ಶುಕ್ರವಾರ, ನವೆಂಬರ್ 22, 2019
19 °C
ಮನೆ ಭದ್ರತಾ ಸಿಬ್ಬಂದಿ ಮೇಲೆ ಅನುಮಾನ

6 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ

Published:
Updated:

ಬೆಂಗಳೂರು: ಕಿಟಕಿ ಗಾಜು ಒಡೆದು ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆ ಮಾಲೀಕರ ಕೈಕಾಲುಗಳನ್ನು ಕಟ್ಟಿ ಹಾಕಿ ಆರು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಬಾಗಲೂರು ಸಮೀಪದ ಶ್ರೀನಿವಾಸಗಾರ್ಡನ್‌ನಲ್ಲಿ ಮಂಗಳವಾರ ನಸುಕಿನಲ್ಲಿ ನಡೆದಿದೆ.ಘಟನೆ ಸಂಬಂಧ ರೇಷ್ಮೆ ವ್ಯಾಪಾರಿ ರೇಣುಕಾಪ್ರಸಾದ್ ಎಂಬುವರು ದೂರು ಕೊಟ್ಟಿದ್ದಾರೆ. `ಮನೆಯ ಸೆಕ್ಯುರಿಟಿ ಗಾರ್ಡ್ ಚಕ್ರಬಹದ್ಧೂರ್, ತನ್ನ ಸಹಚರರ ಮೂಲಕ ಕಳವು ಮಾಡಿಸಿರಬಹುದು' ಎಂದು ಅವರು ಶಂಕಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಬಾಗಲೂರು ಪೊಲೀಸರು ಹೇಳಿದ್ದಾರೆ.`ಬೆಳಿಗ್ಗೆ 3.30ರ ಸುಮಾರಿಗೆ ಮನೆಗೆ ನುಗ್ಗಿದ ಐದು ಮಂದಿ ಮುಸುಕುಧಾರಿಗಳು, ಕೋಣೆಯಲ್ಲಿ ಮಲಗಿದ್ದ ನನ್ನ ಹಾಗೂ ಪತ್ನಿಯ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಬಾಯಿಗೆ ಬಟ್ಟೆ ತುರುಕಿದರು. ನಂತರ ಅಲ್ಮೆರಾದಲ್ಲಿದ್ದ 200 ಗ್ರಾಂ ತೂಕದ ಚಿನ್ನಾಭರಣ ದೋಚಿ ಕಿಟಕಿಯಿಂದ ಜಿಗಿದು ಪರಾರಿಯಾದರು. ಆರು ಗಂಟೆ ಸುಮಾರಿಗೆ ಸ್ಥಳೀಯ ನಿವಾಸಿ ನಾರಾಯಣಮ್ಮ ಅವರು ಮನೆಗೆ ಬಂದು ಹಗ್ಗ ಬಿಚ್ಚಿದರು. ನಂತರ ಠಾಣೆಗೆ ದೂರು ದಾಖಲಿಸಿದೆ' ಎಂದು ರೇಣುಕಾಪ್ರಸಾದ್ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.ಕಾಂಪೌಂಡ್ ಹಾರಿ ಮನೆ ಆವರಣ ಪ್ರವೇಶಿಸಿರುವ ದುಷ್ಕರ್ಮಿಗಳು, ಗೋಡೆ ಬದಿ ಇದ್ದ ಏಣಿ ಮೂಲಕ ಮೊದಲ ಮಹಡಿಗೆ ತೆರಳಿದ್ದಾರೆ. ನಂತರ ಕಿಟಕಿ ಗಾಜು ಒಡೆದು ಮನೆಯೊಳಗೆ ನುಗ್ಗಿದ್ದಾರೆ. ಈ ಅಂಶಗಳನ್ನು ಗಮನಿಸಿದರೆ ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಗೊತ್ತಾಗುತ್ತದೆ. ಮನೆಯ ಪ್ರವೇಶ ದ್ವಾರಗಳು, ಏಣಿಯನ್ನಿಟ್ಟಿದ್ದ ಸ್ಥಳದ ಬಗ್ಗೆ ಅರಿತಿದ್ದ ಚಕ್ರಬಹದ್ಧೂರ್, ತನ್ನ ಸಹಚರರ ಮೂಲಕ ಕಳವು ಮಾಡಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.`ಮೂರು ವರ್ಷಗಳ ಹಿಂದೆ ರೇಣುಕಾ ಪ್ರಸಾದ್ ಅವರ ಮನೆಗೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿದ್ದ ಚಕ್ರಬಹದ್ಧೂರ್, 2011ರಲ್ಲಿ ಅವರ ಮನೆಯಲ್ಲಿ ನಗದು ಸೇರಿದಂತೆ ್ಙ20 ಮೌಲ್ಯದ ಚಿನ್ನಾಭರಣ ಕಳವು ಮಾಡಿ ತಲೆಮರೆಸಿಕೊಂಡಿದ್ದ. ಈ ಸಂಬಂಧ ರೇಣುಕಾಪ್ರಸಾದ್ ಕೊಟ್ಟಿದ್ದ ದೂರನ್ನು ಆಧರಿಸಿ ಆತನನ್ನು ಬಂಧಿಸಿ ಹಣ ವಶಪಡಿಸಿಕೊಳ್ಳಲಾಗಿತ್ತು. ಆದರೆ, ರೇಣುಕಾಪ್ರಸಾದ್ ಅವರೇ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿದ್ದರು. ಅಲ್ಲದೇ, ಈ ಸಂಬಂಧ ಯಾವುದೇ ದೂರು ದಾಖಲಿಸಬೇಡಿ ಎಂದು ಪೊಲೀಸರಲ್ಲಿ ಮನವಿ ಮಾಡಿದ್ದರು' ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಆರೋಪಿ, ಮಾಲೀಕರ ಒಪ್ಪಿಗೆ ಮೇರೆಗೆ ಪುನಃ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿದ್ದ. ಆದರೆ, ಮೂರು ದಿನಗಳಿಂದ ಆತ ಕೆಲಸಕ್ಕೆ ಬಂದಿರಲಿಲ್ಲ. ಅಲ್ಲದೇ, `ರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳ ತಂಡದ ಸದಸ್ಯನೊಬ್ಬ ಮೊಬೈಲ್‌ನಲ್ಲಿ ಮಾತನಾಡುತ್ತಾ ನಮ್ಮ ಕೈಕಾಲುಗಳನ್ನು ಕಟ್ಟುತ್ತಿದ್ದ. ಆತನಿಗೆ ಮೊಬೈಲ್ ಮೂಲಕ ಯಾರೊ ಮಾರ್ಗದರ್ಶನ ನೀಡುತ್ತಿದ್ದರು' ಎಂದು ರೇಣುಕಾಪ್ರಸಾದ್ ಹೇಳಿದ್ದಾರೆ. ಹೀಗಾಗಿ ಚಕ್ರಬಹದ್ಧೂರ್ ಮೇಲೆ ಬಲವಾದ ಅನುಮಾನವಿದೆ. ಸದ್ಯ ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ ಎಂದರು.

ಪ್ರತಿಕ್ರಿಯಿಸಿ (+)