6 ಅಂತರರಾಜ್ಯ ಹುಲಿ ಹಂತಕರ ಸೆರೆ: 3 ಜಾ ಟ್ರಾಪ್ ವಶ

ಶುಕ್ರವಾರ, ಜೂಲೈ 19, 2019
26 °C

6 ಅಂತರರಾಜ್ಯ ಹುಲಿ ಹಂತಕರ ಸೆರೆ: 3 ಜಾ ಟ್ರಾಪ್ ವಶ

Published:
Updated:

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ (ಬಿಆರ್‌ಟಿ) ಹುಲಿ ರಕ್ಷಿತಾರಣ್ಯಕ್ಕೆ ಸೇರಿದ ಕೊಳ್ಳೇಗಾಲ ವನ್ಯಜೀವಿ ವಲಯದ ಹೊರವಲಯದಲ್ಲಿ ಶನಿವಾರ 6 ಮಂದಿ ಅಂತರರಾಜ್ಯ ಹುಲಿ ಹಂತಕರನ್ನು ಬಂಧಿಸಲಾಗಿದೆ.ಹರಿಯಾಣದ ಜಗದೀಶ್, ಜಾಲರ್‌ಸಿಂಗ್ ಅಲಿಯಾಸ್ ಡೈಲಿಸಿಂಗ್, ಲಕುಮ್‌ಚಂದ್, ರೋಟಾಸ್, ಬಿಮಲ್‌ದೇವಿ ಹಾಗೂ ಪಪ್ಪು ಬಂಧಿತರು. ಆರೋಪಿಗಳಿಂದ 3 `ಜಾ ಟ್ರಾಪ್~ ವಶಪಡಿಸಿಕೊಳ್ಳಲಾಗಿದೆ. ಇವರು ಹುಲಿಗಳನ್ನು ಬೇಟೆಯಾಡುವ ಉದ್ದೇಶದಿಂದಲೇ ಬಿಆರ್‌ಟಿ ಹುಲಿ ರಕ್ಷಿತಾರಣ್ಯಕ್ಕೆ ಬಂದಿರುವುದು ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿದ ವಿಚಾರಣೆ ವೇಳೆ ಖಚಿತವಾಗಿದೆ.ಈ ತಂಡದಲ್ಲಿ ಮಹಿಳೆ ಕೂಡ ಇದ್ದಾಳೆ. ಹಂತಕರು ಹುಲಿ ರಕ್ಷಿತಾರಣ್ಯ ಪ್ರದೇಶದ ಸೀಮಾರೇಖೆಯ ಹೊರಗೆ ತಾತ್ಕಾಲಿಕ ಶಿಬಿರ ನಿರ್ಮಿಸಿಕೊಂಡು ಪ್ಲಾಸ್ಟಿಕ್ ಹೂಗಳನ್ನು ಮಾರಾಟ ಮಾಡುವ ಇತರೇ ಅಲೆಮಾರಿ ಕುಟುಂಬಗಳ ಜತೆಯಲ್ಲಿ ಬಿಡಾರ ಹೂಡಿದ್ದರು. ರಕ್ಷಿತಾರಣ್ಯದ ಗುಂಡಾಲ್ ಜಲಾಶಯದ ಪ್ರದೇಶದಲ್ಲಿ ಕಳೆದ 3 ದಿನದ ಹಿಂದೆಯೇ `ಜಾ ಟ್ರಾಪ್~ ಸಿಕ್ಕಿತ್ತು.

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದಲ್ಲಿ ಬಂಧಿಸಿರುವ ಹುಲಿ ಹಂತಕರು ಅರಣ್ಯದಲ್ಲಿ `ಜಾ ಟ್ರಾಪ್~ ಅಳವಡಿಸುವ ರೀತಿಯನ್ನು ಅಧಿಕಾರಿಗಳಿಗೆ ಶನಿವಾರ ಮಾಡಿ ತೋರಿಸಿದರು

ಈ ಹಿನ್ನೆಲೆಯಲ್ಲಿ ಬಿಆರ್‌ಟಿ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ವಿಜಯ್ ಮೋಹನ್‌ರಾಜ್, ವಲಯ ಅರಣ್ಯಾಧಿಕಾರಿ ಬೋರಯ್ಯ ನೇತೃತ್ವದ ತಂಡ ಆರೋಪಿಗಳ ಚಲನವಲನದ ಮೇಲೆ ನಿಗಾ ಇಟ್ಟಿತ್ತು. ಆರೋಪಿಗಳು ಹಿಂದಿ ಮಾತನಾಡುತ್ತಿದ್ದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸತ್ಯಾಂಶ ಬೆಳಕಿಗೆ ಬಂದಿದೆ.ವಾರದಿಂದಲೂ ಆರೋಪಿಗಳು ಕಣಿವೆಯ ಒಳಭಾಗದಲ್ಲಿ ಕಿರಿದಾದ ಕಲ್ಲಿನ ಗುಹೆಯಲ್ಲಿ ವಾಸ್ತವ್ಯ ಹೂಡಿ ಹುಲಿಗಳು ಸಂಚರಿಸುವ ಜಾಡಿನ ಮೇಲೆ ನಿಗಾ ಇಡುತ್ತಿದ್ದರು. ಅರಣ್ಯದೊಳಗೆ 3 ಪ್ರದೇಶದಲ್ಲಿ ಅಳವಡಿಸಿದ್ದ `ಜಾ ಟ್ರಾಪ್~ಗಳನ್ನು ಕೂಡ ತೋರಿಸಿದ್ದಾರೆ.ಇವುಗಳು ರಾತ್ರಿ ವೇಳೆ ಮಾತ್ರ ಕೆಲಸ ಮಾಡುವಂತೆ  ಮಾಡುತ್ತಿದ್ದರು. ಒಂದು ವೇಳೆ `ಜಾ ಟ್ರಾಪ್~ನಲ್ಲಿ ಹುಲಿ ಸಿಕ್ಕಿಬಿದ್ದರೆ ಚೂಪಾದ ಆಯುಧದಿಂದ ಹುಲಿಯ ಕಣ್ಣಿಗೆ ಚುಚ್ಚಿ ನಂತರ ದೊಣ್ಣೆಯಿಂದ ತಲೆ ಮೇಲೆ ಹೊಡೆದು ಕೊಲ್ಲುತ್ತಿದ್ದ ಬಗೆಯನ್ನೂ ವಿಚಾರಣೆ ವೇಳೆ ವಿವರಿಸಿದ್ದಾರೆ.ಹಂತಕರು `ಜಾ ಟ್ರಾಪ್~ ಅಳವಡಿಕೆ ಮತ್ತು ಹುಲಿಯ ಚರ್ಮ ಸುಲಿದು ಹದ ಮಾಡುವುದರಲ್ಲಿ ಸಿದ್ಧಹಸ್ತರು. ಹೆಚ್ಚಿನ ಹುಲಿ ಸಾಂದ್ರತೆ ಇರುವ ಅರಣ್ಯ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ಬೇಟೆಯಾಡುತ್ತಿದ್ದರು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಜಾ ಟ್ರಾಪ್: ನಿಜವಾದ ವರದಿ...


ಡಿಸೆಂಬರ್, 2011ರಲ್ಲಿ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ `ಜಾ ಟ್ರಾಪ್~ ಅಳವಡಿಸಿ ಹುಲಿ ಕೊಂದಿರುವ ಶಂಕೆ ವ್ಯಕ್ತವಾಗಿತ್ತು. ಈ ಕುರಿತು ಕಳೆದ ಜನವರಿ 2ರಂದು`ಪ್ರಜಾವಾಣಿ~ ವರದಿ ಮಾಡಿತ್ತು.ಆದರೆ, ಉಪ ಅರಣ್ಯ ಸಂರಕ್ಷಣಾಧಿಕಾರಿ, ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯ ಜೀವಿ) ಹಾಗೂ ಹುಲಿ ಯೋಜನೆಯ ನಿರ್ದೇಶಕರು, ರಾಜ್ಯದ ಹುಲಿ  ರಕ್ಷಿತಾರಣ್ಯಗಳಿಗೆ `ಜಾ ಟ್ರಾಪ್~ ಅಳವಡಿಸುವ ಹುಲಿ ಹಂತಕರ ತಂಡದ ಭಯವಿಲ್ಲ ಎಂಬ ಸ್ಪಷ್ಟನೆ ನೀಡಿದ್ದರು.2002ರಲ್ಲಿ ಅರಣ್ಯಾಧಿಕಾರಿಯಾಗಿದ್ದ ಅಣ್ಣಯ್ಯ ನೇತೃತ್ವದ ತಂಡ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಮಧ್ಯಪ್ರದೇಶಕ್ಕೆ ಸೇರಿದ ಬೇಟೆಗಾರರನ್ನು ಬಂಧಿಸಿ `ಜಾ ಟ್ರಾಪ್~ ವಶಪಡಿಸಿಕೊಂಡಿತ್ತು. ಇದು ದಕ್ಷಿಣ ಭಾರತದಲ್ಲಿ ಬೆಳಕಿಗೆ ಬಂದ ಮೊದಲ ಪ್ರಕರಣವಾಗಿತ್ತು.

 

2003ರಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿಯೂ ಆಗಿನ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಡಿ.ಯತೀಶ್‌ಕುಮಾರ್ ನೇತೃತ್ವದ ತಂಡ ಹುಲಿ ಹಂತಕರನ್ನು ಬಂಧಿಸಿತ್ತು. 2008ರಲ್ಲಿಯೂ ನಾಗರಹೊಳೆಯ ವೀರನಹೊಸಹಳ್ಳಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಇಬ್ಬರು ಬೇಟೆಗಾರರನ್ನು ಬಂಧಿಸಿ `ಜಾ ಟ್ರಾಪ್~ ವಶಪಡಿಸಿಕೊಂಡಿದ್ದರು.                                                        

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry