ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ದಿನ ಪೊಲೀಸ್ ವಶಕ್ಕೆ

ಅತ್ಯಾಚಾರ ಆರೋಪ– ತೇಜ್‌ಪಾಲ್‌ ವಿಚಾರಣೆ ಆರಂಭ
Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಪಣಜಿ (ಪಿಟಿಐ): ಸಹೋದ್ಯೋಗಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆಪಾದನೆ ಮೇಲೆ ಬಂಧಿತರಾಗಿರುವ ‘ತೆಹೆಲ್ಕಾ’ ಪ್ರಧಾನ ಸಂಪಾದಕ ತರುಣ್‌ ತೇಜ್‌ಪಾಲ್‌ ಅವರನ್ನು ನ್ಯಾಯಾಲ­ಯವು ಆರು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ. ಗೋವಾ ಅಪರಾಧ ವಿಭಾಗದ ಪೊಲೀಸರು ತೇಜ್‌ಪಾಲ್‌ ಅವರನ್ನು ಐದು ತಾಸುಗಳ ವಿಚಾರಣೆಗೆ ಗುರಿ­ಪಡಿಸಿದ್ದರು.

ಭಾನುವಾರ ಪ್ರಕರಣದ ವಿಚಾರಣೆ ನಡೆಸಿದ ಮೊದಲ ದರ್ಜೆ ಮ್ಯಾಜಿ­ಸ್ಟ್ರೇಟ್‌ ಕೋರ್ಟ್‌ನ ನ್ಯಾಯಾಧೀಶೆ ಶಮಾ ಜೋಷಿ ಅವರು, ತೇಜ್‌ಪಾಲ್‌ ಅವರನ್ನು 6 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಲು ಆದೇಶ ನೀಡಿದರು. ಪೊಲೀಸರು 14 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿದ್ದರು.
‘ಆರೋಪಿಯ ವಿರುದ್ಧ ಗಂಭೀರ­ವಾದ ಆಪಾದನೆ ಇರುವ ಕಾರಣ ಅವರನ್ನು ಪೊಲೀಸರು ವಿಚಾರಣೆಗೆ ಗುರಿಪಡಿಸ­ಬೇಕಾಗಿದೆ. ಆದ್ದರಿಂದ 14 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಬೇಕು’ ಎಂದು ಸರ್ಕಾರ ಪರ ವಕೀಲ ಫ್ರಾನ್ಸಿಸ್‌ ತವೇರಾ ಕೋರಿದರು.

ಇದನ್ನು ಬಲವಾಗಿ ವಿರೋಧಿಸಿದ ಆರೋಪಿ ತೇಜ್‌ಪಾಲ್‌ ಪರ ವಕೀಲರು, ‘ನಮ್ಮ ಕಕ್ಷಿದಾರರು ತನಿಖೆಗೆ ಸಹಕರಿ­ಸುತ್ತಿದ್ದಾರೆ ಆದ್ದರಿಂದ ಪೊಲೀಸರ ವಶಕ್ಕೆ ನೀಡಬಾರದು’ ಎಂದು ಮನವಿ ಮಾಡಿಕೊಂಡರು. ಶನಿವಾರ ರಾತ್ರಿ 9ಗಂಟೆಯ ಹೊತ್ತಿಗೆ ತೇಜ್‌ಪಾಲ್‌ ಅವರನ್ನು ಬಂಧಿಸಿದ ಗೋವಾ ಪೊಲೀಸರು, ಭಾನುವಾರ ಮಧ್ಯಾಹ್ನ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರುಪಡಿಸಿದ್ದರು.

ಐದು ತಾಸು ವಿಚಾರಣೆ: ಕೋರ್ಟ್‌ ಆದೇಶದ ಬಳಿಕ ತೇಜ್‌­ಪಾಲ್‌ ಅವರನ್ನು ಅಪರಾಧ ವಿಭಾಗದ ಮುಖ್ಯ­-ಕಚೇರಿಗೆ ಕರೆದೊ­ಯ್ಯ­­ಲಾಯಿತು. ಅಲ್ಲಿ ರಾತ್ರಿ 8 ಗಂಟೆಯವರೆಗೂ ವಿಚಾರಣೆ ನಡೆಸಿ ನಂತರ ಅವರನ್ನು ಲಾಕ್‌ಅಪ್‌ಗೆ ಹಾಕಲಾ­ಯಿತು. ಸೋಮವಾರ (ಡಿ. 2) ಕೂಡ ವಿಚಾರಣೆ ಮುಂದುವರಿ­ಯಲಿದೆ ಎಂದು ಮೂಲಗಳು ಹೇಳಿವೆ.

ಕೊಲೆ ಆರೋಪಿಗಳಿದ್ದ ಲಾಕ್‌ಅಪ್‌ನಲ್ಲಿ ತೇಜ್‌ಪಾಲ್‌: ಶನಿವಾರ ರಾತ್ರಿ ಪೊಲೀಸ್‌ ಕಸ್ಟಡಿ­ಯಲ್ಲಿದ್ದ ತೇಜ್‌ಪಾಲ್‌ ಅವರನ್ನು  ಇಬ್ಬರು ಕೊಲೆ ಆರೋಪಿಗಳೂ ಸೇರಿದಂತೆ ಮೂವರು ಆಪಾದಿತರು ಇದ್ದ ಲಾಕ್‌ಅಪ್‌ನಲ್ಲಿ ಇರಿಸಲಾಗಿತ್ತು. ಮಧ್­ಯರಾತ್ರಿ 12.30ರ ಹೊತ್ತಿಗೆ ವೈದ್ಯ­ಕೀಯ ತಪಾಸಣೆಯನ್ನು ಗೋವಾ ವೈದ್ಯಕೀಯ ಕಾಲೇಜ್‌ನಲ್ಲಿ ನಡೆಸ­ಲಾಯಿತು.

ವೈದ್ಯಕೀಯ ಕಾಲೇಜು ಬಳಿ ಎದು­ರಾದ ಮಾಧ್ಯಮದ ತಂಡಕ್ಕೆ ತೇಜ್‌ಪಾಲ್‌ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅಷ್ಟರಲ್ಲಿ ಅವರ ವಕೀಲರು ಮತ್ತು ಕುಟುಂಬದವರು ಅವರನ್ನು ಸುತ್ತುವರಿದರು. ತಡರಾತ್ರಿ 2ಗಂಟೆಯ ಸುಮಾರಿಗೆ ಅವರನ್ನು ಮತ್ತೆ ಲಾಕ್‌ಅಪ್‌ಗೆ ಹಾಕಲಾಯಿತು.
ಲಾಕ್‌ಅಪ್‌ನಲ್ಲಿದ್ದಾಗ ಮತ್ತು ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ತೇಜ್‌ಪಾಲ್‌ ಅವರು ಶಾಂತವಾಗಿಯೇ ಇದ್ದರು ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಕೋರ್ಟ್‌ ಅನುಮತಿ ಮೇರೆಗೆ  ಕುಟುಂಬದವರು ಒದಗಿಸಿದ ಒಂದು ಜೊತೆ ವಸ್ತ್ರವನ್ನು ತೇಜ್‌ಪಾಲ್‌ ಅವರಿಗೆ ನೀಡಲಾಯಿತು. 

ಯಾವ ಕಲಂ?: ತೇಜ್‌ಪಾಲ್‌ ವಿರುದ್ಧ  ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ ಮಹಿಳೆಯ ಮರ್ಯಾದೆಗೆ ಭಂಗ (354ಎ) ಮತ್ತು ಅಧಿಕಾರ/ಹುದ್ದೆ ದುರುಪಯೋಗ ಮಾಡಿಕೊಂಡು ಅತ್ಯಾಚಾರ (376(2)(ಕೆ)) ಅನ್ವಯ ಪ್ರಕರಣ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT