ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ಆದರೂ ಕುಂದದ ಕೌಶಲ

Last Updated 1 ಅಕ್ಟೋಬರ್ 2011, 9:15 IST
ಅಕ್ಷರ ಗಾತ್ರ

ಗದಗ: ನೆರೆತಿರುವ ಗಡ್ಡ ವಯಸ್ಸಾಗಿದೆ ಎಂದು ತೋರಿಸುತ್ತಿದ್ದರೂ ಬಾಚಣಿಗೆ ಹಿಡಿದುಕೊಂಡಿರುವ ಕೈ ಬೆರಳುಗಳು ಮಾತ್ರ ಚಕಚಕನೆ ತಲೆಕೂದಲಿನ ಮೇಲೆ ಓಡಾಡುತ್ತಿವೆ. ಅದು ಕತ್ತರಿಯೊಂದಿಗಿನ ಜುಗಲ್‌ಬಂದಿಯೇ ಸರಿ. ಹತ್ತು-ಹದಿನೈದು ನಿಮಿಷದಲ್ಲಿ ಹೊಸದೊಂದು ಕೇಶವಿನ್ಯಾಸ ಸಿದ್ಧ.

-ಇದು ಗದುಗಿನ ಜಗನ್ನಾಥ ನಾರಾಯಣ ಕ್ಷೀರಸಾಗರ ಅವರ ಕೈಚಳಕಕ್ಕೊಂದು ಉದಾಹರಣೆ. ಕ್ಷೌರಿಕ ವೃತ್ತಿಯಲ್ಲಿ 50 ವರ್ಷವಾದ ಮೇಲೆ ಅವರನ್ನು ನೇಪಥ್ಯಕ್ಕೆ ಸರಿಸಿಬಿಡಲಾಗುತ್ತದೆ. ಕೆಲವರಂತೂ ತಾವಾಗಿಯೇ `ಸ್ವಯಂ ನಿವೃತ್ತಿ~ ಘೋಷಣೆ ಮಾಡಿಬಿಡುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕ್ಷೀರಸಾಗರ ಈಗಲೂ ಕಾಲೇಜು ಹುಡುಗರ ಅಚ್ಚುಮೆಚ್ಚಿನ ಕೇಶ ವಿನ್ಯಾಸಕರಾಗಿದ್ದಾರೆ.

ಕ್ಷೀರಸಾಗರ ಅವರ ವಯಸ್ಸು ಆರವತ್ತಾದರೂ ಇನ್ನು ಅವರಲ್ಲಿ ಹೊಸತನ ಶೋಧಿಸುವ ಚೇತನ ಇದೆ. ದೇಶ-ವಿದೇಶದ ಹಲವು ವಿನ್ಯಾಸಗಳು ಗದುಗಿನ ಹುಡುಗರ ತಲೆ ಕೂದಲಿನಲ್ಲಿ ರೂಪ ಪಡೆದಿವೆ. ಗದುಗಿನ ಒಕ್ಕಲಗೇರಿಯ ರಾಚೋಟಿ ವೀರಭದ್ರೇಶ್ವರ ದೇವಸ್ಥಾನ ಬಳಿ ಸೆಲೂನ್ ಇಟ್ಟುಕೊಂಡಿರುವ ಕ್ಷೀರಸಾಗರ ತಮ್ಮ ಇಬ್ಬರು ಗಂಡು ಮಕ್ಕಳ ಜೊತೆ `ಕಾಯಕ~ದಲ್ಲಿ ತೊಡಗಿದ್ದಾರೆ.

“ನಮ್ಮ ಅಪ್ಪ ಅಂಗಡಿಯಲ್ಲಿ ಇದ್ದರೆ ನಮ್ಮನ್ನು ಯಾರು ಕೇಳುವವರೆ ಇಲ್ಲ. ಎಲ್ಲರೂ ಅವರೇ ಕಟಿಂಗ್ ಮಾಡಬೇಕು ಎಂದು ಬಯಸುತ್ತಾರೆ. ಕೆಲವರಂತೂ ಫೋನ್ ಮಾಡಿ, ಅಂಗಡಿಯಲ್ಲಿ ಅಪ್ಪ ಇರುವ ಬಗ್ಗೆ ಖಚಿತಪಡಿಸಿಕೊಂಡು, ನಂತರ ಬರುತ್ತಾರೆ” ಎಂದು ಮಗ ವಿಕಾಸ ಕ್ಷೀರಸಾಗರ `ಪ್ರಜಾವಾಣಿ~ಗೆ ತಿಳಿಸಿದರು.

