ಸೋಮವಾರ, ಮೇ 23, 2022
30 °C

7ಸಾವಿರ ಎಕರೆ ಜಮೀನು ಒತ್ತುವರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನಲ್ಲಿ ಸುಮಾರು 7 ಸಾವಿರ ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಲಾಗಿದೆ ಎಂದು ತಹಶೀಲ್ದಾರ್ ತಿಪ್ಪೇಸ್ವಾಮಿ ತಿಳಿಸಿದರು. ಹಿರಿಯೂರು ತಾಲ್ಲೂಕಿನ ತಾಳವಟ್ಟಿಯಲ್ಲಿ ನಡೆದ ಹೋಬಳಿಮಟ್ಟದ ಜನಸ್ಪಂದನ ಸಭೆಯಲ್ಲಿ ಮಾತನಾಡಿದ ಅವರು, 7 ಸಾವಿರ ಎಕರೆ ಪ್ರದೇಶವನ್ನು ಒತ್ತುವರಿ ಮಾಡಿರುವ 3,500 ಮಂದಿಯನ್ನು ಗುರುತಿಸಲಾಗಿದ್ದು, ತೆರವಿಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ತಾಳವಟ್ಟಿ ಗ್ರಾಮದಲ್ಲಿ ಗ್ರಾಮ ಠಾಣಾದಲ್ಲಿ ಬಣವೆಗಳನ್ನು ಹಾಕಿದ್ದು, ಇದರಿಂದ ನಿವೇಶನ ರಹಿತರಿಗೆ ಹಾಗೂ ವಸತಿ ರಹಿತರಿಗೆ ಮನೆಗಳನ್ನು ನೀಡಲು ಹಾಗೂ ಸಾರ್ವಜನಿಕ ಉಪಯೋಗಕ್ಕೆ ಜಮೀನಿನ ಕೊರತೆಯಾಗಿದೆ. ಸರ್ಕಾರಿ ಜಮೀನುಗಳು ಹಾಗೂ ಗ್ರಾಮ ಠಾಣಾವನ್ನು ಒತ್ತುವರಿ ಮಾಡಿದರೆ ಯಾವುದೇ ನೋಟಿಸ್ ನೀಡದೆ ತೆರವು ಮಾಡಬಹುದು. ಗ್ರಾಮ ಠಾಣಾ ಒತ್ತುವರಿ ತೆರವಿಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.ತಾಲ್ಲೂಕಿನಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ ಹಾಗೂ ಸಾಗುವಳಿ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಪ್ರತಿಯೊಂದು ಗ್ರಾಮಕ್ಕೂ ರುದ್ರಭೂಮಿ ಆವಶ್ಯಕತೆಯಿದೆ. ರುದ್ರಭೂಮಿ ಇಲ್ಲದಿದ್ದರೆ ಗ್ರಾಮದ ಬಳಿಯ ಸರ್ಕಾರಿ ಜಮೀನು ಮಂಜೂರು ಮಾಡಲಾಗುವುದು. ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದರೆ ಖಾಸಗಿಯವರಿಂದ ಮಾರುಕಟ್ಟೆ ದರದ ಅನ್ವಯ ಖರೀದಿಸಿ ನೀಡಲಾಗುವುದು. ಗ್ರಾ.ಪಂ. ಪಿಡಿಒಗಳು ಈ ಬಗ್ಗೆ ಪ್ರಸ್ತಾವ ಸಲ್ಲಿಸಬೇಕು ಎಂದರು.ಶಾಲಾ ಆವರಣದಲ್ಲಿ ಹಾಗೂ ಗ್ರಾಮದ ಒಳಗೆ ಕಬ್ಬಿಣದ ವಿದ್ಯುತ್ ಕಂಬಗಳಿದ್ದು, ಮಳೆಗಾಲದಲ್ಲಿ ಇದರಿಂದ ತೊಂದರೆಯಾಗುವುದರಿಂದ ತೆರವುಗೊಳಿಸಲು ಮನವಿ ಮಾಡಿದ್ದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರು ನೀಡಿದರು. ತಾ.ಪಂ. ಸದಸ್ಯೆ ಮಮತಾ, ಗ್ರಾ.ಪಂ. ಅಧ್ಯಕ್ಷ ಎಸ್.ಕೆ. ಪುರುಷೋತ್ತಮ, ಉಪಾಧ್ಯಕ್ಷ ನಾಗರಾಜ್, ಬಿಇಒ ರೇವಣಸಿದ್ದಪ್ಪ ಮತ್ತಿತರರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.