ಬುಧವಾರ, ಆಗಸ್ಟ್ 4, 2021
20 °C

60 ಸಾವಿರ ಮ್ಯಾನ್‌ಹೋಲ್ ಶುಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಒಂದು ತಿಂಗಳ ಅವಧಿಯೊಳಗೆ ನಗರದಲ್ಲಿರುವ ಸುಮಾರು 60 ಸಾವಿರ ಮ್ಯಾನ್‌ಹೋಲ್‌ಗಳನ್ನು ಶುಚಿಗಳಿಸಲಾಗುವುದು’ ಎಂದು ಬೆಂಗಳೂರು ಜಲಮಂಡಲಿ ಸಚಿವ ಎಸ್. ಸುರೇಶ್‌ಕುಮಾರ್ ತಿಳಿಸಿದರು.ತ್ಯಾಗರಾಜನಗರದಲ್ಲಿ ಸೋಮವಾರ ಮ್ಯಾನ್‌ಹೋಲ್‌ಗಳ ಬೃಹತ್ ಪ್ರಮಾಣದ ಹೂಳೆತ್ತುವಿಕೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.‘ನಗರದಲ್ಲಿ ಸುಮಾರು 1 ಲಕ್ಷ 20 ಸಾವಿರ ಮ್ಯಾನ್‌ಹೋಲ್‌ಗಳಿವೆ. ಪ್ರತಿ ವಾರ್ಡ್‌ನ ತಗ್ಗುಪ್ರದೇಶದ ಮ್ಯಾನ್‌ಹೋಲ್‌ಗಳ ಶುಚಿಗೆ ಆದ್ಯತೆ ನೀಡಲಾಗಿದೆ. ಕಸಕಡ್ಡಿ ತುಂಬಿರುವ, ತೆರೆದ ಮ್ಯಾನ್‌ಹೋಲ್‌ಗಳನ್ನು ಕೂಡ ಶುಚಿಗೊಳಿಸಲಾಗುವುದು’ ಎಂದು ಹೇಳಿದರು.‘ಮನೆಗಳಿಗೆ ನೀರು ನುಗ್ಗುವುದು, ರಸ್ತೆಗಳಲ್ಲಿ ಪ್ರವಾಹದ ರೀತಿಯಲ್ಲಿ ನೀರು ಹರಿಯುವುದು ಇತ್ಯಾದಿ ಸಮಸ್ಯೆಗಳನ್ನು ತಪ್ಪಿಸಲು ಮುಂಗಾರು ಮಳೆ ಆರಂಭವಾಗುವ ಮುನ್ನವೇ ಶುಚಿಕಾರ್ಯ ನಡೆಸಲಾಗುತ್ತಿದೆ. ಇನ್ನು ಒಂದು ತಿಂಗಳ ಕಾಲ ಪ್ರತಿದಿನ ಎಲ್ಲಾ ವಾರ್ಡ್‌ಗಳಲ್ಲಿ ಈ ಶುಚಿಕಾರ್ಯ ಮುಂದುವರಿಯಲಿದೆ’ ಎಂದರು.‘ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಸಭೆಯಲ್ಲಿ ಮ್ಯಾನ್‌ಹೋಲ್‌ಗಳ ಹೂಳೆತ್ತಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದರು. ಅದರಂತೆ ಒಂದು ತಿಂಗಳ ಅವಧಿಯಲ್ಲಿ ನಗರದ ಎಲ್ಲಾ ವಾರ್ಡ್‌ಗಳ ಮ್ಯಾನ್‌ಹೋಲ್‌ಗಳನ್ನು ಶುಚಿಗೊಳಿಸಲಾಗುವುದು’ ಎಂದರು.ಜಲಮಂಡಲಿ ಅಧ್ಯಕ್ಷ ಪಿ.ಬಿ.ರಾಮಮೂರ್ತಿ ಮಾತನಾಡಿ ‘ಜಲಮಂಡಲಿಯ ಸ್ವಂತ ಖರ್ಚಿನಲ್ಲಿ ಹೂಳೆತ್ತುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಲಮಂಡಲಿ ವ್ಯಾಪ್ತಿಯಲ್ಲಿ 76 ಜೆಟಿಂಗ್ ಯಂತ್ರಗಳಿದ್ದು ಪ್ರತಿ ವಾರ್ಡ್‌ಗಳಲ್ಲಿ 6ರಿಂದ 8 ಯಂತ್ರಗಳನ್ನು ಬಳಸಿ ಮ್ಯಾನ್‌ಹೋಲ್‌ಗಳನ್ನು ಶುದ್ಧಿಗೊಳಿಸಲಾಗುವುದು’ ಎಂದು ತಿಳಿಸಿದರು.ಶಾಸಕ ರವಿ ಸುಬ್ರಹ್ಮಣ್ಯ, ಪಾಲಿಕೆ ಆಡಳಿತ ಪಕ್ಷದ ಮಾಜಿ ನಾಯಕ ಬಿ.ಎಸ್.ಸತ್ಯನಾರಾಯಣ, ಜಲಮಂಡಲಿಯ ಪ್ರಧಾನ ಎಂಜಿನಿಯರ್ ಟಿ.ವೆಂಕಟರಾಜು ಮತ್ತಿತರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.