ಕ್ಷೀರಸಾಗರ ಅವರ ಬಳಿಗೆ ದೂರದ ಬೆಳಗಾವಿ, ಬಾಗಲಕೋಟೆಯಿಂದ ಕಾಯಂ ಗ್ರಾಹಕರು ಬರುತ್ತಾರೆ. ಮುಂಡರಗಿ, ಗಜೇಂದ್ರಗಡ, ಗದಗ-ಬೆಟಗೇರಿಯ ಹಲವಾರು ಕಾಲೇಜಿನ ಯುವಕರಿಗೆ ಕ್ಷೀರಸಾಗರ ಅವರೇ ಕೇಶವಿನ್ಯಾಸಗೊಳಿಸಬೇಕು. ಅಷ್ಟೊಂದು ಜನಪ್ರಿಯತೆ.ವಯಸ್ಸಾಗುತ್ತಿದ್ದರೂ `ಹೆಸರುವಾಸಿ~ಗೆ ಮಾಸಿಲ್ಲ.

ಕ್ಷೀರಸಾಗರ ಅವರ ಮೂಲ ಸೊಲ್ಲಾಪುರ. ಅಲ್ಲಿ ಟೆಕ್ಸ್‌ಟೈಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಕಾರ್ಖಾನೆ ಬಂದ್ ಆದ ಬಳಿಕ ಗದುಗಿಗೆ ಬಂದರು. ತಮ್ಮ ಸಂಬಂಧಿಕರ ಜೊತೆ ಇದ್ದುಕೊಂಡು, ಗುಜ್ಜಾರ ಬಸ್ತಿ ಬಳಿ ಸಣ್ಣದೊಂದು ಸೆಲೂನ್ ತೆರೆದರು. ಆಗ ಅವರ ಬಳಿ ಒಂದು ಕುರ್ಚಿ, ಸಣ್ಣ ಕನ್ನಡಿ ಇತ್ತು. ಆದರೆ ಗ್ರಾಹಕರು ಇವರ ಅಂಗಡಿಯ ಸೌಂದರ್ಯಕ್ಕೆ ತಲೆ ಕೆಡಿಸಿಕೊಳ್ಳದೆ, ಕೇಶ ವಿನ್ಯಾಸವನ್ನು ಮೆಚ್ಚಿದರು.

ಗದುಗಿನ ಗಣ್ಯ ವ್ಯಕ್ತಿಗಳು ಕ್ಷೀರಸಾಗರ ಅವರ ಗ್ರಾಹಕರಾದರು. ಬರುಬರುತ್ತಾ ಜನರು ಹೆಚ್ಚಾದರು. ಕೆಲವು ಉದಾರವಾದಿಗಳು ಸೆಲೂನನ್ನು ಮೇಲ್ದರ್ಜೆಗೆ ಏರಿಸಲು ಸಹಾಯ ಮಾಡಿದರು.

ಅಪ್ಪನ ಕಲೆಗಾರಿಕೆಗೆ ಬಗ್ಗೆ ಹೆಮ್ಮ ಪಡುವ ಅವರ ಮಕ್ಕಳು ಈಗ ಕ್ಷೀರಸಾಗರ ಅವರಿಗಾಗಿಯೇ ಮುಳಗುಂದ ನಾಕಾದ ಬಳಿ ಹೊಸದೊಂದು ಸೆಲೂನ್ ಪ್ರಾರಂಭಿಸುತ್ತಿದ್ದಾರೆ.

“ನಾವು ಕಲಿತಿರುವ ಕೆಲಸವನ್ನು ಸಮಾಜದ ಅಭಿವೃದ್ಧಿಗೆ ಬಳಕೆ ಮಾಡಬೇಕು” ಎನ್ನುವ ಕ್ಷೀರಸಾಗರ, ಸವಿತಾ ಸಮಾಜದ ಅನೇಕ ಯುವಕರಿಗೆ ಕೇಶವಿನ್ಯಾಸದ ಬಗ್ಗೆ ತರಬೇತಿಯನ್ನು ಕೊಟ್ಟಿದ್ದಾರೆ.
ತಾವು ದುಡಿದ ಹಣದಲ್ಲಿ ತಮ್ಮ ಸಮಾಜಕ್ಕೆ ಅನುಕೂಲವಾಗುವಂತಹ ಕೆಲಸವನ್ನು ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT