ಗುರುವಾರ , ಆಗಸ್ಟ್ 22, 2019
22 °C

6 ಗಂಜಿ ಕೇಂದ್ರ ಸ್ಥಾಪನೆ, 20 ಕುಟುಂಬ ಸ್ಥಳಾಂತರ

Published:
Updated:

ಹಾವೇರಿ:   ಜಿಲ್ಲೆಯಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ರಾಣೆಬೆನ್ನೂರ ಹಾಗೂ ಹಾವೇರಿ ತಾಲ್ಲೂಕಿನ ನಾಲ್ಕು ಗ್ರಾಮಗಳು ಶನಿವಾರ ಸಂಪರ್ಕ ಕಳೆದುಕೊಂಡಿವೆ. ಇನ್ನೂ 15ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ.ತಗ್ಗು ಪ್ರದೇಶದಲ್ಲಿರುವ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಸೂಚಿಸಿದೆ. ನಿರಾಶ್ರಿತ ಜನರಿಗಾಗಿ ಜಿಲ್ಲೆಯಲ್ಲಿ ಆರು ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಐದು ಕಡೆಗಳಲ್ಲಿ ಗಂಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ಶುಕ್ರವಾರ ರಾತ್ರಿಯಿಂದಲೇ ಭದ್ರಾ ಹಾಗೂ ತುಂಗಾ ಜಲಾಶಯದಿಂದ ತಲಾ 60 ಸಾವಿರ ಕ್ಯೂಸೆಕ್‌ನಂತರ 120 ಕ್ಯೂಸೆಕ್ ನೀರನ್ನು ತುಂಗಭದ್ರಾ ನದಿಗೆ ಬಿಡಲಾಗಿದೆ. ಇದರಿಂದ ತುಂಗಭದ್ರಾ ನದಿ 8 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ. ಇನ್ನೂ ಎರಡ್ಮೂರು ಅಡಿ ನೀರು ಬಂದರೆ, ನದಿ ದಂಡೆಯಲ್ಲಿರುವ ರಾಣೆಬೆನ್ನೂರ ತಾಲ್ಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮಗಳು, ಹಾವೇರಿ ತಾಲ್ಲೂಕಿನ ಎಂಟು-ಹತ್ತು ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಲಿವೆ.ತುಂಗಭದ್ರಾ ನದಿಯ ಪ್ರಹಾದಿಂದ ಹಾವೇರಿ ತಾಲ್ಲೂಕಿನ ಗುಯಲಗುಂದಿ, ಕಂಚಾರಗಟ್ಟಿ, ಗಳಗನಾಥ, ಹಾವಂಶಿ, ಶಾಖಾರ, ಹಾವನೂರು, ಹುರಳಿಹಾಳ, ಹರಳಹಳ್ಳಿ, ರಾಣೆಬೆನ್ನೂರ ತಾಲ್ಲೂಕಿನ ಚೌಡಯ್ಯದಾನಪುರ, ಹರನಗೇರಿ, ಚಿಕ್ಕಕುರವತ್ತಿ, ಹಳೇಚಂದಾಪುರ ಗ್ರಾಮಗಳು ರಸ್ತೆ ಸಂಪರ್ಕ ಕಡಿಗೊಂಡಿವೆ.ಹಾವೇರಿ ತಾಲ್ಲೂಕಿನ ಗುಯಲಗುಂದಿ ಗ್ರಾಮದ ಸುತ್ತಲು ನೀರು ಸುತ್ತುವರೆದು ನಡುಗಡ್ಡಯಂತಾಗಿದೆ. ಈಗಾಗಲೇ ಈ ಗ್ರಾಮದಲ್ಲಿ ಗಂಜೆ ಕೇಂದ್ರ ತೆರೆಯಲಾಗಿದೆ. 20ಕ್ಕೂ ಹೆಚ್ಚು ಕುಟುಂಬಗಳು ಗಂಜಿ ಕೇಂದ್ರದಲ್ಲಿ ವಾಸ್ತವ್ಯ ಮಾಡಿವೆ.ಕುಮುದ್ವತಿ ನದಿ ನೀರು ಕುಪ್ಪೇಲೂರು, ಮುಷ್ಟೂರ ಗ್ರಾಮಗಳಿಗೆ ನುಗ್ಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಗ್ರಾಮದ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.11 ಗಂಜೆ ಕೇಂದ್ರ: ಹಾವೇರಿ ತಾಲ್ಲೂಕಿನಲ್ಲಿ ಗುಯಲಗುಂದಿ, ಕಂಚಾರಗಟ್ಟಿಯಲ್ಲಿ ಎರಡು ಗಂಜಿ ಕೇಂದ್ರ ಸ್ಥಾಪನೆ ಮಾಡಿದ್ದು, ಇನ್ನೂ ಐದು ಕಡೆಗಳಲ್ಲಿ ಗಂಜೆ ಕೇಂದ್ರ ತೆರೆಯಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಣೆಬೆನ್ನೂರ ತಾಲ್ಲೂಕಿನಲ್ಲಿ ಕುಪ್ಪೇಲೂರು ಹಾಗೂ ಕುಮುದ್ವತಿ ನದಿ ತೀರದ ಮುಷ್ಟೂರಲ್ಲಿ ಶನಿವಾರ ಗಂಜೆ ಕೇಂದ್ರ ತೆರೆಯಲಾಗಿದ್ದು, ಹಿರೇಕೆರೂರಿನ ಮಾಸೂರು ಹಾಗೂ ತಿಪ್ಪಾಯಿಕೊಪ್ಪದಲ್ಲಿ ಗಂಜಿ ಕೇಂದ್ರಗಳನ್ನು ಮುಂದುವರೆಸಲಾಗಿದೆ ಎಂದು ಉಪವಿಭಾಗಾಧಿಕಾರಿ ಕೆ.ಚನ್ನಬಸಪ್ಪ ತಿಳಿಸಿದ್ದಾರೆ.ಜನಜೀವನ ಅಸ್ತವ್ಯಸ್ತ

ರಾಣೆಬೆನ್ನೂರು: ಶನಿವಾರ ತುಂಗಭದ್ರಾ ಮತ್ತು ಕುಮಧ್ವತಿ ನದಿ ನೀರಿನ ಪ್ರವಾಹ ಹೆಚ್ಚಾಗಿದ್ದು, ನದಿ ದಂಡೆಯಲ್ಲಿರುವ ಕೆಲ ಗ್ರಾಮಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥವಾಗಿದೆ. ನದಿ ಪಾತ್ರದ ಗ್ರಾಮಗಳಾದ ಚೌಡಯ್ಯದಾನಪುರ, ಚಂದಾಪುರ, ಚಿಕ್ಕಕುರುವತ್ತಿ, ಹರನಗಿರಿ ಮತ್ತು ಕುಮಧ್ವತಿ ನದಿಯ ಮಣಕೂರು ರಸ್ತೆ ಸಂಚಾರ ಸ್ಥಗಿತಗೊಂಡಿವೆ.ಕುಪ್ಪೇಲೂರು ಹಾಗೂ ಮುಷ್ಟೂರ ಗ್ರಾಮಕ್ಕೆ ನೀರು ನುಗ್ಗಿದ್ದರಿಂದ 15ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, ಶುಕ್ರವಾರ ರಾತ್ರಿಯಿಂದಲೇ ಎರಡು ಗ್ರಾಮಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ತಾಲ್ಲೂಕಿನ ಹೊಳೆಆನ್ವೇರಿ, ಲಿಂಗದಹಳ್ಳಿ, ಮಣಕೂರು ಗ್ರಾಮಗಳಲ್ಲಿ ಕುಮಧ್ವತಿ ನೀರಿನ ಪ್ರವಾಹದಿಂದ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ. ಸೇವಂತಿಗೆ, ತರಕಾರಿ ಸೊಪ್ಪುಗಳು, ಮೆಕ್ಕೆ ಜೋಳ ಮತ್ತು ಹತ್ತಿ ಸಂಪೂರ್ಣ ನೀರಿನಲ್ಲಿ ಮುಳುಗಿ ಹಾಳಾಗಿವೆ ರೈತ ಮುಖಂಡ ರವೀಂದ್ರಗೌಡ ಪಾಟೀಲ ತಿಳಿಸಿದ್ದಾರೆ.ಪ್ರವಾಹ ಹೆಚ್ಚಿದ ಸ್ಥಳಗಳಿಗೆ ಶಾಸಕ ಕೆ.ಬಿ.ಕೋಳಿವಾಡ, ತಹಶೀಲ್ದಾರ್ ಎಚ್. ಕೆ.ಶಿವಕುಮಾರ, ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ತೊಂದರೆಗೊಳಗಾದ ಜನರಿಗೆ ಸುರಕ್ಷಿತ ಸ್ಥಳಕ್ಕೆ ಹೋಗಲು ತಿಳಿಸಿದ್ದಾರೆ. ಹೊಲಕ್ಕೆ ನುಗ್ಗಿದ ನೀರು

ಗುತ್ತಲ: ತುಂಗಭದ್ರಾ ನದಿ ದಂಡೆ ಮೇಲಿರುವ ಹಳೇ ಕಂಚಾರಗಟ್ಟಿ ಗ್ರಾಮದ ಸುತ್ತ ನೀರು ಆವರಿಸಿದ್ದು, ಗ್ರಾಮದ ಸುಮಾರು 100 ಎಕರೆ ಪ್ರದೇಶದಲ್ಲಿ ನೀರು ನುಗ್ಗಿದೆ. ಗೋವಿನಜೋಳ, ಹತ್ತಿ,ಭತ್ತ,ರೇಷ್ಮೆ, ಕಬ್ಬು, ಬೆಳೆಗಳು ನದಿ ನೀರಿನಲ್ಲಿ ಮುಳುಗಿ ಹಾನಿಗೊಳಗಾಗಿವೆ.

ಕಂಚಾರಗಟ್ಟಿಯಿಂದ ಸುಕ್ಷೇತ್ರ ಚೌಡಯ್ಯದಾನಪುರಕ್ಕೆ ಹೋಗುವ ಪ್ರಮುಖ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಕಂಚಾರಗಟ್ಟಿ ಗ್ರಾಮದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಕಂಚಾರಗಟ್ಟಿ ಗ್ರಾಮ ಸ್ಥಳಾಂತರ ಜನರಿಗೆ ಸೂಕ್ತ ಸ್ಥಳಕ್ಕೆ ಹೋಗಲು ಸೂಚಿಸಲಾಗಿದೆ. ಆದರೆ, ಗ್ರಾಮದ 30 ಕುಟುಂಬಗಳಿಗೆ ಸುಮಾರು 50 ಎಕರೆ ಪ್ರದೇಶದಲ್ಲಿ ನಿವೇಶನ ಹಂಚಿಕೆಯನ್ನು ಮಾಡಲಾಗಿತ್ತು. ಆ ಜಮೀನು ವಿವಾದ ನ್ಯಾಯಾಲಯ ಮೆಟ್ಟಿಲೇರಿದ್ದು. ಈ ಸಮಸ್ಯೆ ಬಗೆಹರಿಯುವವರೆಗೆ ಸ್ಥಳಾಂತಗೊಳ್ಳುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಆಗ ತಹಶೀಲ್ದಾರ್ ಶಿವಲಿಂಗ ಅವರು, ಗ್ರಾಮಸ್ಥರ ಜತೆ ಚರ್ಚಿಸಿ ಜಮೀನಿಗೆ ಸಂಬಂಧಿಸಿದ ನ್ಯಾಯಾಲಯ ಆದೇಶ ಹಾಗೂ ದಾಖಲೆಗಳನ್ನು ನೀಡಿದರೆ, ಆ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ ನಂತರವೇ ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ತೆರಳಲು ಒಪ್ಪಿಕೊಂಡಿದ್ದಾರೆ.

`ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರ ಆರಂಭಿಸಲು ತಾಲ್ಲೂಕು ಆಡಳಿತ ಸಿದ್ಧತೆ ಮಾಡಿಕೊಂಡಿದೆ. ಗ್ರಾಮಸ್ಥರು ಯಾವುದೇ ರೀತಿ ಭಯ ಪಡುವ ಅಗತ್ಯವಿಲ್ಲ ಎಂದು ತಹಶೀಲ್ದಾರ್ ಶಿವಲಿಂಗ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ದೇಶಪಾಂಡೆ ತಿಳಿಸಿದ್ದಾರೆ.

Post Comments (+)