ಭಾನುವಾರ, ಮೇ 22, 2022
25 °C
1,057 ಅಂಗಡಿ; 10 ಸಾವಿರ ಮೆಟ್ರಿಕ್ ಟನ್ ಅಕ್ಕಿ

6 ಲಕ್ಷ ಮಂದಿಗೆ ಅನ್ನಭಾಗ್ಯ; ಜಿಲ್ಲಾಡಳಿತ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ `ಅನ್ನಭಾಗ್ಯ'ಕ್ಕೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಜುಲೈ 10ರಿಂದ ಜಿಲ್ಲೆಯ 6 ಲಕ್ಷ ಬಿಪಿಎಲ್ ಪಡಿತರದಾರರು ತಿಂಗಳಿಗೆ 30 ಕೆ.ಜಿ ಅಕ್ಕಿ ಪಡೆಯಲಿದ್ದಾರೆ.ಮೈಸೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 1.24 ಲಕ್ಷ ಪಡಿತರದಾರರು ಇದ್ದರೆ, ಪಿರಿಯಾಪಟ್ಟಣದಲ್ಲಿ 48 ಸಾವಿರ ಫಲಾನುಭವಿಗಳು ಇದ್ದಾರೆ. ಜಿಲ್ಲೆಯ 1,057 ಅಂಗಡಿಗಳ ಮೂಲಕ ಅಕ್ಕಿ ವಿತರಣೆ ಮಾಡಲಾಗುತ್ತದೆ. ಇದಕ್ಕಾಗಿ ಜಿಲ್ಲಾಡಳಿತ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಅಕ್ಕಿ ದಾಸ್ತಾನಿಗೆ ಬಂಡೀಪಾಳ್ಯದ ಎಪಿಎಂಸಿಯಲ್ಲಿ ಸ್ಥಳಾವಕಾಶ ಗುರುತಿಸಲಾಗಿದೆ.ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅರ್ಧ ಗಂಟೆಯಲ್ಲೇ ಒಂದು ರೂಪಾಯಿಗೆ ಒಂದು ಕೆ.ಜಿ ಅಕ್ಕಿ ಯೋಜನೆಯನ್ನು ಘೋಷಣೆ ಮಾಡಿದ್ದರು. ಅಂತೆಯೇ ಜೂನ್ 1ರಿಂದ ಯೋಜನೆ ಆರಂಭವಾಗಬೇಕಾಗಿತ್ತು. ಆದರೆ, ಕೆಲವು ತೊಡಕುಗಳು ಎದುರಾದುದರಿಂದ ಅಂತಿಮವಾಗಿ ಜುಲೈ 10ರಿಂದ ಅಕ್ಕಿ ವಿತರಿಸಲು ಸರ್ಕಾರ ಮುಂದಾಗಿದೆ. ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಯೋಜನೆಗೆ ಚಾಲನೆ ನೀಡಲಿದ್ದು, ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಚಾಲನೆ ನೀಡುವರು.ಒಂದು ಕುಟುಂಬದಲ್ಲಿ ಒಬ್ಬರಿದ್ದರೆ 10 ಕೆ.ಜಿ, ಇಬ್ಬರಿದ್ದರೆ 20 ಕೆ.ಜಿ ಹಾಗೂ ಮೂವರಿಗಿಂತ ಹೆಚ್ಚಿದ್ದರೆ 30 ಕೆ.ಜಿ ಅಕ್ಕಿ ವಿತರಿಸಲಾಗುತ್ತದೆ. ಇದಕ್ಕಾಗಿ 10 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕಾಗುತ್ತದೆ. ಇದಲ್ಲದೇ, ಇನ್ನೂ 8 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಒಂದು ರೂಪಾಯಿಗೆ ಒಂದು ಕೆ.ಜಿ ಅಕ್ಕಿ ವಿತರಿಸುವುದರಿಂದ ದುರುಪಯೋಗವಾಗುವ ಸಾಧ್ಯತೆ ಹೆಚ್ಚಾಗಿದೆ.ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ, ಅಗತ್ಯ ಬಿದ್ದಲ್ಲಿ ಪಡಿತರ ವಿತರಣಾ ಅಂಗಡಿಗಳು ಹಾಗೂ ಗೋದಾಮುಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.