647 ಮಿ.ಮೀ. ಮಳೆ

7

647 ಮಿ.ಮೀ. ಮಳೆ

Published:
Updated:

ಬೀದರ್: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಮಳೆ ಜೂನ್ ಮೊದಲ ವಾರ ಬಹುತೇಕ 10ರ ವೇಳೆಗೆ ಪ್ರವೇಶಿಸಲಿದ್ದು, ಜೂನ್-ಸೆಪ್ಟೆಂಬರ್ ನಡುವೆ ಒಟ್ಟಾರೆ 647 ಮಿಲಿ ಮೀಟರ್ ಮಳೆಯನ್ನು ನಿರೀಕ್ಷಿಸಲಾಗಿದೆ.ನಗರದ ಹೊರವಲಯದಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ನಡೆದ ಬೀಜ ದಿನಾಚರಣೆ ಮತ್ತು ಸಮಗ್ರ ಕೃಷಿ ಪದ್ಧತಿ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮುಂಗಾರು ಮಳೆ, ಕೃಷಿ ಕುರಿತು ಪ್ರಾತ್ಯಕ್ಷಿಕೆ ನೀಡಿದ ಕೃಷಿ ಇಲಾಖೆಯ ಅಧಿಕಾರಿ ವಿಶ್ವನಾಥ ಬಿರಾದಾರ ಈ ಮಾಹಿತಿ ನೀಡಿದರು.ಕಳೆದ ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದರೆ ಜೂನ್-ಸೆಪ್ಟೆಂಬರ್ ಅಧಿಯಲ್ಲಿ ಹೆಚ್ಚಿನ ಮಳೆ ಸುರಿಯಲಿದೆ. ಅಂಡಮಾನ್‌ನಲ್ಲಿ ಏಪ್ರಿಲ್ 21ರಂದು ಮುಂಗಾರು ಆರಂಭವಾಗಿದ್ದು, ಈ ಮಾರುತ ಕೇರಳವನ್ನು ಜೂನ್ 1ರಂದು, ಕರ್ನಾಟಕವನ್ನು ಜೂನ್ 5ರ ವೇಳೆಗೆ ಪ್ರವೇಶಿಸಲಿದೆ ಎಂಬುದು ಅಧ್ಯಯನದಿಂದ ಗೊತ್ತಾಗಿದೆ ಎಂದರು.ಹವಾಮಾನ ಇಲಾಖೆಯ ವಿಶ್ಲೇಷಣೆಯನ್ನು ಆಧರಿಸಿ ಪ್ರಸಕ್ತ ವರ್ಷ ಈ ಅವಧಿಯಲ್ಲಿ ಬೀದರ್ ತಾಲ್ಲೂಕಿನಲ್ಲಿ 712.4 ಮಿ.ಮೀ, ಭಾಲ್ಕಿ ತಾಲ್ಲೂಕು 684.5 ಮಿ.ಮೀ., ಔರಾದ್ 682 ಮಿ.ಮೀ., ಹುಮನಾಬಾದ್ 607.5 ಮಿ.ಮೀ ಮತ್ತು ಬಸವಕಲ್ಯಾಣದಲ್ಲಿ 583 ಮಿ.ಮೀ. ಮಳೆ ಸುರಿಯುವ ನಿರೀಕ್ಷೆ ಇದೆ ಎಂದರು.ವಾರ್ಷಿಕವಾಗಿ ಜಿಲ್ಲೆಯಲ್ಲಿ ಸುರಿಯುವ ಮಳೆಯ ಪೈಕಿ ಶೇ 71ರಷ್ಟು ಮಳೆ ಈ ಅವಧಿಯಲ್ಲಿಯೇ ಬೀಳಲಿದ್ದು, ಕೃಷಿ ಚಟುವಟಿಕೆಗೆ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.ಭೂ ಚೇತನ: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಒಟ್ಟಾರೆ 3.44 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭೂಮಿಯ ಸತ್ವವನ್ನು ಹೆಚ್ಚಿಸುವ ಉದ್ದೇಶದ ಭೂ ಚೇತನ ಕಾರ್ಯಕ್ರಮ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಆರ್.ಲಕ್ಷ್ಮಿಕಾಂತ್ ಅವರು ತಿಳಿಸಿದರು.ರಾಸಾಯನಿಕ ಗೊಬ್ಬರಗಳ ಬಳಕೆಯಿಂದ  ಭೂಮಿಯಲ್ಲಿನ ಸತ್ವ ಕಡಿಮೆ ಆಗುತ್ತದೆ. ಲಘು ಪೋಷಕಾಂಶಗಳನ್ನು ಹಾಕುವ ಮೂಲಕ ಭೂಮಿಯ ಸತ್ವವನ್ನು ಹೆಚ್ಚಿಸುವುದು ಇದರ ಉದ್ದೇಶ ಎಂದರು.ತಿಪ್ಪೆ ಗೊಬ್ಬರ ಬಳಸಲು ಸಲಹೆ: ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಬಿ.ಜೆ.ಪೂಜಾರಿ ಅವರು, ಯಾವುದೇ ಕೃಷಿ ಬೆಳೆಗೆ ಒಟ್ಟು 16 ಸತ್ವಗಳ ಅವಶ್ಯಕತೆ ಇದೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಕೇವಲ ಎರಡು ಸತ್ವ ಸಿಗಲಿದೆ, ಇತರೆ 14 ಸತ್ವಗಳನ್ನು ಭೂಮಿಯಿಂದಲೇ ಫಸಲು ಪಡೆಯಬೇಕು. ಇದರಿಂದ ಬೆಳೆಯಿಂದ ಬೆಳೆಗೆ ಭೂಮಿಯ ಸತ್ವ ಕಡಿಮೆ ಆಗುತ್ತಾ ಹೋಗುತ್ತದೆ ಎಂದರು.ಉಪಕಸುಬು: ಈ ಹಿನ್ನೆಲೆಯಲ್ಲಿ ಕೃಷಿಕರು ಬೇಸಾಯ ಚಟುವಟಿಕೆಯಲ್ಲಿ ತಿಪ್ಪೆ ಗೊಬ್ಬರ ಬಳಸಲು ಒತ್ತು ನೀಡಬೇಕು. ಅಲ್ಲದೆ, ಕೃಷಿಯ ಜೊತೆಗೆ ಉಪ ಕಸುಬುಗಳನ್ನು ಮಾಡುವ ಮೂಲಕ ವರ್ಷದ ಎಲ್ಲ ದಿನಗಳು ಕಾರ್ಯ ನಿರತ ಆಗಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.ಕಾರ್ಯಕ್ರಮ ಸಂಯೋಜಕ ಡಾ. ರವಿ ದೇಶಮುಖ, ಬೀಜ ತಳಿ ಅಭಿವೃದ್ಧಿ ಅಧಿಕಾರಿ ಬಿರಾದಾರ, ಪ್ರಾಧ್ಯಾಪಕ ಪ್ರೊ. ಸಿ.ಆರ್. ಕೊಂಡಾ ಹಾಗೂ ಆಸುಪಾಸಿನಿಂದ ಆಗಮಿಸಿದ್ದ ನೂರಾರು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry