ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6ರಂದು ಬಿಜೆಪಿ ಉಪವಾಸ

Last Updated 5 ಅಕ್ಟೋಬರ್ 2012, 4:35 IST
ಅಕ್ಷರ ಗಾತ್ರ

ತುಮಕೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಪ್ರಧಾನ ಮಂತ್ರಿ ಏಕಮುಖ ತೀರ್ಮಾನ ಕೈಗೊಳ್ಳುವ ಮೂಲಕ ರಾಜ್ಯವನ್ನು ಸಮಸ್ಯೆಯ ಸುಳಿಗೆ ಸಿಕ್ಕಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಶಿವಣ್ಣ ಇಲ್ಲಿ ಗುರುವಾರ ಆಪಾದಿಸಿದರು.

ಕಾವೇರಿ ನದಿ ಪ್ರಾಧಿಕಾರದ ತೀರ್ಪಿನಿಂದ ರಾಜ್ಯ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಈಗಾಗಲೇ ಬರಗಾಲ ಇರುವುದರಿಂದ ಮುಂದಿನ ಡಿಸೆಂಬರ್ ನಂತರ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ. ಈ ಬಗ್ಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ನೀಡಿರುವ ಆದೇಶವನ್ನು ಪುನರ್ ಪರಿಶೀಲಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ರಾಜ್ಯದ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್ ಅವರು ಪ್ರಧಾನಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಆದರೂ ರಾಜ್ಯಕ್ಕೆ ನ್ಯಾಯ ದೊರೆತಿಲ್ಲ. ಪ್ರಾಧಿಕಾರ ಮತ್ತು ನ್ಯಾಯಾಲಯದ ಆದೇಶವನ್ನು ಪಾಲಿಸಲೇಬೇಕಾದ ಅನಿವಾರ್ಯತೆ ಇರುವುದರಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗಿದೆ. ಆದರೆ ಅ. 6ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸುತ್ತಿರುವುದಾಗಿ ಅವರು ತಿಳಿಸಿದರು.

ತಮಿಳುನಾಡಿಗೆ ನೀರು ಬಿಡುತ್ತಿರುವುದರಿಂದ ಮುಂದೆ ಜಿಲ್ಲೆಗೂ ಸಮಸ್ಯೆ ಆಗಲಿದೆ. ಆದರೆ ಸದ್ಯಕ್ಕೆ ಬುಗಡನಹಳ್ಳಿ ಕೆರೆಗೆ ನಮ್ಮ ಪಾಲಿನ ನೀರು ಬರುತ್ತಿದೆ. ಈಗ 50 ಎಂಎಲ್‌ಡಿ ನೀರು ಬಿಡಲಾಗುತ್ತಿದೆ. ಸದ್ಯಕ್ಕೆ ನಗರಕ್ಕೆ ನೀರಿನ ಸಮಸ್ಯೆ ಇಲ್ಲ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ರಸಾದ್ ಮಾತನಾಡಿ, ರಾಜ್ಯ ಬಂದ್‌ಗೆ ಬೆಂಬಲ ಸೂಚಿಸಿ 6ರಂದು ಟೌನ್‌ಹಾಲ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ಮಾಡಲಿದ್ದಾರೆ. ಎಲ್ಲ ತಾಲ್ಲೂಕು ಕಚೇರಿಗಳ ಮುಂದೆ ಆಯಾ ತಾಲ್ಲೂಕು ಘಟಕಗಳು ಪ್ರತಿಭಟನೆ ನಡೆಸಲಿವೆ ಎಂದು ಹೇಳಿದರು.

ಈಗ ಒಬ್ಬರ ಮೇಲೆ ಒಬ್ಬರು ದೂರು ಹೇಳುವ ಬದಲಿಗೆ ರಾಜ್ಯದ ಎಲ್ಲ ಪಕ್ಷಗಳ ನಾಯಕರು ಒಗ್ಗಟ್ಟು ಪ್ರದರ್ಶಿಸಬೇಕು. ಹೀಗಾಗಿ ಬಿಜೆಪಿ ಸಹ ಬಂದ್‌ಗೆ ಬೆಂಬಲ ಸೂಚಿಸಿದೆ. ಹೇಮಾವತಿ ಜಲಾಶಯದ ನೀರಿನ ಮಟ್ಟ ಕಡಿಮೆಯಾದರೆ ಜಿಲ್ಲೆಗೆ ಸಮಸ್ಯೆ ಆಗುವುದರಿಂದ ಜಿಲ್ಲೆಯಲ್ಲೂ ಹೋರಾಟ ತೀವ್ರಗೊಳಿಸಬೇಕಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಧರಮೂರ್ತಿ, ಎಪಿಎಂಸಿ ಅಧ್ಯಕ್ಷ ಓಂನಮೋ ನಾರಾಯಣ, ಮುಖಂಡರಾದ ರುದ್ರೇಶ್, ಲಕ್ಷ್ಮೀಶ್ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT