6 ತಿಂಗಳಲ್ಲಿ ರಾಜ್ ಸ್ಮಾರಕ ಪೂರ್ಣ

7

6 ತಿಂಗಳಲ್ಲಿ ರಾಜ್ ಸ್ಮಾರಕ ಪೂರ್ಣ

Published:
Updated:
6 ತಿಂಗಳಲ್ಲಿ ರಾಜ್ ಸ್ಮಾರಕ ಪೂರ್ಣ

ಬೆಂಗಳೂರು: ಕನ್ನಡಿಗರ ಕಣ್ಮಣಿ ಡಾ.ರಾಜ್‌ಕುಮಾರ್ ಅವರು ಅಭಿಮಾನಿ ದೇವರುಗಳನ್ನು ಅಗಲಿ ಮಂಗಳವಾರಕ್ಕೆ (ಏ.12) ಐದು ವರ್ಷಗಳು ಕಳೆದಿವೆ. ಈ ನಿಮಿತ್ತ ನಗರದ ಕಂಠೀರವ ಸ್ಟುಡಿಯೊದಲ್ಲಿರುವ ಅಣ್ಣಾವ್ರ ಸಮಾಧಿಗೆ ಭೇಟಿ ನೀಡಿದ ರಾಜ್ ಅವರ ಕುಟುಂಬ ವರ್ಗದವರು, ಸಾವಿರಾರು ಅಭಿಮಾನಿಗಳು, ಚಿತ್ರರಂಗದ ಗಣ್ಯರು ಶ್ರದ್ಧಾಂಜಲಿ ಅರ್ಪಿಸಿದರು.ಪುತ್ರರಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ ಸೇರಿದಂತೆ ಕುಟುಂಬ ವರ್ಗದವರು ಬೆಳಿಗ್ಗೆ 11ಗಂಟೆ ಸುಮಾರಿಗೆ ಸಮಾಧಿಗೆ ಬಂದು ಪೂಜೆ ಸಲ್ಲಿಸಿದರು.ಆರು ತಿಂಗಳಲ್ಲಿ ಸ್ಮಾರಕ ಪೂರ್ಣ: ಸುದ್ದಿಗಾರರ ಜೊತೆ ಮಾತನಾಡಿದ ಶಿವರಾಜ್‌ಕುಮಾರ್, ‘ಅಪ್ಪಾಜಿ ಅವರ ನೆನಪು ಸದಾಕಾಲ ಇರುತ್ತದೆ. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸಮಾಧಿ ಸ್ಥಳಕ್ಕೆ ಭೇಟಿ ನೀಡುತ್ತಿರುವುದೇ ಇದಕ್ಕೆ ಸಾಕ್ಷಿ’ ಎಂದು ಹೇಳಿದರು.‘ಅಪ್ಪಾಜಿ ಸಮಾಧಿಯನ್ನು ಸ್ಮಾರಕವನ್ನಾಗಿಸುವ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯು ಸ್ವಲ್ಪ ಮಟ್ಟಿಗೆ ನಿಧಾನಗತಿಯಲ್ಲಿರುವುದು ನಿಜ. ನಿಧಾನವಾದರೂ ಕಾಮಗಾರಿಯನ್ನು ಉತ್ತಮ ರೀತಿಯಲ್ಲಿ ಮಾಡುತ್ತಿದ್ದಾರೆ. ಮುಂದಿನ ಆರು ತಿಂಗಳೊಳಗೆ ಪೂರ್ಣಗೊಳ್ಳುವ ವಿಶ್ವಾಸ ಇದೆ’ ಎಂದು ಹೇಳಿದರು.‘ಡಾ.ರಾಜ್ ಟ್ರಸ್ಟ್ ವತಿಯಿಂದ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರದೆಡೆ ಗಮನ ಹರಿಸಲು ಯೋಚಿಸಲಾಗುತ್ತಿದೆ’ ಎಂದು ಹೇಳಿದರು.ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿ, ‘ಚಿತ್ರರಂಗದಲ್ಲಿ ಅಪಾರ ಸಾಧನೆಗೈದ ಮಹನೀಯರಿಗೆ ನೀಡಲಾಗುವ ‘ಅಪ್ಪಾಜಿ ಸೌಹಾರ್ದ ಪ್ರಶಸ್ತಿ’ಯನ್ನು ಅಪ್ಪಾಜಿ ಅವರ ಜನ್ಮದಿನವಾದ ಏ.24ರಂದು  ವಿತರಿಸಲಿದ್ದೇವೆ.ಕಳೆದ ವರ್ಷದಂತೆ ಈ ವರ್ಷವೂ ಮೂವರು  ಸಾಧಕರಿಗೆ ಪ್ರಶಸ್ತಿ ನೀಡಲಾಗುವುದು’ ಎಂದು ಹೇಳಿದರು.

ಪುನೀತ್ ರಾಜ್‌ಕುಮಾರ್ ಮಾತನಾಡಿ, ‘ಅಭಿಮಾನಿಗಳು ತೋರುವ ಪ್ರೀತಿಯನ್ನು ನೋಡಿ ಅಪ್ಪಾಜಿ ಅವರ ಬಗ್ಗೆ ಮತ್ತಷ್ಟು ಹೆಮ್ಮೆ ಉಂಟಾಗುತ್ತದೆ. ಅವರ ಮಗನಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಇದೆ’ ಎಂದು ಹೇಳಿದರು.‘ಅಪ್ಪಾಜಿ ಅವರ ಕುರಿತಾಗಿ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ನಾನು ಬರೆಯುತ್ತಿರುವ ‘ಪರ್ಸನ್ ಬಿಹೈಂಡ್ ಪರ್ಸನಾಲಿಟಿ’ ಪುಸ್ತಕ ಅಂತಿಮ ಹಂತದಲ್ಲಿದ್ದು, ಜೂನ್ ಕೊನೆಯ ವಾರದಲ್ಲಿ ಬಿಡುಗಡೆಯಾಗಬಹುದು. ಸುಮಾರು 3,500 ಅಪರೂಪದ ಚಿತ್ರಗಳು, ಲೇಖನಗಳು ಇದರಲ್ಲಿ ಇವೆ’ ಎಂದು ಅವರು ತಿಳಿಸಿದರು.ಸಾಹಿತಿ ಬರಗೂರು ರಾಮಚಂದ್ರಪ್ಪ, ಚಿತ್ರ ನಿರ್ಮಾಪಕ ಎಸ್.ಎ.ಚಿನ್ನೇಗೌಡ, ರಾಕ್‌ಲೈನ್ ವೆಂಕಟೇಶ್, ಸಾ.ರಾ. ಗೋವಿಂದು, ನಟ ಶ್ರೀಮುರಳಿ, ಸೇರಿದಂತೆ ಹಲವು ಜನರು ಭೇಟಿ ನೀಡಿದರು.ರಾಜ್ಯದ ವಿವಿಧ ಭಾಗಗಳಿಂದ ಬಂದಿದ ಅಭಿಮಾನಿಗಳಿಗೆ ಸಿಹಿ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಮಾಧಿ ಬಳಿ ರಾಜ್ ಅವರ ಕುರಿತಾದ ಪುಸ್ತಕಗಳು,ಸಿ.ಡಿ.ಗಳು, ಕನ್ನಡ ಧ್ವಜ, ಬ್ಯಾಚ್‌ಗಳ ಮಾರಾಟ ಭರಾಟೆಯಿಂದ ನಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry