60 ಹಾಸಿಗೆ ಹೆರಿಗೆ ವಿಭಾಗ

7

60 ಹಾಸಿಗೆ ಹೆರಿಗೆ ವಿಭಾಗ

Published:
Updated:

ಸಾಗರ: ಇಲ್ಲಿನ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ₨ 11ಕೋಟಿ ವೆಚ್ಚದಲ್ಲಿ 60 ಹಾಸಿಗೆಗಳ ಹೆರಿಗೆ ವಿಭಾಗ ಮಂಜೂರಾಗಿದ್ದು, ಕಟ್ಟಡಕ್ಕೆ ಸ್ಥಳ ಗುರುತಿಸಿದ ತಕ್ಷಣ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ತಿಳಿಸಿದರು.ಇಲ್ಲಿನ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಹೆರಿಗೆ ವಿಭಾಗವು ವೈದ್ಯರು ಹಾಗೂ ಸಿಬ್ಬಂದಿ ಉಳಿದುಕೊಳ್ಳಲು ಅವಕಾಶ ಕಲ್ಪಿಸುವ ನಾಲ್ಕು ವಸತಿ ಗೃಹ ಒಳಗೊಂಡಿದೆ ಎಂದು ಹೇಳಿದರು.ರೋಗಿಗಳು ಹೆಚ್ಚಿನ ಹಣ ಔಷಧಿಗಳಿಗೆ ಖರ್ಚು ಮಾಡುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಪ್ರತಿ ತಾಲ್ಲೂಕಿನಲ್ಲಿ ನ್ಯಾಯ ಬೆಲೆ ಔಷಧಿ ಅಂಗಡಿ ತೆರೆಯಲು ಉದ್ದೇಶಿಸಿದೆ. ಮೂರು ತಿಂಗಳೊಳಗೆ ಈ ಅಂಗಡಿಗಳು ಆರಂಭಗೊಳ್ಳಲಿವೆ. ಇಲ್ಲಿ ಮಾರಾಟವಾಗುವ ಔಷಧಿಗಳ ಗುಣಮಟ್ಟ ಪರೀಕ್ಷಿಸುವ ವ್ಯವಸ್ಥೆ ಇದ್ದು, ಆತಂಕಗೊಳ್ಳುವ ಅಗತ್ಯವಿಲ್ಲ ಎಂದರು.ಸರ್ಕಾರಿ ಆಸ್ಪತ್ರೆ ಬಾಧಿಸುತ್ತಿರುವ ತಜ್ಞ ವೈದ್ಯರ ಹಾಗೂ ಸಿಬ್ಬಂದಿ  ಕೊರತೆಯ ವಿಷಯದ ಬಗ್ಗೆ ಗಮನ ಸೆಳೆದಾಗ, ‘ಡಿ’ ದರ್ಜೆ ನೌಕರರ, ಆರೋಗ್ಯ ಸಹಾಯಕರ ನೇಮಕಾತಿಗೆ ಸರ್ಕಾರದ ಒಪ್ಪಿಗೆ ದೊರಕಿದೆ. ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರೆತ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ನಿಂತಿದ್ದು ಇದನ್ನು ಬಗೆಹರಿಸಲು ಸರ್ಕಾರ ಸಚಿವ ಸಂಪುಟದ ಉಪಸಮಿತಿ ರಚಿಸಿದೆ. ಶೀಘ್ರದಲ್ಲೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.ವೈದ್ಯಕೀಯ ಪದವಿ ಪಡೆದ ನಂತರ ಕನಿಷ್ಟ ಒಂದು ವರ್ಷ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ ಎಂಬ ನೂತನ ಕಾಯ್ದೆ ರಚಿತಗೊಂಡಿದ್ದು, ಅಂಕಿತಕ್ಕಾಗಿ ರಾಷ್ಟ್ರಪತಿಗಳ ಬಳಿ ಕಳುಹಿಸಲಾಗಿದೆ. ಈ ಕಾನೂನು ಜಾರಿಗೆ ಬಂದ ನಂತರ ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರ ಕೊರತೆ ಕೂಡ ನೀಗಲಿದೆ ಎಂದು ತಿಳಿಸಿದರು.ತಾಲ್ಲೂಕಿನ ಹಂದಿಗೋಡು ಗ್ರಾಮದಲ್ಲಿ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಸಂತ್ರಸ್ತರಿಗೆ ನೆರವು ನೀಡುವುದಾಗಿ, ಸಂಶೋಧನೆ ನಡೆಸುವುದಾಗಿ ಕೆಲವು ಸ್ವಯಂ ಸೇವಾ ಸಂಘಟನೆಗಳು ಮುಂದಾಗಿ ನಂತರ ಮಾಯವಾಗುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸರ್ಕಾರದ ಅನುಮತಿ ಇಲ್ಲದೆ ಯಾವುದೇ ಸಂಸ್ಥೆ ಬಂದರೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಶಿವಣ್ಣ ರೆಡ್ಡಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಕೆ.ಪಿ.ಅಚ್ಯುತ್, ಸಿವಿಲ್ ಸರ್ಜನ್ ಡಾ.ಬಿ.ವಿ.ಸಂಗಮ್,  ಡಾ.ಜಯರಾಜ್, ಡಾ.ಪ್ರಕಾಶ್ ಬೋಸ್ಲೆ, ಡಾ.ಶಶಿಧರ್, ಡಾ.ಶ್ರೀನಿವಾಸ್, ಡಾ.ರಾಜೇಶ್, ಡಾ.ಮಂಜುನಾಥ್ ಪ್ರಸಾದ್ ಇನ್ನಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry