64 ಲಕ್ಷದ ಕ್ರಿಯಾಯೋಜನೆಗೆ ಅನುಮೋದನೆ

7

64 ಲಕ್ಷದ ಕ್ರಿಯಾಯೋಜನೆಗೆ ಅನುಮೋದನೆ

Published:
Updated:
64 ಲಕ್ಷದ ಕ್ರಿಯಾಯೋಜನೆಗೆ ಅನುಮೋದನೆ

ಸಿರುಗುಪ್ಪ: ಇಲ್ಲಿಯ ತಾಲ್ಲೂಕು ಪಂಚಾಯ್ತಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಂಡಿಸಿದ ಕ್ರಿಯಾಯೋಜನೆಗೆ ಚರ್ಚೆಯಿಲ್ಲದೇ ಅನುಮೋದನೆ ದೊರೆಯಿತು.2011-12 ನೇ ಸಾಲಿನ 13 ನೇ ಹಣಕಾಸು ಯೋಜನೆಯ ಕಂತನ್ನು ಮುಟ್ಟುಗೋಲು ಕಂತಿನ ಕ್ರಿಯಾಯೋಜನೆ ಮತ್ತು 2012-13 ನೇ ಸಾಲಿನ ಕಂತಿನ ಸಾಮಾನ್ಯ ಮೂಲ ಅನುದಾನದ ಕ್ರಿಯಾ ಯೋಜನೆಯನ್ನು ಕಾರ್ಯ ನಿರ್ವಹಣಾ ಧಿಕಾರಿ ಕೆ.ರಾಧಾಕೃಷ್ಣರೆಡ್ಡಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಕೋರಿದಾಗ ಸದಸ್ಯರು ಚರ್ಚೆ ಮಾಡದೇ ಮೌನಕ್ಕೆ ಶರಣಾಗಿದ್ದರು. ಅಧಿಕಾರಿಗಳು ಓದಿದರು, ಸದಸ್ಯರು ಆಲಿಸಿದರು, ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ನಿರ್ಣಯಿಸಬೇಕಾದ ಸದಸ್ಯರಿಂದ ಮಾತೇ ಹೊರಬರಲಿಲ್ಲ, ಮೌನವೇ ಅವರ ಉತ್ತರವಾಗಿತ್ತು.ಒಂದು ಕೋಟಿ ಮೊತ್ತದ ಅನುಮೋದಿತ ಕ್ರಿಯಾ ಯೋಜನೆಯಲ್ಲಿ  2011-12 ನೇ ಸಾಲಿನರೂ 29.56 ಲಕ್ಷ  ಮತ್ತು 2012-13 ನೇ ಸಾಲಿನರೂ 34.44 ಲಕ್ಷ ಅನುದಾನದ ಕ್ರಿಯಾ ಯೋಜನೆ ಅನುಮೋದನೆಗೆ ಸಭೆಯಲ್ಲಿ ಮಂಡಿಸಲಾಯಿತು.

ಅನುಮತಿ ಕೊಡಿ ಎಂದು  ಅಧಿಕಾರಿಗಳು ಕೇಳಲಿಲ್ಲ, ಒಪ್ಪಿಗೆ ಇದೇ ಎಂದು ಸದಸ್ಯರು ಅಭಿಮತ ವ್ಯಕ್ತಪಡಿಸಲಿಲ್ಲ, ಅಧಿಕಾರಿಗಳು ಅನುಮೋದನೆಯಾಗಿದೆ ಎಂದು ದಾಖಲೆ ಮಾಡಿಕೊಂಡರು.`ತಾಲ್ಲೂಕಿನ ಬಂಡ್ರಾಳ್ ಗ್ರಾಮದಲ್ಲಿ ವಿದ್ಯುತ್ ತಂತಿಗಳು ಜೋತುಬಿದ್ದಿವೆ, ಸರಿಪಡಿಸುವಂತೆ ಹೇಳುತ್ತಾ ಬಂದರೂ ಸಂಬಂಧಿಸಿದವರು ಇತ್ತ ಗಮನಹರಿಸಿಲ್ಲ' ಎಂದು ಸದಸ್ಯ ಮರೇಗೌಡ ಸಭೆಯಲ್ಲಿ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. `ಮುದ್ದಟನೂರು ಗ್ರಾಮದಲ್ಲಿ ಪೈಪ್‌ಲೈನ್ ತಾಂತ್ರಿಕ ದೋಷದಿಂದ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂದು ಪ್ರತಿ ಸಭೆಯಲ್ಲೂ ವಿಷಯ ಹೇಳುತ್ತೇನೆ. ಆದರೆ ಅಧಿಕಾರಿಗಳು ಗಮನಿಸುತ್ತಿಲ್ಲ' ಎಂದು ಮತ್ತೊಬ್ಬ ಸದಸ್ಯ ಅಂಜಿನಪ್ಪ ಸಭೆಯ ಗಮನಕ್ಕೆ ತಂದರು. ಅಧಿಕಾರಿಗಳ ಸಮಜಾಯಿಷಿ ಉತ್ತರಕ್ಕೆ, `ಹೆಂಗಾರ ನೀರಿನ ವ್ಯವಸ್ಥೆ ಮಾಡ್ರೀ' ಎಂದು ಕೇಳಿಕೊಂಡರು.

ಬತ್ತಿದ ಹಗರಿ ನದಿ: ತಾಲ್ಲೂಕಿನಲ್ಲಿ ಹರಿಯುವ ಹಗರಿ ನದಿಯಲ್ಲಿ ಜಲಸಂಪತ್ತು ಕ್ಷೀಣಿಸಿದೆ, ನದಿ ದಂಡೆಯ ಗ್ರಾಮಗಳ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.ಬೇಸಿಗೆಯ ಮೊದಲೇ ಈ ಸ್ಥಿತಿ ನಿರ್ಮಾಣವಾದರೆ, ಕಡು ಬೇಸಿಗೆಯ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಉತ್ತನೂರು ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಬಸವರಾಜ್ ಸಭೆಯಲ್ಲಿ ಗಮನ ಸೆಳೆದರು. ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಜಿ.ಎಂ.ಬಸಣ್ಣ ಸಭೆಯ ನಡವಳಿಕೆ ಓದಿದರು. ಅಧ್ಯಕ್ಷೆ ಅಂಬಮ್ಮ ಅಧ್ಯಕ್ಷತೆ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry