ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ

Last Updated 6 ಸೆಪ್ಟೆಂಬರ್ 2013, 20:35 IST
ಅಕ್ಷರ ಗಾತ್ರ

ಬೆಂಗಳೂರು: ಜ್ಞಾನಭಾರತಿ ಆವರಣದಲ್ಲಿ ನೇಪಾಳ ಮೂಲದ ಕಾನೂನು ವಿದ್ಯಾರ್ಥಿನಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರದ ಅಪರಾಧಿಗಳಿಗೆ ನಗರ ಸೆಷನ್ಸ್ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ರಾಮನಗರ ಜಿಲ್ಲೆ ಕೈಲಂಚ ಹೋಬಳಿಯ ಮೆಟಾರೆದೊಡ್ಡಿ ಗ್ರಾಮದ ಮದ್ದೂರ (20), ಶಿವಣ್ಣ (20), ಈರಯ್ಯ ಉರುಫ್ ಈರ (20), ಎಲಿಯಯ್ಯ ಅಲಿಯಾಸ್ ಕುಮಾರ (23), ರಾಮು (20) ಮತ್ತು ಮೈಸೂರು ಜಿಲ್ಲೆಯ ದೊಡ್ಡಈರಯ್ಯ (19) ಶಿಕ್ಷೆಗೆ ಗುರಿಯಾದವರು. ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯವು ಆ ಆರು ಮಂದಿಯನ್ನು ತಪ್ಪಿತಸ್ಥರೆಂದು ಬುಧವಾರ (ಸೆ.4) ತೀರ್ಮಾನಿಸಿ, ಶಿಕ್ಷೆ ಪ್ರಮಾಣವನ್ನು ಕಾಯ್ದಿರಿಸಿತ್ತು.

ಅಪರಾಧಿಗಳನ್ನು ಮಧ್ಯಾಹ್ನ ಕೋರ್ಟ್‌ಗೆ ಹಾಜರುಪಡಿಸಲಾಯಿತು. ನ್ಯಾಯಾಧೀಶ ಕೃಷ್ಣಮೂರ್ತಿ ಸಂಗಣ್ಣವರ್ ಅವರು ಅಪರಾಧಿಗಳಿಗೆ ತಲಾರೂ. 5 ಸಾವಿರ ದಂಡ ಮತ್ತು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು.

ಅತ್ಯಾಚಾರಕ್ಕೀಡಾದ ಯುವತಿಗೆ ಪರಿಹಾರ ಧನ ನೀಡುವ ಬಗ್ಗೆ ಸರ್ಕಾರದ `ಅಪರಾಧ ಗಾಯ ಪರಿಹಾರ ಮಂಡಳಿ' (ಕ್ರಿಮಿನಲ್ ಇಂಜುರಿ ಕಾಂಪನ್ಸೇಷನ್ ಬೋರ್ಡ್) ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

ಅತ್ಯಾಚಾರ ಘಟನೆ ನಡೆದ ದಿನ (2012, ಅ.13) ಅಪರಾಧಿಗಳು ಮತ್ತು ಅವರ ಇಬ್ಬರು ಸಹಚರರು ಗಂಧದ ಮರ ಕಡಿದು ಸಾಗಿಸುವ ಉದ್ದೇಶಕ್ಕಾಗಿ ರಾತ್ರಿ 8.30ರ ಸುಮಾರಿಗೆ ಜ್ಞಾನಭಾರತಿ ಆವರಣಕ್ಕೆ ಬಂದಿದ್ದರು. ಅವರು ಗಂಧದ ಮರದ ಹುಡುಕಾಟದಲ್ಲಿದ್ದಾಗ, ಯುವತಿ ಮತ್ತು ಆಕೆಯ ಸ್ನೇಹಿತ ಕಣ್ಣಿಗೆ ಬಿದ್ದಿದ್ದರು. ಆಗ ಅಪರಾಧಿಗಳು ಯುವತಿಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ, ಯುವತಿಯನ್ನು ಸಮೀಪದ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ (ಐಎಸ್‌ಇಸಿ) ನಡುವಿನ ಜಾಗಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದರು.

ಯುವತಿ ಮತ್ತು ಆಕೆಯ ಸ್ನೇಹಿತ ನೀಡಿದ ಮಾಹಿತಿ ಆಧರಿಸಿ ನಗರದ ಪಶ್ಚಿಮ ವಿಭಾಗದ ಪೊಲೀಸರು ಅ.19ರಂದು ಬಾಲಕ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದರು. ಪ್ರಕರಣದ ತನಿಖಾಧಿಕಾರಿ ಜ್ಞಾನಭಾರತಿ ಠಾಣೆಯ ಇನ್‌ಸ್ಪೆಕ್ಟರ್ ಬಿ.ಬಾಲರಾಜು ಅವರು ಬಂಧಿತರ ವಿರುದ್ಧ ನ.16ರಂದು ನ್ಯಾಯಾಲಯಕ್ಕೆ ದೋಷಾರೋಪಣಾಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ಎಸ್.ವಿ.ಭಟ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಪ್ರಕರಣದ ಏಳನೇ ಆರೋಪಿ ಬಾಲಕನಾಗಿರುವುದರಿಂದ ಬಾಲ ನ್ಯಾಯಾಲಯ ಆತನ ವಿಚಾರಣೆ ನಡೆಸುತ್ತಿದೆ. ಪ್ರಮುಖ ಆರೋಪಿ ರಾಜ ತಲೆಮರೆಸಿಕೊಂಡಿದ್ದಾನೆ.

ಸಂತಸವಾಗಿದೆ
`ಸಾಕ್ಷಿಗಳು ನಿಯಮಿತವಾಗಿ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ಹೇಳಿದ್ದರು. ಪ್ರಕರಣದ ತನಿಖಾಧಿಕಾರಿಗಳು ಸಮರ್ಪಕವಾಗಿ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು. ಅವರೆಲ್ಲರ ಪರಿಶ್ರಮದಿಂದ ಪ್ರಕರಣ ಬೇಗನೆ ಇತ್ಯರ್ಥವಾಗಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ' ಎಂದು ಎಸ್.ವಿ.ಭಟ್ `ಪ್ರಜಾವಾಣಿ'ಗೆ ತಿಳಿಸಿದರು. `ಪ್ರಕರಣ ಸಂಬಂಧ ನ್ಯಾಯಾಲಯ ತ್ವರಿತವಾಗಿ ವಿಚಾರಣೆ ಪೂರ್ಣಗೊಳಿಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಿರುವುದರಿಂದ ಸಂತಸವಾಗಿದೆ' ಎಂದು ಬಾಲರಾಜ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT