಹೊರಟು ಗೌಡರ ಮನೆ ಬಳಿ ತಂಗುವುದು. ನಂತರ 9ಕ್ಕೆ ಬಸವಣ್ಣ ಕಟ್ಟೆ ಬಳಿ ತಂಗಿ ಮಧ್ಯಾಹ್ನ ನಂತರ ಭವ್ಯ ಮೆರವಣಿಗೆಯಲ್ಲಿ ಬೆಟ್ಟಕ್ಕೆ ವಾಪಸ್ ಹೋಗಿ ಗುಡಿತುಂಬಿಸಲಾಗುವುದು. ಜಾತ್ರೆಯಲ್ಲಿ ನಾಟಕ, ಕೋಲಾಟ ಮತ್ತು ವಿವಿಧ ಬಗೆಯ ಜಾನಪದ, ಸಾಂಸ್ಕೃತಿಕ ಕಲೆಗಳು ಅನಾವರಣಗೊಳ್ಳಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT