ಗುರುವಾರ , ಆಗಸ್ಟ್ 22, 2019
27 °C

6 ಜಿಲ್ಲೆಗಳಲ್ಲಿ ಮಳೆ ಅಬ್ಬರ

Published:
Updated:

ಬೆಂಗಳೂರು: ಶಿವಮೊಗ್ಗ, ಹಾಸನ, ಕೊಡಗು, ಮೈಸೂರು, ದಾವಣಗೆರೆ, ಉತ್ತರ ಕನ್ನಡ ಜಿಲ್ಲೆಗಳಲ್ಲಿ  ಪುಷ್ಯ ಮಳೆ ಅಬ್ಬರಿಸಿ ಸುರಿಯುತ್ತಿದ್ದು ಆಸ್ತಿಪಾಸ್ತಿ, ಜೀವಹಾನಿ ಸಂಭವಿಸಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಕೃಷ್ಣಾ ಮತ್ತು ಉಪ ನದಿಗಳ ನೀರಿನ ಮಟ್ಟ ಇಳಿಮುಖವಾಗಿದೆ.ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕು, ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಹಾಗೂ ಕೊಡಗು ಜಿಲ್ಲೆಯಾದ್ಯಂತ ಮಳೆ ರೌದ್ರಾವತಾರ ತಾಳಿದೆ. ಹಲವಡೆ ಶಾಲೆ- ಕಾಲೇಜುಗಳಿಗೆ ತುರ್ತುರಜೆ ಘೋಷಿಸಲಾಗಿದೆ. ಕೆಲವೆಡೆ ಹೆದ್ದಾರಿ, ರೈಲು ಮಾರ್ಗಗಳು ಬಿರುಕು ಬಿಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಸಂಚಾರ ಬಂದ್ ಮಾಡಲಾಗಿದೆ.ಸಕಲೇಶಪುರ ತಾಲ್ಲೂಕಿನಲ್ಲಿ ಗುರುವಾರ ಬೆಳಿಗ್ಗೆ 6ರಿಂದ ಸಂಜೆ 7ರ ಅವಧಿಯಲ್ಲಿ ಬರೋಬ್ಬರಿ 185 ಮಿ.ಮೀ. ಮಳೆ ಬಿದ್ದಿದ್ದು, ತಾಲ್ಲೂಕಿನ ಜನರನ್ನು ದಂಗುಬಡಿಸಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ರೈಲು ಮಾರ್ಗವನ್ನೂ ಮಳೆ ಕೊಚ್ಚಿ ಹಾಕಿದೆ. ಹಾಸನ- ಸಕಲೇಶಪುರ ಮಾರ್ಗದ 32ನೇ ಕಿ.ಮೀ. ಸಮೀಪ ರೈಲು ಹಳಿಯ ಕೆಳಗೇ ಭಾರಿ ಪ್ರಮಾಣದ ಭೂ ಕುಸಿತ ಉಂಟಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ಬಂದ್ ಮಾಡಲಾಗಿದೆ.

ಹೀಗಾಗಿ 'ಕಾರವಾರ- ಬೆಂಗಳೂರು'  ಪ್ಯಾಸೆಂಜರ್ ರೈಲು ಸಕಲೇಶಪುರ ನಿಲ್ದಾಣದಲ್ಲೇ ನಿಂತಿತು. ಸುಮಾರು 300 ಪ್ರಯಾಣಿಕರು ನಿಲ್ದಾಣದಲ್ಲೇ ಇಳಿಯಬೇಕಾಯಿತು. ತುರ್ತಾಗಿ ಬೇರೆ ವಾಹನಗಳ ವ್ಯವಸ್ಥೆ ಮಾಡಿ ಎಲ್ಲ ಪ್ರಯಾಣಿಕರನ್ನೂ ಅವರವರ ಸ್ಥಳಕ್ಕೆ ಕಳುಹಿಸಲಾಯಿತು.ಇನ್ನೊಂದೆಡೆ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕು ಕಡೆ ಮರಗಳು ಉರುಳಿ ಸಂಚಾರ ವ್ಯತ್ಯಯ ಉಂಟಾಯಿತು. ಹೇಮಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ತಾಲ್ಲೂಕಿನ ಹಲವು ರಸ್ತೆಗಳು ನೀರಿನಡಿ ಮುಳುಗಿದ್ದು, ಸಾವಿರಾರು ಎಕರೆಗೆ ನೀರು ನುಗ್ಗಿ ಬೆಳೆ ಸಂಪೂರ್ಣ ನಾಶವಾಗಿದೆ. ನೂರಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.ಸಕಲೇಶಪುರ ಪಟ್ಟಣದಲ್ಲೇ 20ಕ್ಕೂ ಹೆಚ್ಚು ಮನೆಗಳು ಭಾಗಶಃ ನಾಶವಾಗಿವೆ. ರಸೂಲ್ ಎಂಬುವವರ ಮನೆ ಸಂಪೂರ್ಣ ಕುಸಿದಿದೆ. ವಾಣಿಜ್ಯ ಮಳಿಗೆಯೊಂದರ 3 ಟನ್ ತೂಕದ ಛಾವಣಿ ಹಾರಿಹೋಗಿದ್ದು, ಸುಮಾರು 800 ಅಡಿ ದೂರ ಬಿದ್ದಿದೆ. ಪಟ್ಟಣದಲ್ಲೇ 25 ವಿದ್ಯುತ್ ಕಂಬಗಳು ಬಿದ್ದಿದ್ದು, ಗ್ರಾಮೀಣ ಪ್ರದೇಶದಲ್ಲಿ 150ಕ್ಕೂ ಹೆಚ್ಚು ಕಂಬಗಳು ನೆಲಕಚ್ಚಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪ್ರಾಥಮಿಕ ನೋಟದ ಪ್ರಕಾರ ಸಕಲೇಶಪುರದಲ್ಲಿ  ರೂ 100 ಕೋಟಿಗೂ ಹೆಚ್ಚು ಆಸ್ತಿಪಾಸ್ತಿ ಹಾನಿಯಾಗಿದೆ. ಇಷ್ಟೆಲ್ಲ ಅನಾಹುತ ಕೇವಲ 48 ಗಂಟೆಗಳಲ್ಲಿ ಸಂಭವಿಸಿದೆ. 1994ರಲ್ಲಿ ಮಾತ್ರ ಇಂಥದ್ದೇ ಮಳೆಯಾಗಿತ್ತು ಎಂಬುದು ಹಿರಿಯರ ಅಭಿಪ್ರಾಯ.ಹೆದ್ದಾರಿ ಬಿರುಕು: ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ಕೊಯಿನಾಡು ಬಳಿಯಲ್ಲಿ ಮೈಸೂರು- ಬಂಟ್ವಾಳ ರಾಜ್ಯ ಹೆದ್ದಾರಿಯು ಮಧ್ಯಭಾಗದಲ್ಲಿಯೇ ಬಿರುಕು ಬಿಟ್ಟಿದೆ. ಈ ರಸ್ತೆಯಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಂತೂ ಮಳೆ ರೌದ್ರಾವತಾರ ತಾಳಿದೆ.

ಪಟ್ಟಣದ ಜ್ಞಾನ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿನ ಬೃಹತ್ ಮರವೊಂದು ಮಧ್ಯಾಹ್ನ ನೆಲಕ್ಕುರುಳಿದೆ. ಶಾಲೆಯಲ್ಲಿ ಮಕ್ಕಳಾರೂ ಇಲ್ಲದ್ದರಿಂದ ಭಾರೀ ಅನಾಹುತ ತಪ್ಪಿದೆ. ಕಂಬಳ್ಳಿ ಗ್ರಾಮದಲ್ಲಿ ಮನೆಯೊಂದರ ಬರೆ ಕುಸಿದಿದ್ದು, ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯೊಬ್ಬರನ್ನು ರಕ್ಷಿಸಲಾಗಿದೆ. ಉಳಿದಂತೆ, ಹಾರಂಗಿ ಪ್ರದೇಶದಲ್ಲಿ ಗುರುವಾರ 10.2 ಮಿ.ಮೀ. ಮಳೆ ಸುರಿದಿದೆ.

ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ಇದ್ದಕ್ಕಿದ್ದಂತೆ ಮಳೆ ಬಿರುಸು ಪಡೆದಿದೆ. ಹಗಲು- ರಾತ್ರಿ ಒಂದೇ ಸಮನೆ ಬೀಳುತ್ತಿರುವ ಮಳೆಯಿಂದ ಜನಜೀವನ ತೀವ್ರ ಅಸ್ತವ್ಯಸ್ತವಾಗಿದೆ.ಹಾರಂಗಿ ಅಣೆಕಟ್ಟೆ ಒಳಹರಿವಿನಲ್ಲಿ ಭಾರಿ  ಏರಿಕೆಯಾಗಿದ್ದು, ಗುರುವಾರ 40 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿತ್ತು! ಬುಧವಾರ 18,500 ಕ್ಯೂಸೆಕ್ ಒಳಹರಿವು ಇತ್ತು. ಅಂದರೆ; ಒಂದೇ ದಿನದಲ್ಲಿ 21,500 ಕ್ಯೂಸೆಕ್ ಒಳಹರಿವು ಹೆಚ್ಚಾಗಿದೆ! ಅಣೆಕಟ್ಟೆಯಿಂದ 40 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಶಿವಮೊಗ್ಗದಲ್ಲಿ ಅಪಾರ ಹಾನಿ: ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ ತಾಲ್ಲೂಕುಗಳಲ್ಲಿ ಭಾರಿ ಮಳೆಯೊಂದಿಗೆ ಬೀಸಿದ ಗಾಳಿ ಅಪಾರ ಹಾನಿ ಉಂಟುಮಾಡಿದೆ. ನದಿಗಳು ಉಕ್ಕಿ ಹರಿಯುತ್ತಿವೆ. ಸಾಗರ ತಾಲ್ಲೂಕು ಬೀಸನಗದ್ದೆ ಪ್ರದೇಶದಲ್ಲಿ ವರದಾ ನದಿ ಉಕ್ಕಿ ಹರಿಯುತ್ತಿದ್ದು, ಸುಮಾರು 15 ಸಾವಿರ ಎಕರೆ ಭತ್ತದ ಗದ್ದೆ ಜಲಾವೃತಗೊಂಡಿದೆ. ನಾಟಿ ಮಾಡಿರುವ ಗದ್ದೆಗಳ ಮೇಲೆ ಸುಮಾರು 7ರಿಂದ 8 ಅಡಿಗಳಷ್ಟು ನೀರು ನಿಂತಿದ್ದು, ರೈತರು ಕಂಗೆಟ್ಟಿದ್ದಾರೆ.ಸಾಗರ ತಾಲ್ಲೂಕಿನಲ್ಲಿ ಅನೇಕ ಕೆರೆ-ಕಟ್ಟೆಗಳು ಒಡೆದಿದ್ದು, ಕುಗ್ವೆ, ಗೌತಮಪುರ ಮುಂತಾದ ಕಡೆ ರಸ್ತೆ, ಸೆತುವೆಗಳು ಕೊಚ್ಚಿ ಹೋಗಿವೆ. ಶಿಕಾರಿಪುರದ ನಂದೀಹಳ್ಳಿ ಸಮೀಪ ಕೆರೆ ಹಿನ್ನೀರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹರಿದು ಸಂಚಾರ ಸ್ಥಗಿತಗೊಂಡಿದೆ. ಹೊಸನಗರ, ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಸಣ್ಣ-ಪುಟ್ಟ ಹಳ್ಳಕೊಳ್ಳಗಳು ದೊಡ್ಡ ನದಿಗಂತೆ ಹರಿಯುತ್ತಿದ್ದು, ಪ್ರವಾಹ ಸೃಷ್ಟಿಸಿವೆ. ಮಳೆ ನೀರು ನುಗ್ಗಿ ಅಡಿಕೆ ತೋಟಗಳಿಗೆ, ಭತ್ತದ ಗದ್ದೆಗಳಿಗೆ ಅಪಾರ ಹಾನಿಯಾಗಿದೆ.ಲಿಂಗನಮಕ್ಕಿ ಜಲಾಶಯ ಭರ್ತಿಯತ್ತ: ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಜಲಾಶಯವಾದ ಲಿಂಗನಮಕ್ಕಿ  ಭರ್ತಿಯಾಗಲು ಕೇವಲ 3.5 ಅಡಿ ಬಾಕಿ ಇದ್ದು, ಜಲಾಶಯದ ನೀರಿನಮಟ್ಟ 1,815.5 ಅಡಿಗೆ ಮುಟ್ಟಿದೆ (ಗರಿಷ್ಠ: 1819). ಜಲಾಶಯಕ್ಕೆ ಒಳ ಹರಿವು 80 ಸಾವಿರ ಕ್ಯೂಸೆಕ್ ಇದ್ದು, ಸುರಕ್ಷತೆಯ ದೃಷ್ಟಿಯಿಂದ ಜಲಾಶಯದ 11 ಕ್ರಸ್ಟ್‌ಗೇಟ್‌ಗಳನ್ನು ತೆರೆದು 27,500 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.ಈಗಾಗಲೇ ಭದ್ರಾ ಹಾಗೂ ತುಂಗಾ ಜಲಾಶಯಗಳು ಗರಿಷ್ಠ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ಜಲಾಶಯಗಳಿಂದ ನದಿಗೆ ನೀರು ಬಿಡಲಾಗುತ್ತಿದೆ. ಮಾಸ್ತಿಕಟ್ಟೆಯಲ್ಲಿ ಜಿಲ್ಲೆಯಲ್ಲೆ ಅತ್ಯಧಿಕ 171 ಮಿ.ಮೀ. ಮಳೆ ಆಗಿದೆ.ಬಾಲಕ ಸಾವು: ದಾವಣಗೆರೆ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದೆ. ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ಶಿಥಿಲಗೊಂಡಿದ್ದ ಮನೆಯ ಗೋಡೆ ಕುಸಿದು ಬಾಲಕನೊಬ್ಬ ಮೃತಪಟ್ಟು, ಮತ್ತೊಬ್ಬ ಬಾಲಕ ಗಾಯಗೊಂಡ ಘಟನೆ ಚನ್ನಗಿರಿ ತಾಲ್ಲೂಕು ಬಸವಾಪಟ್ಟಣ ಹೋಬಳಿಯ ಗುಡ್ಡದ ಬೆನಕನಹಳ್ಳಿಯಲ್ಲಿ ಗುರುವಾರ ನಡೆದಿದೆ.ಈಶ್ವರ್ ನಾಯ್ಕ ಹಾಗೂ ನಿರ್ಮಲಾಬಾಯಿ ದಂಪತಿ ಪುತ್ರ ವಿಜಯ್ (14) ಮೃತಪಟ್ಟ ಬಾಲಕ. 12 ವರ್ಷದ ಚಂದ್ರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರವೂ ದಿನದ ಬಹುತೇಕ ಸಮಯ ಮಳೆಯಾಯಿತು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಎಡೆಬಿಡದೆ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.ಚಿತ್ರದುರ್ಗದಲ್ಲೂ ಮಳೆ: ಚಿತ್ರದುರ್ಗ ನಗರ ಮತ್ತು ಸುತ್ತಮುತ್ತ ಗುರುವಾರ ಬೆಳಿಗ್ಗೆ ಉತ್ತಮ ಮಳೆಯಾಯಿತು. ಕೊಳ್ಳೂರ ಸೇತುವೆ ಮುಕ್ತ: ಎರಡು ದಿನಗಳಿಂದ ಜಲಾವೃತಗೊಂಡಿದ್ದ ಯಾದಗಿರಿ ಜಿಲ್ಲೆಯ ಕೊಳ್ಳೂರ ಎಂ. ಬಳಿಯ ಸೇತುವೆ ಗುರುವಾರ ಸಂಚಾರಕ್ಕೆ ಮುಕ್ತವಾಗಿದೆ.ನಾರಾಯಣಪುರದ ಬಸವಸಾಗರ ಜಲಾಶಯದಿಂದ ಬಿಡುವ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಇದರಿಂದಾಗಿ ಕೊಳ್ಳೂರ ಸೇತುವೆಯ ಮೇಲೆ ವಾಹನಗಳ ಸಂಚಾರ ಆರಂಭಿಸಲಾಗಿದೆ.ಉತ್ತರ ಕನ್ನಡದಲ್ಲಿ ಪ್ರವಾಹ:  ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಸಿದ್ದಾಪುರ, ಮುಂಡಗೋಡ ಮತ್ತು ಯಲ್ಲಾಪುರದಲ್ಲಿ ಮಳೆಯ ಆರ್ಭಟ ಗುರುವಾರ ಜೋರಾಗಿದ್ದು, ಹೊನ್ನಾವರ ತಾಲ್ಲೂಕಿನ ಕೆಲ ಹೊಳೆಗಳಲ್ಲಿ ಪ್ರವಾಹ ಬಂದಿದ್ದು, ತಾಲ್ಲೂಕಿನ ಶರಾವತಿ ನದಿ ತೀರದಲ್ಲಿ ಪ್ರವಾಹ ಭೀತಿ ಉಂಟಾಗಿದೆ.ಸತತ ಮಳೆಯಿಂದ ಉ.ಕ. ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗುಂಡಬಾಳ ಹಾಗೂ ಭಾಸ್ಕೇರಿ ನದಿಪಾತ್ರಗಳಲ್ಲಿ ನೀರು ನುಗ್ಗಿದೆ. ಗುಂಡಬಾಳ ಹೊಳೆ ದಂಡೆಯ ಚಿಕ್ಕನಕೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಂಡಿಬೈಲ್ ಮಜಿರೆಯ 35 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದ್ದು, ಈ ಭಾಗದಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. 'ಶರಾವತಿ ನದಿ ದಂಡೆಯಲ್ಲಿ ಪ್ರವಾಹಭೀತಿ ಎದುರಾಗಿದ್ದು, ಹೇರಂಗಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೈಗುಂದ ಹಾಗೂ ಕುರ್ವೆ ದ್ವೀಪ ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಅಲ್ಲಿಗೆ ದೋಣಿ ಕಳಿಸಲಾಗಿದೆ.ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನಲ್ಲಿ ಬುಧವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿದ ಪರಿಣಾಮ ಯಲ್ಲಾಪುರ-ಮುಂಡಗೋಡ ರಸ್ತೆ ಸಂಚಾರ ಗುರುವಾರ ಸ್ಥಗಿತಗೊಂಡಿದ್ದು ಸುಮಾರು 50ಕ್ಕೂ ಹೆಚ್ಚು ಎಕರೆ ಭತ್ತದ ಗದ್ದೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಬಡ್ಡಿಗೇರಿ, ಶಿಡ್ಲಗುಂಡಿ ಸಮೀಪ ರಸ್ತೆ ಮೇಲೆ ಮಳೆಯ ನೀರು ಅಪಾರ ಪ್ರಮಾಣದಲ್ಲಿ ಹರಿಯತೊಡಗಿದ್ದರಿಂದ ಯಲ್ಲಾಪುರ-ಮುಂಡಗೋಡ ರಾಜ್ಯ ಹೆದ್ದಾರಿ ಸ್ಥಗಿತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ.ಕೃಷ್ಣಾ ಪ್ರವಾಹ ಇಳಿಮುಖ: ಮಹಾರಾಷ್ಟ್ರದಿಂದ ಕಡಿವೆು ಪ್ರಮಾಣದಲ್ಲಿ ರಾಜ್ಯಕ್ಕೆ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಚಿಕ್ಕೋಡಿ ತಾಲ್ಲೂಕಿನ ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಟದಲ್ಲಿ ಸುಮಾರು 3 ಅಡಿಯಷ್ಟು ಇಳಿಕೆ ಕಂಡುಬಂದಿದೆ.ದೂಧಗಂಗಾ ನದಿ ಹರಿವಿನಲ್ಲೂ ಇಳಿಕೆಯಾಗಿರುವ ಪರಿಣಾಮವಾಗಿ ಯಕ್ಸಂಬಾ-ದಾನವಾಡ ಗ್ರಾಮಗಳ ಮಧ್ಯದ ಸೇತುವೆ ಮೇಲೆ ಹರಿಯುತ್ತಿದ್ದ ನೀರು ಕೊಂಚ ಕಡಿಮೆಯಾಗಿದ್ದು, ವಾಹನ ಮತ್ತು ಜನಸಂಚಾರ ಆರಂಭಗೊಂಡಿದೆ. ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ರಾಜ್ಯಕ್ಕೆ ಹರಿದು ಬುಧವಾರ ಹರಿದು ಬರುತ್ತಿದ್ದ ಒಟ್ಟು  1.78 ಲಕ್ಷ ಕ್ಯೂಸೆಕ್ ನೀರಿನ ಪ್ರಮಾಣ ಗುರುವಾರ 1.69 ಲಕ್ಷ ಕ್ಯೂಸೆಕ್‌ಗೆ ತಗ್ಗಿದೆ.ಚಿಕ್ಕೋಡಿ ತಾಲ್ಲೂಕಿನಲ್ಲಿ ವೇದಗಂಗಾ ನದಿಯ ಜತ್ರಾಟ-ಭೀವಶಿ, ಅಕ್ಕೋಳ-ಸಿದ್ನಾಳ, ಭೋಜವಾಡಿ-ಕುನ್ನೂರ, ದೂಧಗಂಗಾ ನದಿಯ ಸದಲಗಾ-ಬೋರಗಾಂವ, ಕಾರದಗಾ-ಭೋಜ, ಮಲಿಕವಾಡ-ದತ್ತವಾಡ ಹಾಗೂ ಕೃಷ್ಣಾ ನದಿಯ ಕಲ್ಲೋಳ-ಯಡೂರ ಗ್ರಾಮಗಳ ಮಧ್ಯೆ ಇರುವ ಕೆಳಮಟ್ಟದ ಸೇತುವೆಗಳು ಇನ್ನೂ ಜಲಾವೃತವಾಗಿಯೇ ಇವೆ.ಆಲಮಟ್ಟಿಯ ಲಾಲ್‌ಬಹಾದ್ದೂರ ಶಾಸ್ತ್ರಿ ಜಲಾಶಯಕ್ಕೆ ಬುಧವಾರದಿಂದ ಒಳಹರಿವು ಕಡಿಮೆಗೊಂಡಿದ್ದರಿಂದ ಜಲಾಶಯದ ಹೊರಹರಿವನ್ನು ಕಡಿಮೆಗೊಳಿಸಲಾಗಿದೆ. ಇದರಿಂದಾಗಿ ಆಲಮಟ್ಟಿ ಜಲಾಶಯದ ಮುಂಭಾಗದ ನಾರಾಯಣಪುರ ಜಲಾಶಯದ ಹಿಂಭಾಗದ ಅರಳದಿನ್ನಿ, ಯಲಗೂರ, ಯಲ್ಲಮ್ಮನಬೂದಿಹಾಳ ಗ್ರಾಮದ ಕೆಲ ಜಮೀನುಗಳಲ್ಲಿ ನುಗ್ಗಿದ್ದ ನೀರಿನ ಪ್ರಮಾಣ  ಬುಧವಾರದಿಂದ ಇಳಿಮುಖಗೊಂಡಿದೆ. ಹಾವೇರಿ  ಜಿಲ್ಲೆಯಾದ್ಯಂತ ಗುರುವಾರವೂ ಉತ್ತಮ ಮಳೆ ಬಿದ್ದಿದ್ದು, ಜಿಲ್ಲೆಯಲ್ಲಿ ಹರಿಯುತ್ತಿರುವ ತುಂಗಭದ್ರಾ, ಕುಮುದ್ವತಿ ಹಾಗೂ ವರದಾ ನದಿಗಲ್ಲಿ ಒಳ ಹರಿವು ಕಡಿಮೆಯಾಗಿದ್ದರೂ, ಅಲ್ಲಲ್ಲಿ ಹೊಲಗಳಿಗೆ ನೀರು ನುಗ್ಗಿ ನೂರಾರು ಎಕರೆ ಬೆಳೆ ಹಾನಿಗೊಳಗಾಗಿದೆ.ಹಾವೇರಿ ಜಿಲ್ಲೆಯಲ್ಲಿ ಗುರುವಾರ 80ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿವೆ. ಬೆಳಗಾವಿ ಜಿಲ್ಲೆಯಲ್ಲಿ 22 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 15 ಮನೆಗಳು ಕುಸಿದಿವೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಬಿರುಕು ಬಿಟ್ಟ ಹೆದ್ದಾರಿ: (ಸುಳ್ಯ ವರದಿ): ಕೊಡಗಿನ ಸಂಪಾಜೆ ಘಾಟಿ ಪ್ರದೇಶದಲ್ಲಿ ಕಳೆದ ವರ್ಷ ಅಭಿವೃದ್ಧಿ ಪಡಿಸಿದ ಹೆದ್ದಾರಿ ಬಿರುಕು ಬಿಟ್ಟಿದ್ದು, ಇಲ್ಲಿ ಘನ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.ಕೊಯನಾಡು ಅರಣ್ಯ ಇಲಾಖೆ ಕಚೇರಿಯಿಂದ ಸ್ವಲ್ಪ ದೂರದಲ್ಲಿ ಹೆದ್ದಾರಿಯು ಸುಮಾರು 50 ಮೀಟರ್ ಉದ್ದಕ್ಕೆ ಬಿರುಕು ಬಿಟ್ಟಿದೆ. ಇದರಿಂದ ರಸ್ತೆಯ ಒಂದು ಭಾಗದಲ್ಲಿ ಮಾತ್ರ ಲಘು ವಾಹನ ಸಂಚಾರಕ್ಕೆ  ಅವಕಾಶ ಕಲ್ಪಿಸಲಾಗಿದೆ.ಸಂಪಾಜೆ ಮೂಲಕ ಘಾಟ್ ರಸ್ತೆ ಮೂಲಕ ಮಡಿಕೇರಿ, ಮೈಸೂರು, ಬೆಂಗಳೂರು ಕಡೆಗೆ ಹೋಗುವ ಘನ ವಾಹನಗಳು ಸಂಪಾಜೆಯಿಂದ ಹಿಂತಿರುಗಿ ಬಂದು ಸುಬ್ರಹ್ಮಣ್ಯ ಮೂಲಕ ಶಿರಾಡಿ ಘಾಟ್ ಮೂಲಕ ಸಂಚಾರ ಆರಂಭಿಸಿವೆ. ಲಘು ವಾಹನಗಳ ಚಾಲಕರು ಕೂಡ ಆತಂಕದಲ್ಲೇ ಪ್ರಯಾಣಿಸುವಂತಾಗಿದೆ.ರಸ್ತೆ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ಮಡಿಕೇರಿ ಮತ್ತು ಸಂಪಾಜೆ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಘನ ವಾಹನ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ.ಗುರುವಾರ ಎಲ್ಲಾ ವಾಹನಗಳನ್ನು ಸಂಪಾಜೆ ಗೇಟ್‌ನಲ್ಲೇ ಪೊಲೀಸರು ತಡೆ ಹಿಡಿದರು. ಮಧ್ಯಾಹ್ನದ ವೇಳೆ ವಾಹನಗಳ ಸರತಿ ಸಾಲು ಹೆಚ್ಚುತ್ತಲೇ ಹೋದುದರಿಂದ ಒಂದು ಬಾರಿ ಎಲ್ಲಾ ವಾಹನಗಳನ್ನು ಬಿಡಲಾಯಿತು. ಮಧ್ಯಾಹ್ನದ ಬಳಿಕ ಮತ್ತೆ ವಾಹನಗಳನ್ನು ಗೇಟ್ ಬಳಿಯಲ್ಲಿ ತಡೆ ಹಿಡಿಯಲಾಗಿದೆ. ಕಳೆದ ವರ್ಷ ಈ ಹೆದ್ದಾರಿ ಅಗಲವನ್ನು ವಿಸ್ತರಿಸುವ ಕಾಮಗಾರಿ ಕೈಗೊಳ್ಳಲಾಗಿತ್ತು. ಇದೀಗ ರಸ್ತೆ ಬಿರುಕು ಬಿಟ್ಟಿದ್ದರಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡುವ ಆರ್‌ಎನ್ ಕಂಪೆನಿಯವರೇ ರಸ್ತೆ ಸರಿಪಡಿಸುವ ನಿರೀಕ್ಷೆಯಿದೆ.

ಶಾಲೆ-ಕಾಲೇಜುಗಳಿಗೆ ರಜೆ ಎಲ್ಲೆಲ್ಲಿ?

ವಿಪರೀತ ಮಳೆ ಕಾರಣ ಹಾಸನ ಜಿಲ್ಲೆಯ ಸಕಲೇಶಪುರ, ಹಾಸನ, ಆಲೂರು, ಬೇಲೂರು ಹಾಗೂ ಅರಕಲಗೂಡು ತಾಲ್ಲೂಕಿನ ಶಾಲೆ- ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿದೆ.ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ- ಕಾಲೇಜುಗಳಿಗೆ ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ಶುಕ್ರವಾರ ಮತ್ತು ಶನಿವಾರ ರಜೆ ಘೋಷಿಸಿದ್ದಾರೆ. ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ  ಗುರುವಾರ ಮಧ್ಯಾಹ್ನದಿಂದ ಶುಕ್ರವಾರದವರೆಗೆ ಎಲ್ಲ ಶಾಲೆ- ಕಾಲೇಜಿಗೆ ರಜೆ ನೀಡಲಾಯಿತು.ಧಾರವಾಡ ತಾಲ್ಲೂಕು, ಶಹರ ವಲಯ ಹಾಗೂ ಕಲಘಟಗಿ ತಾಲ್ಲೂಕಿನ ಬಹುತೇಕ ಶಾಲೆಗಳಿಗೆ ಗುರುವಾರ ರಜೆ ಘೋಷಿಸಲಾಗಿತ್ತು. ಎರಡು ವಾರಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಧಾರವಾಡ ಜಿಲ್ಲೆಯ ಕಲಘಟಗಿ ಹಾಗೂ ಧಾರವಾಡ ತಾಲ್ಲೂಕಿನ ಶಾಲೆಗಳಿಗೆ ಪರಿಸ್ಥಿತಿ ನೋಡಿಕೊಂಡು ರಜೆ ಘೋಷಣೆ ಮಾಡುವಂತೆ ಜಿಲ್ಲಾಡಳಿತ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದೆ.ಶಾಲೆಗಳು ಸೋರುತ್ತಿರುವ, ಕಟ್ಟಡ ಕುಸಿದ ಪ್ರಕರಣಗಳು ವರದಿಯಾಗಿವೆ. ಇಂತಹ ಸಂದರ್ಭದಲ್ಲಿ ಆಯಾ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ (ಎಸ್‌ಡಿಎಂಸಿ) ಸಮಿತಿಯನ್ನು ಸಂಪರ್ಕಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಜೆ ಘೋಷಣೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ತಿಳಿಸಿದ್ದಾರೆ.ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಾತ್ರ ಶುಕ್ರವಾರ ರಜೆ ಘೋಷಿಸಲಾಗಿದೆ ಎಂದು ಬಿಇಒ ತಿಳಿಸಿದ್ದಾರೆ.ಅಗತ್ಯವೆನಿಸಿದರೆ ರಜೆ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಅಗತ್ಯವೆನಿಸಿದರೆ ಶಾಲೆಗಳಿಗೆ ರಜೆ ನೀಡುವಂತೆ ಬಿಇಒ ಸೂಚನೆ ನೀಡಿದ್ದಾರೆ. ಇದಲ್ಲದೆ ಜಿಲ್ಲೆಯ ಸಿದ್ದಾಪುರದಲ್ಲಿ ಗುರುವಾರ ಸತತ ಮಳೆಯಾಗಿದ್ದು, ಪಟ್ಟಣದ ಖಾಸಗಿ ಶಾಲೆಯೊಂದಕ್ಕೆ ಮಧ್ಯಾಹ್ನ 11ರ ನಂತರ ರಜೆ ನೀಡಲಾಯಿತು.

ಮಳೆ: ಆಗುಂಬೆ ಮೀರಿಸಿದ ಹುಲಿಕಲ್

ಹೊಸನಗರ:
ರಾಜ್ಯದ ಚಿರಾಪುಂಜಿ ಎಂದೇ ಖ್ಯಾತಿ ಪಡೆದಿರುವ ಆಗುಂಬೆಗಿಂತ ಹೊಸನಗರ ತಾಲ್ಲೂಕಿನ ಹುಲಿಕಲ್‌ನಲ್ಲಿ ಈ ವರ್ಷ ದಾಖಲೆಯ ಮಳೆಯಾಗಿದೆ.ಜುಲೈ ಅಂತ್ಯದವರೆಗೆ ಆಗುಂಬೆಯಲ್ಲಿ 6,032 ಮಿ.ಮೀ ಮಳೆಯಾದರೆ ಹುಲಿಕಲ್‌ನಲ್ಲಿ 6,220 ಮಿ.ಮೀ ಮಳೆಯಾಗಿದೆ. ತಾಲ್ಲೂಕಿನ ಘಟ್ಟ ಪ್ರದೇಶದಲ್ಲಿ ಕಳೆದ ವರ್ಷಕ್ಕಿಂತ ಸುಮಾರು 2,500 ಮಿ.ಮೀ ಹೆಚ್ಚು ಮಳೆಯಾಗಿದೆ ಎಂದು ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಕೆ.ಆರ್.ಎಸ್.: ಮುನ್ನೆಚ್ಚರಿಕೆ

ಮಂಡ್ಯ:
ಹೇಮಾವತಿ ಜಲಾಶಯದಿಂದ ಹೆಚ್ಚುವರಿ ನೀರು ಬಿಟ್ಟಿರುವುದರಿಂದ ಕೆಆರ್‌ಎಸ್ ಜಲಾಶಯದಿಂದ 88,493 ಸಾವಿರ ಕ್ಯೂಸೆಕ್ ನೀರು ಹೊರ ಹರಿಸಲಾಗುತ್ತಿದ್ದು, ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ತಿಳಿಸಿದ್ದಾರೆ.ಹೇಮಾವತಿ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಆ ಹಿನ್ನೆಲೆಯಲ್ಲಿ ಈಗ 57 ಸಾವಿರ ಕ್ಯೂಸೆಕ್ ಹೊರಹರಿವನ್ನು ಬೆಳಿಗ್ಗೆ ವೇಳೆಗೆ 80 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ.

Post Comments (+)