7ನೇ ಮದುವೆಗೆ ಒತ್ತಾಯಿಸಿದ್ದ ತಂದೆಯ ಕೊಲೆ

7

7ನೇ ಮದುವೆಗೆ ಒತ್ತಾಯಿಸಿದ್ದ ತಂದೆಯ ಕೊಲೆ

Published:
Updated:

ಬೆಂಗಳೂರು: ಏಳನೇ ಮದುವೆಯಾಗುವಂತೆ ಒತ್ತಾಯಿ ಸಿದ ಕಾರಣಕ್ಕೆ ತಂದೆಯನ್ನು ಕೊಲೆ ಮಾಡಿದ್ದ ಮಹಿಳೆಯನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.ಆಶಾರಾಣಿ ಉರುಫ್ ಮಮತಾ (26) ಬಂಧಿತ ಆರೋಪಿ. ಸಂಬಂಧಿಕರ ನೆರವಿನಿಂದ ತಂದೆ ಬಾಲರಾಜ್ (52) ಎಂಬವರನ್ನು ಅ.5ರಂದು ಕೊಲೆ ಮಾಡಿದ್ದ ಆಕೆ, ಶವವನ್ನು ಚಂದಾಪುರ ಬಳಿಯ ಇಗ್ಗಲೂರು ಕೆರೆಗೆ ಎಸೆದಿದ್ದಳು ಎಂದು ಪೊಲೀಸರು ಹೇಳಿದ್ದಾರೆ.ತಮಿಳುನಾಡು ಮೂಲದ ಬಾಲರಾಜ್ ಹಲವು ವರ್ಷಗಳಿಂದ ಅತ್ತಿಬೆಲೆಯಲ್ಲಿ ವಾಸವಾಗಿದ್ದರು. ಮದ್ಯವ್ಯಸನಿಯಾಗಿದ್ದ ಅವರು, ಮೂರು ಮದುವೆಯಾಗಿದ್ದರು. ಆಶಾರಾಣಿ ಮೊದಲ ಪತ್ನಿಯ ಎರಡನೆ ಮಗಳು. ಹಣದಾಸೆಗಾಗಿ ಮಗಳಿಗೆ ಮದುವೆ ಮಾಡಿದ್ದ ಬಾಲರಾಜ್, ಅಳಿಯನೊಂದಿಗೆ ಜಗಳವಾಡಿ ಹಣ ಕಿತ್ತುಕೊಂಡು ಮಗಳನ್ನು ಪತಿಯಿಂದ ದೂರ ಮಾಡಿದ್ದರು. ನಂತರ ಆಕೆಗೆ ಮತ್ತೊಂದು ವಿವಾಹ ಮಾಡಿ ಆ ಅಳಿಯನೊಂದಿಗೂ ಜಗಳವಾಡಿ ಮಗಳನ್ನು ಮನೆಗೆ ಕರೆದುಕೊಂಡು ಬಂದಿದ್ದರು.ಇದನ್ನೇ ವೃತ್ತಿಯಾಗಿಸಿಕೊಂಡಿದ್ದ ಅವರು, ಮಗಳಿಗೆ ಆರು ಮದುವೆ ಮಾಡಿದ್ದರು. ತಂದೆಯ ವರ್ತನೆಯಿಂದ ಮನನೊಂದಿದ್ದ ಆಶಾರಾಣಿ, ಆರನೇ ಪತಿಯ ಬಳಿ ಈ ಬಗ್ಗೆ ಅಳಲು ತೋಡಿಕೊಂಡಿದ್ದಳು. ಅಲ್ಲದೇ, ಯಾವುದೇ ಕಾರಣಕ್ಕೂ ತಂದೆಯ ಮಾತಿನಂತೆ ನಡೆದುಕೊಳ್ಳುವುದಿಲ್ಲ ಎಂದು ಪತಿಗೆ ಭರವಸೆಯನ್ನೂ ಕೊಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.ಈ ನಡುವೆ ಬಾಲರಾಜ್ ಏಳನೇ ಮದುವೆಯಾಗುವಂತೆ ಒತ್ತಾಯಿಸಿದ್ದರು. ಇದರಿಂದ ಕೋಪಗೊಂಡಿದ್ದ ಆಕೆ, ತಂದೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು. ಆಕೆ, ಸಂಬಂಧಿಕ ಶಶಿ (ಆಶಾರಾಣಿಯ ನಾಲ್ಕನೇ ಪತಿಯ ತಮ್ಮ) ಮತ್ತು ಮುರಳಿ (ಬಾಲರಾಜ್‌ರ ಮೂರನೇ ಪತ್ನಿಯ ಮಗ) ಎಂಬುವರ ಸಹಾಯದಿಂದ ಮದ್ಯಕ್ಕೆ ವಿಷ ಬೆರೆಸಿ ಅದನ್ನು ಅ.5ರಂದು ರಾತ್ರಿ ತಂದೆಗೆ ಕುಡಿಸಿದ್ದಳು. ಬಾಲರಾಜ್ ಸ್ವಲ್ಪ ಸಮಯದಲ್ಲೇ ಅಸ್ವಸ್ಥರಾಗಿ ಸಾವನ್ನಪ್ಪಿದ್ದರು. ಬಳಿಕ ಆ ಮೂರು ಮಂದಿ ಶವವನ್ನು ಇಗ್ಗಲೂರು ಕೆರೆಗೆ ಎಸೆದು ಬಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಕೆರೆಯಲ್ಲಿ ಅ.6ರಂದು ಶವ ಪತ್ತೆಯಾಯಿತು. ಮರಣೋತ್ತರ ಪರೀಕ್ಷೆ ನಡೆಸಿದಾಗ ವಿಷ ಸೇವನೆಯಿಂದ ಆತ ಸಾವನ್ನಪ್ಪಿರುವುದು ಗೊತ್ತಾಯಿತು. ಈ ಹಿನ್ನೆಲೆಯಲ್ಲಿ ಆಶಾರಾಣಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂತು. ಶಶಿ ಮತ್ತು ಮುರಳಿ ತಲೆಮರೆಸಿಕೊಂಡಿದ್ದು ಪತ್ತೆಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry