60 ರೈತರ ಬಂಧನ, ಬಿಡುಗಡೆ

7

60 ರೈತರ ಬಂಧನ, ಬಿಡುಗಡೆ

Published:
Updated:
60 ರೈತರ ಬಂಧನ, ಬಿಡುಗಡೆ

ಸರಗೂರು: ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಲು ಕಬಿನಿ ಜಲಾಶಯಕ್ಕೆ ನುಗ್ಗುವ ನಿರ್ಧಾರ ಕೈಗೊಂಡು ಭಾನುವಾರ ಮೆರವಣಿಗೆ ಹೊರಟ ರೈತರನ್ನು ಪೊಲೀಸರು ಸುಮಾರು 13 ಕಿ.ಮೀ. ದೂರದಲ್ಲೇ ತಡೆದರು. ಈ ವೇಳೆ ತೀವ್ರ ಪ್ರತಿಭಟನೆಗೆ ಮುಂದಾದ 60ಕ್ಕೂ ಹೆಚ್ಚು ರೈತರನ್ನು ಬಂಧಿಸಲಾಯಿತು.ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಅವರ ಮುಂದಾಳತ್ವದಲ್ಲಿ, ನಂಜನಗೂಡು ಮತ್ತು ತಿ.ನರಸೀಪುರ ತಾಲ್ಲೂಕಿನ ಸುಮಾರು 150 ರೈತರು ಎಚ್.ಡಿ.ಕೋಟೆ ತಾಲ್ಲೂಕಿನ ಹ್ಯಾಂಡ್‌ಪೋಸ್ಟ್‌ನಲ್ಲಿ ಬೆಳಿಗ್ಗೆ ಸಭೆ ಸೇರಿ ಚರ್ಚಿಸಿದರು. ಕಬಿನಿ ಜಲಾಶಯಕ್ಕೇ ನುಗ್ಗಿ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಬಂದ್ ಮಾಡಲು ನಿರ್ಧರಿಸಿದರು. ಘೋಷಣೆಗಳನ್ನು ಕೂಗುತ್ತ ಜಲಾಶಯದತ್ತ ಹೊರಟ ರೈತರನ್ನು ಪೊಲೀಸರು ಹ್ಯಾಂಡ್‌ಪೋಸ್ಟ್ ರಾಜೇಂದ್ರಪ್ರಸಾದ್ ವೃತ್ತದ ಬಳಿಯೇ ತಡೆದರು. ಇದರಿಂದ ಆಕ್ರೋಶಗೊಂಡ ರೈತರು ಅಲ್ಲೇ ಧರಣಿ ಕುಳಿತರು.ಆದರೆ, ಈ ಪ್ರದೇಶದಲ್ಲಿ ಐಪಿಸಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಯಿದ್ದು ಇಲ್ಲಿ ಪ್ರತಿಭಟನೆ ನಡೆಸದಂತೆ ಪೊಲೀಸರು ಸೂಚಿಸಿದರು. ಆದರೆ, ಯಾವುದಕ್ಕೂ ಜಗ್ಗದ ರೈತರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದಾಗಿ ಸುಮಾರು 60 ರೈತರನ್ನು ಬಂಧಿಸಿದ ಪೊಲೀಸರು, ಅವರನ್ನು ಮೈಸೂರಿಗೆ ಕರೆದೊಯ್ದರು.ಮುಖಂಡರಾದ ಬಡಗಲಪುರ ನಾಗೇಂದ್ರ, ಹೊಸೂರು ಕುಮಾರ್, ಲೋಕೇಶ್‌ರಾಜೇ ಅರಸ್, ಬಸವರಾಜು, ಕನ್ನಡ ಚಳವಳಿ ಹೋರಾಟಗಾರ ಶಿವಶಂಕರ್, ರವಿಕುಮಾರ್, ಮಹದೇವಪ್ಪ, ತಟ್ಟೆಕೆರೆ ನಾಗಣ್ಣಾಚಾರ್ ಸೇರಿದಂತೆ, ಬಂಧಿತರಲ್ಲಿ ಹೆಚ್ಚಾಗಿ ರೈತಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರೇ ಇದ್ದಾರೆ.13 ಕಿ.ಮೀ. ಪೊಲೀಸರ ಸರ್ಪಗಾವಲು

ಪ್ರತಿಭಟನಾಕಾರರು ಕಬಿನಿ ಜಲಾಶಯದ ಆಸುಪಾಸು ಸುಳಿಯದಂತೆ ಕಟ್ಟೆಚ್ಚರ ವಹಿಸಿದ ಪೊಲೀಸರು, ಜಲಾಶಯದಿಂದ 13 ಕಿ.ಮೀ. ದೂರದವರೆಗೆ ಸರ್ಪಗಾವಲು ಏರ್ಪಡಿಸಿದ್ದಾರೆ. ಹೀಗಾಗಿ ಭಾನುವಾರ ಬೆಳಿಗ್ಗೆ ಜಲಾಶಯಕ್ಕೆ ನುಗ್ಗಲು ತೀರ್ಮಾನಿಸಿದ್ದ ಚಳವಳಿಗಾರರನ್ನು ಹ್ಯಾಂಡ್‌ಪೋಸ್ಟ್‌ನಲ್ಲೇ ತಡೆದರು.ಜಲಾಶಯ ವ್ಯಾಪ್ತಿಗೆ ಬರುವ ಸರಗೂರು, ಬಿದರಹಳ್ಳಿ, ಕೆ.ಜಿ.ಹಳ್ಳಿ ಮುಂತಾದ ಗ್ರಾಮಗಳಲ್ಲೂ ಪೊಲೀಸರು ಕಾವಲು ನಿಂತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬೀಚನಹಳ್ಳಿ, ಸರಗೂರು ಮತ್ತು ಹ್ಯಾಂಡ್‌ಪೋಸ್ಟ್‌ನಲ್ಲಿ ಕೂಡ ನಿಷೇಧಾಜ್ಞೆ ವಿಧಿಸಲಾಗಿದೆ.ಜಿಲ್ಲಾ ಎಸ್‌ಪಿ ಆರ್.ದಿಲೀಪ್, ಹೆಚ್ಚುವರಿ ಎಸ್‌ಪಿ ಮೋಹನ್ ರೆಡ್ಡಿ, ಡಿವೈಎಸ್‌ಪಿ ಮುದ್ದುಮಹ ದೇವಯ್ಯ ಕೂಡ ಶನಿವಾರದಿಂದ ಸ್ಥಳದಲ್ಲೇ ಠಿಕಾಣೆ ಹೂಡಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಪೋಲಿಸರನ್ನು ಬಂದೋಬಸ್ತಿಗೆ ನಿಯೋಜಿಸಲಾಗಿದೆ.ಸಭೆಯಲ್ಲಿ ಮುಖಂಡರ ಆಕ್ರೋಶ

ಇದಕ್ಕೂ ಮುನ್ನ ಸರಗೂರಿನಲ್ಲಿ ಸಭೆ ಸೇರಿದ ರೈತರು ಕೇಂದ್ರ ಹಾಗೂ ತಮಿಳುನಾಡು ಸರ್ಕಾರಗಳ ಧೋರಣೆಗೆ ಕಿಡಿ ಕಾರಿದರು.ಚಳವಳಿಯ ನೇತೃತ್ವ ವಹಿಸಿದ ಬಡಗಲಪುರ ನಾಗೇಂದ್ರ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಹಾಗೂ ವಿರೋಧ ಪಕ್ಷದವರೆಲ್ಲ ತಮ್ಮ ಸ್ವಾರ್ಥಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರ ಹಾಗೂ ತಮಿಳುನಾಡು ಸರ್ಕಾರಗಳ ಕುತಂತ್ರದಿಂದ ರೈತರು ಬಲಿಪಶುವಾಗುತ್ತಿದ್ದಾರೆ.  ತಮಿಳುನಾಡಿನಲ್ಲಿ ಬರ ಇಲ್ಲ. ನೀರಿನ ಅಭಾವವೂ ಇಲ್ಲ.  ಜಯಲಲಿತಾ ಮುಖ್ಯಮಂತ್ರಿ ಆದಾಗಲೆಲ್ಲ ಸಮಸ್ಯೆ ಎದುರಾಗುತ್ತಿದೆ. ಪ್ರತಿಷ್ಠೆಗಾಗಿ ರಾಜ್ಯದ ರೈತರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಬಿನಿ ನೀರು ಹೊರಹೋದರೆ ಈಚೆಗೆ ನಾಟಿ ಮಾಡಿದ ಬತ್ತ ಸಂಪೂರ್ಣ ಹಾಳಾಗುತ್ತದೆ. ಮಾತ್ರವಲ್ಲ; ನಾಗರಹೊಳೆ ಮತ್ತು ಬಂಡೀಪುರ ಉದ್ಯಾನ ವನದಲ್ಲಿರುವ ಸಾವಿರಾರು ವನ್ಯಜೀವಿಗಳೂ ಸಾಯುವ ಸ್ಥಿತಿ ಬರುತ್ತದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry