ಸೋಮವಾರ, ನವೆಂಬರ್ 18, 2019
23 °C

7ರಂದು ಅಂತರರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಮೇಳ

Published:
Updated:

ಬೆಂಗಳೂರು: ದೇಶ ವಿದೇಶಗಳ ಕಲಾವಿದರನ್ನು ಒಂದೇ ವೇದಿಕೆಗೆ ಕರೆಸಿ ವಿಭಿನ್ನ ರೀತಿಯ ಕಲಾ ಪ್ರದರ್ಶನ ನೀಡುವ ಉದ್ದೇಶದಿಂದ `ಜೀವ ಫೌಂಡೇಷನ್' ಪ್ರಥಮ ಬಾರಿಗೆ `ಅಂತರ ರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಮೇಳ'ವನ್ನು ಆಯೋಜಿಸಿದೆ.ಇದೇ 7ಕ್ಕೆ ನಗರದ ಯವನಿಕಾ ಸಭಾಂಗಣದಲ್ಲಿ ಸಂಜೆ 5ರಿಂದ 8-30ರ ವರೆಗೆ ನಡೆಯಲಿದೆ ಎಂದು ಫೌಂಡೇಷನ್‌ನ ಸಂಸ್ಥಾಪಕ ಅಧ್ಯಕ್ಷ ವಿ. ರಾಕೇಶ್ ತಿಳಿಸಿದರು.  ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೇಳದಲ್ಲಿ ಶ್ರೀಲಂಕಾದ 3 ತಂಡಗಳು, ನೇಪಾಳ ಮತ್ತು ಆಫ್ರಿಕಾದ ತಲಾ ಒಂದು ತಂಡ  ಹಾಗೂ ರಾಜ್ಯದ 15 ತಂಡಗಳು  ಭಾಗವಹಿಸಲಿವೆ ಎಂದು ತಿಳಿಸಿದರು.`ನೇಪಾಳದಿಂದ ಬರುವ ಕಲಾವಿರು ಅಲ್ಲಿಯ `ಸ್ಟಿಕ್ ಜಾಗ್‌ಲಿಂಗ್' ಪ್ರಕಾರದ ನೃತ್ಯವನ್ನು, ಆಫ್ರಿಕಾ ತಂಡದವರು `ಆಫ್ರಿಕನ್ ಡ್ರಮ್ಸ' ಹಾಗೂ ಶ್ರೀಲಂಕಾದ ಕಲಾವಿದರು `ಕ್ಯಾಂಡಿಯನ್ ಡಾನ್ಸ್' ಪ್ರದರ್ಶನ ನೀಡಲಿದ್ದಾರೆ. ಹಾಗೆ ರಾಜ್ಯದ ಕಲಾವಿದರು ಯೋಗ, ಪೂಜಾ ಕುಣಿತ, ಡೊಳ್ಳು ಕುಣಿತ, ಭರತನಾಟ್ಯ, ಯಕ್ಷಗಾನ ಸೇರಿದಂತೆ ಇನ್ನು ಹಲವಾರು ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲಿದ್ದಾರೆ.ಅದರಲ್ಲೂ 6 ಮಂದಿ ಅಂಧ ವಿದ್ಯಾರ್ಥಿಗಳ ತಂಡವೊಂದು ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿರುವುದು ವಿಶೇಷ' ಎಂದು ವಿವರಿಸಿದರು. ರಾಜ್ಯ ಸೇರದಂತೆ ವಿವಿಧ ದೇಶಗಳಿಂದ 120 ರಿಂದ 150 ಮಂದಿ ಕಲಾವಿದರು ಈ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು,  ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)