ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6ನೇ ವೇತನ ಸೌಲಭ್ಯ: ಪ್ರತಿಭಟನೆ

Last Updated 10 ಫೆಬ್ರುವರಿ 2011, 9:50 IST
ಅಕ್ಷರ ಗಾತ್ರ

ಔರಾದ್: ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ 6ನೇ ವೇತನ ಆಯೋಗದ ಸೌಲಭ್ಯ ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ನೌಕರ ಬಾಂಧವರು ಮಧ್ಯಾಹ್ನ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಳಿ ಜಮಾಯಿಸಿ ಅಲ್ಲಿಂದ ಮೆರವಣಿಗೆ ಮೂಲಕ ಮಿನಿ ವಿಧಾನಸೌಧಕ್ಕೆ ತಲುಪಿ ಅಲ್ಲಿ ಸಮಾವೇಶಗೊಂಡರು. ಸಂಘದ ಪ್ರಧಾನ ಕಾರ್ಯದರ್ಶಿ ಗುರುನಾಥ ತವಾಡೆ, ಪ್ರೌಢ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸಿಂಗೆ, ಸಂಘದ ರಾಜ್ಯ ಪ್ರತಿನಿಧಿ ಚಂದ್ರಕಾಂತ ನಿರ್ಮಳೆ ಮಾತನಾಡಿ, ಬಹು ವರ್ಷಗಳ ವೇತನ ತಾರತಮ್ಯ ನಿವಾರಿಸುವಂತೆ ಆಗ್ರಹಿಸಿದರು.

ನೆರೆಯ ಆಂಧ್ರ ಮತ್ತು ಮಹಾರಾಷ್ಟ್ರದ ನೌಕರರಿಗೆ ಇರುವ ಸಮಾನವಾದ ವೇತನ ನಮಗೆ ಸಿಗುತ್ತಿಲ್ಲ. ಅಲ್ಲಿಯ ಒಬ್ಬ ಪ್ರಾಥಮಿಕ ಶಾಲೆ ಶಿಕ್ಷಕ ಪಡೆಯುತ್ತಿರುವ ವೇತನ ಸೌಲಭ್ಯ ನಮ್ಮಲ್ಲಿಯ ಪ್ರೌಢ ಶಾಲಾ ಶಿಕ್ಷಕರಿಗೂ ಸಿಗುತ್ತಿಲ್ಲ. ಈ ರೀತಿಯ ತಾರತಮ್ಯ ಎಲ್ಲ ಇಲಾಖೆ ಮತ್ತು ಎಲ್ಲ ವರ್ಗದ ನೌಕರರಿಗೂ ಆಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಹೆಚ್ಚುತ್ತಿರುವ ಬೆಲೆ ಏರಿಕೆಯಿಂದ ಈಗಿನ ವೇತನದಲ್ಲಿ ದುಡಿಯಲು ನೌಕರರಿಗೆ ತುಂಬ ಕಷ್ಟವಾಗುತ್ತಿದೆ. ಬರುವ ಬಜೆಟ್‌ನಲ್ಲಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರ ಸಂಘದ ತಾಲ್ಲೂಕು ಅಧ್ಯಕ್ಷ ಪ್ರೇಮಶೇಖರ ನಾಗಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾಜಿರಾವ ಆಗ್ರಹಿಸಿದರು.

ಸರ್ಕಾರ ನೌಕರರ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಹೋರಾಟ ಎದುರಿಸಬೇಕಾಗುತ್ತದೆ ಎಂಬ ಬೇಡಿಕೆವುಳ್ಳ ಮನವಿ ಪತ್ರವನ್ನು ತಹಸೀಲ್ದಾರ್ ಶಿವಕುಮಾರ ಶೀಲವಂತ ಅವರಿಗೆ ನೀಡಿದರು. ಸಹಾಯಕ ಆಯುಕ್ತೆ ಖುಷ್ಬು ಗೋಯಲ್ ಇದ್ದರು. ಕಂದಾಯ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಕರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT