6 ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕೋತ್ತರ ಕೋರ್ಸ್

7

6 ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕೋತ್ತರ ಕೋರ್ಸ್

Published:
Updated:

ಹಾಸನ: ‘ಮುಂದಿನ ಶೈಕ್ಷಣಿಕ ವರ್ಷದಿಂದಲೇ ಹಾಸನ ಸೇರಿದಂತೆ ಆರು ಸರ್ಕಾರಿ ವೈದ್ಯಕೀಯ  ಕಾಲೇಜುಗಳಲ್ಲಿ ಸ್ನಾತಕೋತ್ತರ ಕೋರ್ಸ್ ಆರಂಭಿಸಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮದಾಸ್ ತಿಳಿಸಿದರು.ಮೈಸೂರು ವಿಭಾಗದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲು ಬುಧವಾರ ನಗರಕ್ಕೆ ಆಗಮಿಸಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿ ‘ಸ್ನಾತಕೋತ್ತರ ಕೋರ್ಸ್ ಆರಂಭಿಸಲು ಈಗಾಗಲೇ  ಭಾರತೀಯ ವೈದ್ಯಕೀಯ ಸಂಸ್ಥೆಯು ಅನುಮತಿ ನೀಡಿದೆ. ನಾಲ್ಕು ಕೋರ್ಸ್‌ಗಳಿಗೆ ಅನುಮತಿ ನೀಡುವಂತೆ  ನಾವು ಮನವಿ ಮಾಡಿದ್ದೇವೆ. ಒಟ್ಟಾರೆ ಸೀಟುಗಳು ಹಾಗೂ ಕೋರ್ಸ್‌ಗಳ ಬಗ್ಗೆ ಇನ್ನು ತೀರ್ಮಾನವಾಗಬೇಕು. ಆದರೆ, ಮುಂದಿನ ವರ್ಷದಿಂದ ಸ್ನಾತಕೋತ್ತರ ಕೋರ್ಸ್ ಆರಂಭವಾಗುವುದು ಖಚಿತ. ಇದಲ್ಲದೆ ಎಂಸಿಐ  ನಿಯಮಾವಳಿಯಲ್ಲಿ ಸ್ವಲ್ಪ ಸಡಿಲಿಕೆ ಮಾಡಿರುವುದರಿಂದ ಮುಂದಿನ ವರ್ಷ 1150 ಹೆಚ್ಚು ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಲಭ್ಯವಾಗಲಿದ್ದು, ಒಟ್ಟಾರೆ ಸೀಟುಗಳ ಸಂಖ್ಯೆ 2250ಕ್ಕೆ ಏರಲಿವೆ’ ಎಂದರು.‘ರಾಜ್ಯದ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಹಂಗಾಮಿ ನಿರ್ದೇಶಕರು ಹಾಗೂ ಆಡಳಿತಾಧಿಕಾರಿಗಳಿದ್ದು  ಫೆಬ್ರುವರಿ ಅಂತ್ಯದೊಳಗೆ ಹೊಸ ನೇಮಕಾತಿ ಆಗಲಿದೆ. ಈ ಹುದ್ದೆಗಳಿಗೆ ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಿದ್ದು 124 ಅರ್ಜಿಗಳು ಬಂದಿವೆ’ ಎಂದು ಹೇಳಿದರು.‘ಹಾಸನ ಹಾಗೂ ಮೈಸೂರು ವೈದ್ಯಕೀಯ ಕಾಲೇಜು ನೇಮಕಾತಿಯಲ್ಲಿ ಆಗಿರುವ ಗೊಂದಲಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು. ಕೆಲಸದಿಂದ ತೆಗೆದುಹಾಕಿರುವ ಸಿಬ್ಬಂದಿಗೆ ನೋಟಿಸ್ ನೀಡುವಂತೆ ಮಾತ್ರ  ಹೈಕೋರ್ಟ್ ಆದೇಶ ನೀಡಿತ್ತು. ಅದರಂತೆ ನೋಟಿಸ್ ನೀಡಿದ್ದೇವೆ. ಸಿಬ್ಬಂದಿಯೂ ಉತ್ತರ ನೀಡಿದ್ದಾರೆ. ಅದನ್ನು ಇಲಾಖೆಯ ಸಮಿತಿ ಪರಿಶೀಲಿಸುತ್ತಿದೆ. ಹಾಸನದಲ್ಲಿ ಅನೇಕ ಸಿಬ್ಬಂದಿ ನಕಲಿ ಅಂಕಪಟ್ಟಿ ಕೊಟ್ಟಿರುವುದು, ವಯಸ್ಸಿನ ಬಗ್ಗೆ ಸುಳ್ಳು ಪ್ರಮಾಣಪತ್ರ ನೀಡಿರುವುದು, ಅರ್ಹತೆ ಇಲ್ಲದಿದ್ದರೂ ಸಂದರ್ಶನಕ್ಕೆ ಬಂದು ಉದ್ಯೋಗ ಗಿಟ್ಟಿಸಿಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಈ ಎಲ್ಲ ವಿಚಾರಗಳನ್ನು ಗಮನಿಸಿ, ಅರ್ಹರಿಗೆ ಮಾತ್ರ ಉದ್ಯೋಗ ನೀಡಲಾಗುವುದು. ನೇಮಕಾತಿಗೆ ಪುನಃ ಅರ್ಜಿಗಳನ್ನು ಆಹ್ವಾನಿಸುವುದಿಲ್ಲ.  ಬಂದಿರುವ ಅರ್ಜಿಗಳಲ್ಲೇ ಅರ್ಹರನ್ನು ಆರಿಸಲಾಗುವುದು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry