ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಇಲಾಖೆಗಳ 13 ಸದಸ್ಯರ ಆಯ್ಕೆ

ಸರ್ಕಾರಿ ನೌಕರರ ಸಂಘಕ್ಕೆ ಶಾಂತಿಯುತ ಮತದಾನ
Last Updated 23 ಜುಲೈ 2013, 9:44 IST
ಅಕ್ಷರ ಗಾತ್ರ

ಹಾವೇರಿ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಗೆ ಆರು ಇಲಾಖೆಗಳ 13 ಸದಸ್ಯರ ಆಯ್ಕೆಗೆ ಸೋಮವಾರ ನಗರದ ಸರ್ಕಾರಿ ನೌಕರರ ಭವನ ಹಾಗೂ ಪ್ರಾಥಮಿಕ ಶಾಲೆ ನಂ.3 ರಲ್ಲಿ ಚುನಾವಣೆ ನಡೆಯಿತು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಗೆ ಒಟ್ಟು 44 ಇಲಾಖೆಗಳ ಪೈಕಿ 38 ಇಲಾಖೆಗಳ 46 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ ಆರು ಇಲಾಖೆಗಳ 13 ಪ್ರತಿನಿಧಿನಿಧಿಗಳ ಆಯ್ಕೆಗೆ ಮತದಾನ ನಡೆಸಲಾಯಿತು.

ಚುನಾವಣೆ ನಡೆಯುವ ಇಲಾಖೆಗಳಲ್ಲಿ ಪ್ರಾಥಮಿಕ ಶಿಕ್ಷಣ ಇಲಾಖೆಯ ನಾಲ್ಕು ಸ್ಥಾನಗಳಿಗೆ 17 ಅಭ್ಯರ್ಥಿಗಳ ಆಯ್ಕೆಗೆ ಸರ್ಕಾರಿ ಪ್ರಾಥಮಿಕ ಶಾಲೆ ನಂ.3 ರಲ್ಲಿ, ವಾಣಿಜ್ಯ ತೆರಿಗೆ ಇಲಾಖೆಯ ಎರಡು ಸ್ಥಾನಗಳಿಗೆ ಮೂರು ಅಭ್ಯರ್ಥಿಗಳು, ಖಜಾನೆಯ ಒಂದು ಸ್ಥಾನಕ್ಕೆ ಎರಡು, ಡಿಡಿಪಿಐ, ಬಿಇಓ ಇಲಾಖೆಯ ಒಂದು ಸ್ಥಾನಕ್ಕೆ ಎರಡು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂರು ಸ್ಥಾನಕ್ಕೆ ಒಂಬತ್ತು, ಜಿಲ್ಲಾ ಆಸ್ಪತ್ರೆಯ ಎರಡು ಸ್ಥಾನಗಳಿಗೆ ಐದು ಅಭ್ಯರ್ಥಿಗಳ ಆಯ್ಕೆಗೆ ಸರ್ಕಾರಿ ನೌಕರರ ಭವನದಲ್ಲಿ ಚುನಾವಣೆ ನಡೆಯಿತು.

ಬಿರುಶಿನ ಮತದಾನ: ಚುನಾವಣೆ ನಡೆಯುವ ಇಲಾಖೆಗಳಲ್ಲಿ ಶಿಕ್ಷಣ ಇಲಾಖೆ ಹೊರತು ಪಡಿಸಿ ಉಳಿದ ಇಲಾಖೆಗಳ ಮತದಾರರಿಗೆ ಎರಡು ಗಂಟೆಗಳ ಕಾಲಾವಕಾಶ ನೀಡಲಾಗಿತ್ತು. ಶಿಕ್ಷಣ ಇಲಾಖೆ ಮತದಾರರಿಗೆ ಒಒಡಿ ಸೌಲಭ್ಯವನ್ನು ಕೊಡಲಾಗಿತ್ತು.

ಹೀಗಾಗಿ ಆಯಾ ಇಲಾಖೆಯ ಮತದಾರರು ಬೆಳಿಗ್ಗೆಯಿಂದಲೇ ತಮಗೆ ನಿಗದಿ ಮಾಡಿದ ಸ್ಥಳಕ್ಕೆ ಆಗಮಿಸಿ ಮತದಾನ ಮಾಡಿದರು. ಶಿಕ್ಷಣ ಇಲಾಖೆಯಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿದ್ದರಿಂದ ಮತಗಟ್ಟೆಯಲ್ಲಿ ಮಹಿಳಾ ಮತ್ತು ಪುರುಷ ನೌಕರರು ಪ್ರತ್ಯೇಕ ಸರದಿಯಲ್ಲಿ ನಿಂತು ಮತ ಚಲಾವಣೆ ಮಾಡುತ್ತಿರುವುದು ವಿಶೇಷವಾಗಿತ್ತು.

ಆಯ್ಕೆಯಾದವರು: ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಮತ ಎಣಿಕೆ ಕಾರ್ಯ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ನಡೆಯಿತಲ್ಲದೇ ಫಲಿತಾಂಶವನ್ನು ಪ್ರಕಟಿಸಲಾಯಿತು.

ವಾಣಿಜ್ಯ ತೆರಿಗೆ ಇಲಾಖೆಯ 2 ಸ್ಥಾನಗಳಿಗೆ ಶಿವಲೀಲಾ ಗಡ್ಡದ 22 ಮತ, ಪಿ.ವಿ. ಹೊಳಲ 19ಮತಗಳಿಸಿ ಆಯ್ಕೆಯಾದರೆ, ಇನ್ನೊಬ್ಬ ಸ್ಪರ್ಧಿ ನಾಗರತ್ನಾ ನೀರಲಕಟ್ಟಿ ಕೇವಲ 2ಮತ ಪಡೆದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 3 ಸ್ಥಾನಕ್ಕೆ ಶಂಕರ ಎಫ್ ಸುತಾರ 71ಮತಗಳು, ರವಿ ಬಣಕಾರ, ರಂಗಣ್ಣ ರಾಠೋಡ್ ತಲಾ 50 ಮತಗಳಿಸಿ ಆಯ್ಕೆಯಾದರು. ಇನ್ನುಳಿದ ಸ್ಪರ್ಧಿಗಳಾದ ಎಸ್.ಎಸ್. ಹಿರೇಮಠ 45ಮತ, ಎಸ್.ಎಸ್. ಹುರಕಡ್ಲಿ 26ಮತ, ಎಂ.ಎಫ್. ಕುರವಳ್ಳಿ 24ಮತ, ಆರಿಪುಲ್ಲಾ ಯಲಿಗಾರ, ಜಿ.ಎನ್. ನೆಗಳೂರಮಠ ತಲಾ 20, ಮೋಹನ ಹಲುವಾಗಲ 17ಮತಗಳಿಸಿ ಸೋಲು ಅನುಭವಿಸಿದರು.

ಜಿಲ್ಲಾ ಆಸ್ಪತ್ರೆಯ 2 ಸ್ಥಾನಗಳಿಗೆ ಬಸವರಾಜ ಕಮತರ 33ಮತ, ಜಯಮ್ಮ ಅಗಡಿ 31ಮತಗಳಿಸಿ ಆಯ್ಕೆಯಾದರು. ಎನ್.ಎಸ್. ಕುಂದಗೋಳ 21ಮತ, ಅಶೋಕ ಬೆಂಗಳೂರ 13ಮತ, ರವಿಕಾಂತ ಮಾಂಡ್ರೆ 3ಮತ ಪಡೆದು ಸೋತರು.

ಖಜಾನೆ ಇಲಾಖೆಯ 1ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದರು. ಆದರೆ ಒಂದೇ ಮತ ಚಲಾವಣೆಯಾಗಿತ್ತು. ಆ ಒಂದು ಮತ ಪಡೆದ ಅಶೋಕ ಜಾಡಬಂದಿ ಆಯ್ಕೆಯಾದರು. ರಮೇಶ ಗೊಂದಿ ಯಾವುದೇ ಮತ ಪಡೆಯದೇ ಸೋಲು ಅನುಭವಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ, ಬಿಇಓ ಕ್ಷೇತ್ರದ ಒಂದು ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದರು. ಎಂ.ಎಸ್. ನೆಲ್ಲೂರ 29 ಮತಗಳಿಸಿ ಆಯ್ಕೆಯಾದರೆ, ಎಸ್.ಎಸ್. ಬಳಿಗೇರ 16 ಮತಗಳಿಸಿ ಸೋಲು ಅನುಭವಿಸಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯ ಚುನಾವಣಾಧಿಕಾರಿ ಎಚ್.ಬಿ. ಹತ್ತಿಮತ್ತೂರ ತಿಳಿಸಿದ್ದಾರೆ.

ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ ಹೆಚ್ಚು ಅಂದರೆ, 971 ಮತದಾರರು ಇದ್ದು, ಅದರಲ್ಲಿ 800ಕ್ಕೂ ಹೆಚ್ಚು ಮತದಾರರು ಮತಚಲಾಯಿಸಿದ್ದರು. ಹೀಗಾಗಿ ಮತ ಎಣಿಕೆ ಕಾರ್ಯ ರಾತ್ರಿಯಾದರೂ ಮುಂದುವರೆದಿದ್ದರಿಂದ ಫಲಿತಾಂಶ ಪ್ರಕಟಣೆ ವಿಳಂಬವಾಗಿದೆ ಎಂದು ಅವರು ಹೇಳಿದ್ದಾರೆ.

ವಿಜಯೋತ್ಸವ: ಚುನಾವಣೆಯಲ್ಲಿ ಜಯಗಳಿಸುತ್ತಿದ್ದಂತೆಯೇ ವಿಜೇತ ಅಭ್ಯರ್ಥಿಗಳ ಬೆಂಬಲಿಗರು ಅಭ್ಯರ್ಥಿಗಳಿಗೆ ಹೂಮಾಲೆ ಹಾಕಿ ಅಭಿನಂದಿಸಿದರು. ನಂತರ ಸರ್ಕಾರಿ ನೌಕರರ ಭವನದ ಎದುರಿನಲ್ಲಿಯೇ ಪಟಾಕಿ ಸಿಡಿಸಿ, ಪರಸ್ಪರ ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು.

ಹೆಸರು ನಾಪತ್ತೆ: ಪ್ರತಿಭಟನೆ
ಹಾನಗಲ್:
ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯ ಪ್ರೌಢಶಾಲಾ ಶಿಕ್ಷಕರ ಮತದಾರರ ಪಟ್ಟಿಯಲ್ಲಿ  ಹೆಸರು ಇಲ್ಲದಿರುವುದನ್ನು ಖಂಡಿಸಿದ ಟಿಜಿಟಿ ಶಿಕ್ಷಕರು ಸೋಮವಾರ ಇಲ್ಲಿನ  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಚುನಾವಣೆ ಫಲಿತಾಂಶ ತಡೆ ಹಿಡಿಯುವಂತೆ ಆಗ್ರಹಿಸಿದರು.

ಎಸ್.ಎನ್.ಭಟ್, ಗಣೇಶ ಹೆಗಡೆ, ರಮೇಶ, ಪ್ರಭಾಕರ ಪಿ., ಬಾಲಸಿಂಗ್ ಎಂ.ಎಸ್. ಎಂ.ಎಂ.ಕೋತವಾಲ, ರೆಹಮಾನ ಖಾನ್, ಎಂ.ಎ.ನವಾಬ್, ಐ.ಬಿ.ಸವಣೂರ, ಶಶಿಧರರಾವ್ ಕೆ, ಸೋಮಶೇಖರ ಕೆ,  ಪ್ರವೀಣ ಬಿ.ಎಸ್, ಚಂದ್ರಕಾಂತಗೌಡ ಎಸ್,  ಶ್ರೀನಿವಾಸ ಬಿ.ಕೆ, ಚಾಮರಾಜ್, ರಾಘವೇಂದ್ರ, ಸುಬ್ರಹ್ಮಣ್ಯ, ರಾಮಪ್ಪ ಎಸ್, ಅಚ್ಯುತ್ ನಾಯಕ, ರವಿಕುಮಾರ, ಯೋಗಾನಂದ, ಮಹೇಶ ಸಿ.ಎನ್, ಮಹೇಶ ಕೆ.ಜೆ, ರವಿಕುಮಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT