7ಒಪ್ಪಂದಕ್ಕೆ ಭಾರತ-ಕಜಕಿಸ್ತಾನ ಸಹಿ

7

7ಒಪ್ಪಂದಕ್ಕೆ ಭಾರತ-ಕಜಕಿಸ್ತಾನ ಸಹಿ

Published:
Updated:
7ಒಪ್ಪಂದಕ್ಕೆ ಭಾರತ-ಕಜಕಿಸ್ತಾನ ಸಹಿ

ಅಸ್ತಾನಾ (ಪಿಟಿಐ): ಭಾರತ ಮತ್ತು ಕಜಕಿಸ್ತಾನ ಶನಿವಾರ ಇಲ್ಲಿ ನಾಗರಿಕ ಪರಮಾಣು, ತೈಲ ಹಾಗೂ ಇತರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಏಳು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದವು. ಈ ಮೂಲಕ ಎರಡೂ ದೇಶಗಳು ತಮ್ಮ ತಂತ್ರಕೌಶಲ್ಯಗಳ ಪಾಲುದಾರಿಕೆ ಯನ್ನು ಬಲಪಡಿ ಸಲು ಮಹತ್ವಾಕಾಂಕ್ಷೆಯ ನೀಲ ನಕ್ಷೆಯನ್ನು ಪ್ರಾರಂಭಿಸಿವೆ.  ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಜಕಿಸ್ತಾನ ಅಧ್ಯಕ್ಷ ನರ್ಸುಲ್ತಾನ್ ನಜರ್‌ಬಯೆವ್ ಅವರ ನಡುವೆ ನಡೆದ ವಿಸ್ತೃತ ವಲಯದ ಮಾತು ಕತೆಯಲ್ಲಿ ದ್ವಿಪಕ್ಷೀಯ ಬಾಂಧವ್ಯ ಬಲಪಡಿಸುವ ಕುರಿತು ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು.

 

ಪ್ರಸ್ತುತ 30 ಕೋಟಿ ಡಾಲರ್‌ಗಳಷ್ಟಿರುವ ದ್ವಿಪಕ್ಷೀಯ ವ್ಯಾಪಾರ ವಹಿವಾಟನ್ನು ಇನ್ನಷ್ಟು ಹೆಚ್ಚಿಸುವತ್ತ ಪರಸ್ಪರ ಕಾರ್ಯನಿರ್ವಹಿಸಲು ಇಬ್ಬರೂ ನಾಯಕರು ನಿರ್ಧರಿಸಿದರು. ಇದಕ್ಕಾಗಿ ಸರ್ಕಾರಿ ಮತ್ತು ವಾಣಿಜ್ಯೋದ್ಯಮ ರಂಗದ ಸಮುದಾಯಗಳನ್ನು ತೊಡಗಿಸಿಕೊಳ್ಳುವುದು ಹಾಗೂ ಫಾರ್ಮಾ, ಕೃಷಿ, ಮಾಹಿತಿ ತಂತ್ರಜ್ಞಾನ ಮತ್ತಿತರ ತೈಲಯೇತರ ವಲಯಗಳಲ್ಲೂ ವ್ಯಾಪಾರವನ್ನು ವೈವಿಧ್ಯಗೊಳಿಸಲು ಅವರು ತೀರ್ಮಾನಿಸಿದರು.

 

ಉಭಯತ್ರರು ದ್ವಿಪಕ್ಷೀಯ ವಿಷಯಗಳಲ್ಲದೆ, ಲಿಬಿಯಾ ಮತ್ತಿತರ ಉತ್ತರ ಆಫ್ರಿಕಾ ರಾಷ್ಟ್ರಗಳಲ್ಲಿನ ಬೆಳವಣಿಗೆಗಳು ಹಾಗೂ ಆಫ್ಘಾನಿಸ್ತಾನ ಸಮಸ್ಯೆ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಬಿಕ್ಕಟ್ಟುಗಳ ಬಗ್ಗೆಯೂ ಸಮಾಲೋಚಿಸಿದರು. ನಾಯಕರ ಮಟ್ಟವಲ್ಲದೆ, ನಿಯೋಗ ಮಟ್ಟದ ಮಾತುಕತೆ ಯಲ್ಲೂ ಅವರು ಪಾಲ್ಗೊಂಡಿದ್ದರು.

 

ಯುರೇನಿಯಂ ಭರವಸೆ: ಮಾತುಕತೆಯ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಜಕಿಸ್ತಾನ ಅಧ್ಯಕ್ಷರು, ತಮ್ಮ ದೇಶವು ಭಾರತಕ್ಕೆ 2100 ಟನ್‌ಗಳಷ್ಟು ಯುರೇನಿಯಂ ಉತ್ಪನ್ನವನ್ನು ಪೂರೈಕೆ ಮಾಡಲಿದ್ದು, ಇನ್ನೂ ಹೆಚ್ಚು ಸರಬರಾಜಿಗೆ ಸಿದ್ಧವಿರುವುದಾಗಿ ಪ್ರಕಟಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಸಿಂಗ್, ‘ಎರಡೂ ದೇಶಗಳ ನಡುವೆ ಪರಸ್ಪರ        ಸಹಕಾರಕ್ಕೆ ಎಲ್ಲ ವಲಯಗಳಲ್ಲೂ ವಿಪುಲ ಅವಕಾಶಗಳಿವೆ’ ಎಂದು ತಿಳಿಸಿದರು. ಇದಲ್ಲದೆ, ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಸಿಂಗ್, ಉಭಯತ್ರರ ಭೇಟಿಯಿಂದ ತಂತ್ರಕೌಶಲ್ಯಗಳ ಪಾಲುದಾರಿಕೆಯಲ್ಲಿ ಉತ್ತಮ ಮತ್ತು ಅಗಾಧವಾದ ಫಲಿತಾಂಶ ಹೊರಹೊಮ್ಮುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

ಭಾರತ ಮತ್ತು ಕಜಕಿಸ್ತಾನ ಈಗಾಗಲೇ ನಾಗರಿಕ ಪರಮಾಣು ಸಹಕಾರ ಹೊಂದಿವೆ. 2009ರಲ್ಲಿ ನಜರ್‌ಬಯೆವ್ ಭಾರತಕ್ಕೆ ಭೇಟಿ ನೀಡಿದ್ದಾಗ, ಭಾರತೀಯ ಪರಮಾಣು ವಿದ್ಯುತ್  ನಿಗಮ  (ಎನ್‌ಪಿಸಿಐಎಲ್) ಮತ್ತು ಕಜಕಿಸ್ತಾನ ಪರಮಾಣು ಸಂಸ್ಥೆ (ಕಜ್ ಆಟಂ ಪ್ರಾಮ್) ಒಪ್ಪಂದಕ್ಕೆ ಸಹಿ ಹಾಕಿದ ಮೇರೆಗೆ ಭಾರತದ ರಿಯಾಕ್ಟರ್‌ಗಳಿಗೆ ಕಜಕಿಸ್ತಾನದಿಂದ ಯುರೇನಿಯಂ ಪೂರೈಕೆಯಾಗುತ್ತಿರುವುದನ್ನು ಸ್ಮರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry