68ರ ಪ್ರಾಯದ ವ್ಯಕ್ತಿ ಅಪಹರಣ: ಘಟನೆ ಸುಖಾಂತ್ಯ

7

68ರ ಪ್ರಾಯದ ವ್ಯಕ್ತಿ ಅಪಹರಣ: ಘಟನೆ ಸುಖಾಂತ್ಯ

Published:
Updated:

ಆನೇಕಲ್: ಮೂವತ್ತು ಲಕ್ಷ ರೂಪಾಯಿ ಒತ್ತೆ ಹಣಕ್ಕೆ ಬೇಡಿಕೆ ಇಟ್ಟು 68 ವರ್ಷದ ವ್ಯಕ್ತಿಯನ್ನು ಅಪಹರಿಸಿದ್ದ ಪ್ರಕರಣವನ್ನು ಪೊಲೀಸರು ಕೇವಲ ಆರು ಗಂಟೆಗಳ ಅವಧಿಯಲ್ಲಿ ಬೇಧಿಸಿದ ಘಟನೆ ಮಂಗಳವಾರ ನಡೆದಿದೆ.ಘಟನೆ ವಿವರ: ಆನೇಕಲ್ ತಾಲ್ಲೂಕಿನ ಬ್ಯಾಗಡದೇನಹಳ್ಳಿಯ ಅಪಾರ್ಟ್‌ಮೆಂಟ್ ನಿವಾಸಿ ಎಂ.ಕೆ.ರಘು ನಿವೃತ್ತ ಎಲೆಕ್ಟ್ರಿಕ್ ಕಂಟ್ರ್ಯಾಕ್ಟರ್. ಮೂಲತಃ ಮಡಿಕೇರಿಯವರಾದ ಇವರಿಗೆ ಇಬ್ಬರು ಗಂಡು ಮಕ್ಕಳು. ಒಬ್ಬ ಮಗ ಅಮೆರಿಕದಲ್ಲಿ ಹಾಗೂ ಮತ್ತೊಬ್ಬ ಮಗ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿದ್ದಾರೆ. ರಘು ಮಂಗಳವಾರ ಸಂಜೆ 4.30ರ ಸುಮಾರಿಗೆ ತರಕಾರಿ ತರಲು ಸಮೀಪದ ಮರಸೂರಿಗೆ ಹೋಗಿದ್ದರು. ಆದರೆ ಬಹುಹೊತ್ತಿನವರೆಗೂ ಮನೆಗೆ ವಾಪಸು ಬರಲಿಲ್ಲ. ಇದೇ ವೇಳೆ ರಘು ಅವರ ಪುತ್ರ ಸುಬ್ಬಯ್ಯ ಅವರ ಮೊಬೈಲ್ ಫೋನ್‌ಗೆ ಅನಾಮಧೇಯ ಕರೆಯೊಂದು ಬಂದಿದೆ. `30 ಲಕ್ಷ ರೂಪಾಯಿ ತಂದೊಪ್ಪಿಸಿದರೆ ಅವರನ್ನು ಬಿಡುಗಡೆ ಮಾಡುತ್ತೇವೆ' ಎಂದು ಕರೆ ಮಾಡಿದವರು ಹೇಳಿದ್ದಾರೆ.`ಈ ಸಮಯದಲ್ಲಿ ನನ್ನ ಬಳಿ ಸದ್ಯ ಒಂದು ಲಕ್ಷ ರೂಪಾಯಿ ಮಾತ್ರವೇ ಇದೆ. ಅಷ್ಟನ್ನು ತೆಗೆದುಕೊಂಡು ತಂದೆ ಅವರನ್ನು ಬಿಡುವಂತೆ' ಸುಬ್ಬಯ್ಯ ಕೇಳಿಕೊಂಡಿದ್ದಾರೆ. ಆದರೆ ಅಪಹರಣಕಾರ ಇದಕ್ಕೆ ಒಪ್ಪಲಿಲ್ಲ.ಕೆಲಹೊತ್ತಿನ ನಂತರ ರಘು ಮತ್ತು ಅನಾಮಧೇಯ ಕರೆ ಮಾಡಿದ್ದ ಇಬ್ಬರ ಫೋನ್ ನಂಬರ್‌ಗಳೂ ಸ್ವಿಚ್ ಆಫ್ ಆಗಿವೆ.

ಕೂಡಲೇ ಸುಬ್ಬಯ್ಯ ಆನೇಕಲ್ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದರು. ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು, ತಾಲ್ಲೂಕಿನ ಎ್ಲ್ಲಲೆಡೆ ನಾಕಾಬಂದಿ ಹೇರುವ ಮೂಲಕ ಒಳ ಹೋಗುವ ಮತ್ತು ಹೊರಬರುವ ವಾಹನಗಳ ತಪಾಸಣೆಯನ್ನು ಆರಂಭಿಸಿದರು.ಈ ಮಧ್ಯೆ, ಸುಬ್ಬಯ್ಯ ಅವರ ಮೊಬೈಲ್‌ಗೆ ಬಂದಿದ್ದ ಕರೆಯ  ಜಾಡು ಹಿಡಿದು ಅಪಹರಣಕಾರನಿದ್ದ ಪ್ರದೇಶವನ್ನು ಪತ್ತೆ ಹಚ್ಚಲಾಯಿತು.

ಈ ವೇಳೆಗೆ ಪೊಲೀಸರ ಬಿಗಿ ಕಾರ್ಯಾಚರಣೆಯಿಂದ ಧೃತಿಗೆಟ್ಟ ಅಪಹರಣಕಾರ, ಅತ್ತಿಬೆಲೆ ಸಮೀಪದ ದಾಸನಪುರ ಗೇಟ್ ಬಳಿ ರಘು ಅವರನ್ನು ಬಿಟ್ಟು ಪರಾರಿಯಾಗಿದ್ದಾನೆ.ಎಲ್ಲಪ್ಪ ಎನ್ನಲಾದ ವ್ಯಕ್ತಿ, ರಘು ಅವರನ್ನು ಬೈಕ್‌ನಲ್ಲಿ ಅಪಹರಿಸಿಕೊಂಡು ಅತ್ತಿಬೆಲೆ, ದಾಸನಪುರ, ಬಳ್ಳೂರು ಪ್ರದೇಶಗಳಲ್ಲಿ ಅಲೆದಾಡಿಸಿದ್ದಾನೆ. ಆಗಾಗ್ಗೆ ಎಲ್ಲಪ್ಪ, ಸುಬ್ಬಯ್ಯ ಅವರಿಗೆ ಫೋನ್ ಮಾಡುತ್ತಲೇ ಇದ್ದ. ಕೊನೆಗೆ ದಾಸನಪುರ ಗೇಟ್ ಬಳಿ ರಘು ಅವರನ್ನು ತನ್ನ ಬಳಿ  ಇದ್ದ ಹಳ್ಳಿಯ ದನ ಕಾಯುವ ವ್ಯಕ್ತಿಯೊಬ್ಬರ ಜೊತೆ ಇವರನ್ನು ಬಿಟ್ಟು ಹೋಗಿದ್ದಾನೆ. ರಾತ್ರಿ 11.40 ಗಂಟೆಗೆ ರಘು ಅವರನ್ನು ಆನೇಕಲ್ ಟೌನ್ ಪೊಲೀಸ್ ಠಾಣೆಗೆ ಕರೆತರಲಾಯಿತು.ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪ್ರಕಾಶ್, ಡಿವೈಎಸ್‌ಪಿ ಕುಮಾರಸ್ವಾಮಿ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಜಿಗಣಿಯ ಪ್ರೇಮ ಸಾಯಿ ಗುಂಡಪ್ಪ ರೈ, ಆನೇಕಲ್‌ನ ಕಿಶೋರ್ ಕುಮಾರ್, ಅತ್ತಿಬೆಲೆಯ ವೆಂಕಟ ಶೆಟ್ಟಿ ಮತ್ತು ಆನೇಕಲ್‌ನ ಸಬ್‌ಇನ್‌ಸ್ಪೆಕ್ಟರ್ ರಾಘವೇಂದ್ರ ಬೈಂದೂರು, ಸರ್ಜಾಪುರದ ಸಬ್ ಇನ್‌ಸ್ಪೆಕ್ಟರ್ ಪ್ರಕಾಶ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry