ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ವಿಮಾನ, ಹೆಲಿಕಾಪ್ಟರ್ ಭಸ್ಮ

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಅತಿ ಗಣ್ಯ ವ್ಯಕ್ತಿಗಳ ಬಳಕೆಗಾಗಿ ಇರುವ ಇಲ್ಲಿಯ ಬೇಗಂಪೇಟೆಯ ಹಳೆಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಮಧ್ಯರಾತ್ರಿ ಸಂಭವಿಸಿದ ಭಾರಿ ಬೆಂಕಿ ಆಕಸ್ಮಿಕದಲ್ಲಿ ಆರು ಸಣ್ಣ ತರಬೇತಿ ವಿಮಾನಗಳು ಹಾಗೂ ಮುಖ್ಯಮಂತ್ರಿ ಬಳಕೆಗಾಗಿ ಇರುವ ಒಂದು ಹೆಲಿಕಾಪ್ಟರ್ ಸುಟ್ಟು ಹೋಗಿವೆ. ಘಟನೆಯಲ್ಲಿ ಸುಮಾರು ನೂರು ಕೋಟಿ ರೂಪಾಯಿ ಆಸ್ತಿಪಾಸ್ತಿ ಹಾನಿಯಾಗಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ.

ಘಟನೆಯ ತನಿಖೆ ನಡೆಸಲು ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಸಿಐಡಿಗೆ ಸೂಚಿಸಿದ್ದು, ಈಗಾಗಲೇ ತನಿಖೆ ಆರಂಭಿಸಲಾಗಿದೆ ಎಂದು ಸಿಐಡಿ ಹೆಚ್ಚುವರಿ ಮಹಾ ನಿರ್ದೇಶಕ ಟಿ.ಕೃಷ್ಣಪ್ರಸಾದ್ ತಿಳಿಸಿದ್ದಾರೆ.

ಘಟನೆ ವಿವರ: ರಾತ್ರಿ 11-35ರ ಹೊತ್ತಿಗೆ ಕಾಣಿಸಿಕೊಂಡ ಬೆಂಕಿಯ ಜ್ವಾಲೆ ಕ್ಷಣಾರ್ಧದಲ್ಲೇ ಎಲ್ಲೆಡೆ ವ್ಯಾಪಿಸಿತು. ಪರಿಣಾಮ ನಿಲ್ದಾಣದಲ್ಲಿದ್ದ ವಿಮಾನಗಳು ಹೊತ್ತಿ ಉರಿದವು ಎಂದು ರಾಜ್ಯದ ಅಗ್ನಿಶಾಮಕ ಮೂಲ ತಿಳಿಸಿವೆ. ಈ ಸಂದರ್ಭ ಸ್ಫೋಟದ ಸದ್ದು ಸಹ ಕೇಳಿಸಿದೆ ಎಂದು ಸಮೀಪದ ನಿವಾಸಿಗಳು ತಿಳಿಸಿದ್ದಾರೆ.

ಹತ್ತು ಅಗ್ನಿಶಾಮಕ ವಾಹನಗಳಲ್ಲಿ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು. ಬೆಂಕಿಗೆ ಆಹುತಿಯಾದ ಸಣ್ಣ ವಿಮಾನಗಳು ವಿಮಾನ ಅಕಾಡೆಮಿಯೊಂದಕ್ಕೆ ಸೇರಿದ್ದು, ಘಟನೆಯಲ್ಲಿ ವಿಮಾನ ದುರಸ್ತಿ ಕೊಠಡಿಯ ಗೋಡೆ ಕುಸಿದುಬಿದ್ದಿದೆ.

ಮೂರು ಬಾರಿ ಸ್ಫೋಟದ ಸದ್ದು ಕೇಳಿಬಂದಿದ್ದು, ಇದಾದ ನಂತರ ಬೆಂಕಿ ಕಾಣಿಸಿಕೊಂಡಿದ್ದು ಕ್ಷಣಾರ್ಧದಲ್ಲೇ ಭಾರಿ ಪ್ರಮಾಣದಲ್ಲಿ ಬೆಂಕಿ ನಿಲ್ದಾಣಕ್ಕೆ ಹತ್ತಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ನಿಖರ ಕಾರಣದ ಕುರಿತು ತನಿಖೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ತಿಳಿಸಿದ್ದಾರೆ.

ಮುಖ್ಯಮಂತ್ರಿಗಾಗಿ ಸರ್ಕಾರ 2009ರಲ್ಲಿ ಈ ಹೆಲಿಕಾಪ್ಟರ್ ಅನ್ನು ರೂ. 63 ಕೋಟಿ ಪಾವತಿಸಿ ಖರೀದಿಸಿತ್ತು. ಅವರಿಗೆ ಈಗ ಪರ್ಯಾಯ ವ್ಯವಸ್ಥೆ ಒದಗಿಸಲಾಗುತ್ತಿದ್ದೆ ಎಂದು ರಾಜ್ಯದ ಮೂಲಸೌಲಭ್ಯ, ಬಂದರು ಸಚಿವ ಗಂಟಾ ಶ್ರೀನಿವಾಸ ರಾವ್ ಸುದ್ದಿಗಾರರಿಗೆ ತಿಳಿಸಿದರು.

ಪ್ರಾಥಮಿಕ ತನಿಖೆಯಿಂದ ಅಗ್ನಿ ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಆಗಿದೆ. ಆದರೆ ಎಲ್ಲಾ ದೃಷ್ಟಿಕೋನದಿಂದಲೂ ತನಿಖೆ ನಡೆಸಲಾಗುವುದು ಎಂದು ಕೃಷ್ಣ ಪ್ರಸಾದ್ ತಿಳಿಸಿದರು. 

ಶಮಶಾಬಾದ್‌ನಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣವಾದ ನಂತರ ಬೇಗಂಪೇಟೆ ವಿಮಾನ ನಿಲ್ದಾಣವನ್ನು ಅತಿ ಗಣ್ಯ ವ್ಯಕ್ತಿಗಳ ಸೇವೆಗಾಗಿ ಮಾತ್ರ ಮೀಸಲಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT